ಮಧ್ಯಪ್ರದೇಶ: ಶೌಚಾಲಯವನ್ನು ಅಡುಗೆ ಕೋಣೆ, ಅಂಗಡಿಯಾಗಿ ಪರಿವರ್ತಿಸಿದರು !

Update: 2017-09-03 17:38 GMT

ಭೋಪಾಲ, ಸೆ. 3: ಶೌಚಾಲಯವನ್ನು ಅಡುಗೆ ಕೋಣೆ, ಅಂಗಡಿಯಾಗಿ ಪರಿವರ್ತಿಸಿದ ಪ್ರಕರಣ ಮಧ್ಯಪ್ರದೇಶದಲ್ಲಿ ಮತ್ತೊಮ್ಮೆ ಬೆಳಕಿಗೆ ಬಂದಿದೆ.

ಬುಂಧೇಲಖಂಡದ ಛಾತರ್‌ಪುರ ಜಿಲ್ಲೆಯಲ್ಲಿ 7 ತಿಂಗಳ ಹಿಂದೆ ‘ಸ್ವಚ್ಛ ಭಾರತ’ ಅಭಿಯಾನದ ಅಡಿಯಲ್ಲಿ ನಿರ್ಮಿಸಲಾದ ಶೌಚಾಲಯವನ್ನು ಅಡುಗೆ ಕೋಣೆಯಾಗಿ ಪರಿವರ್ತಿಸಿರುವುದು ಬೆಳಕಿಗೆ ಬಂದಿತ್ತು. ಈಗ ಇದೇ ರೀತಿ ಶಿವಪುರಿ ಜಿಲ್ಲೆಯಲ್ಲಿ ಶೌಚಾಲಯವನ್ನು ಅಡುಗೆಕೋಣೆ ಯಾಗಿ ಪರಿವರ್ತಿಸಿರುವುದು ಬಹಿರಂಗಗೊಂಡಿದೆ.

ಜನರು ಶೌಚಾಲಯವನ್ನು ಬಳಸುತ್ತಿದ್ದಾರೋ ಇಲ್ಲವೋ ಎಂಬುದನ್ನು ಪರಿಶೀಲಿಸಲು ಜನ್ಪಾದದ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ಮಹೇಂದ್ರ ಜೈನ್ ಹಾಗೂ ಇತರ ಅಧಿಕಾರಿಗಳು ಪರಿಶೀಲನೆಗಾಗಿ ಕೆಲವು ಗ್ರಾಮಗಳಿಗೆ ಭೇಟಿ ನೀಡಿದ್ದರು. ಈ ಸಂದರ್ಭ ಕುಂಡಾಯ್ ಗ್ರಾಮದ ಲಖನ್ ಪ್ರಜಾಪತಿಯ ಒಂದು ಮನೆಯ ಶೌಚಾಲಯದಿಂದ ಹೊಗೆ ಬರುವುದು ಕಾಣಿಸಿತು.

 ಅವರು ಶೌಚಾಲಯದ ಒಳಗೆ ಪ್ರವೇಶಿಸಿದಾಗ ಅಲ್ಲೊಬ್ಬರು ಮಹಿಳೆ ಒಲೆ ಹಾಕಿ ಅಡುಗೆ ಮಾಡುತ್ತಿದ್ದರು. ಅಧಿಕಾರಿಗಳು ಆ ಮಹಿಳೆಯಲ್ಲಿ, ಶೌಚಾಲಯವನ್ನು ಅಡುಗೆ ಕೋಣೆಯಾಗಿ ಯಾಕೆ ಬಳಸುತ್ತೀರಿ ಎಂದು ಪ್ರಶ್ನಿಸಿದಾಗ ಆಕೆ, ಹೊರಭಾಗದಲ್ಲಿ ಮಳೆ ಸುರಿಯುತ್ತಿದೆ. ಆದುದರಿಂದ ಇಲ್ಲಿ ಅಡುಗೆ ಮಾಡುತ್ತಿದ್ದೇವೆ ಎಂದಿದ್ದಾರೆ.

ಶಿವ್‌ಪುರಿಯ ಇನ್ನೊಂದು ಗ್ರಾಮ ರಾಯ್‌ಕುಯಾದಲ್ಲಿ ಬುಡಕಟ್ಟು ಮಹಿಳೆ ಸಂಗೀತ ಶೌಚಾಲಯವನ್ನು ಅಂಗಡಿಯಾಗಿ ಪರಿವರ್ತಿಸಿಕೊಂಡಿದ್ದಾರೆ. ಈ ಬಗ್ಗೆ ಪ್ರಶ್ನಿಸಿದಾಗ ನಮ್ಮ ಶೌಚಾಲಯಕ್ಕೆ ನೀರು ಪೂರೈಕೆ ಇಲ್ಲ. ಆದುದರಿಂದ ಶೌಚಾಲಯವನ್ನು ಅಂಗಡಿಯಾಗಿ ಪರಿವರ್ತಿಸಿದ್ದೇವೆ ಎಂದಿದ್ದಾರೆ.

ಹಲವು ಜನರು ಈಗಲೂ ಶೌಚ ಕಾರ್ಯ ಪೂರೈಸಲು ಬಯಲಿಗೆ ಹೋಗುತ್ತಿದ್ದಾರೆ. ಆದುದರಿಂದ ಶೌಚಾಲಯ ಬಳಸುವ ಬಗ್ಗೆ ಜನರು ತಮ್ಮ ಮನಸ್ಥಿತಿ ಬದಲಾಯಿಸಿಕೊಳ್ಳಬೇಕು, ಎಂದು ಶಿವಪುರಿಯ ಜಿಲ್ಲಾಧಿಕಾರಿ ತರುಣ್ ರತಿ ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News