×
Ad

ನೋಟು ರದ್ಧತಿಯಿಂದ ಎಷ್ಟು ಕಪ್ಪು ಹಣ ಹೊರಬಂತು ಎಂದು ಗೊತ್ತಿಲ್ಲ : ರಿಸರ್ವ್ ಬ್ಯಾಂಕ್

Update: 2017-09-04 21:16 IST

ಹೊಸದಿಲ್ಲಿ, ಸೆ. 4 : ನೋಟು ರದ್ದತಿಯಲ್ಲಿ ರದ್ದಾದ ಬಹುತೇಕ ಎಲ್ಲ ನೋಟುಗಳು ಬ್ಯಾಂಕಿಗೆ ವಾಪಾಸ್ ಬಂದಿವೆ ಎಂದು ಬಹಿರಂಗಪಡಿಸಿದ ಬೆನ್ನಿಗೇ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮತ್ತೊಂದು ಮಹತ್ವದ ವಿಷಯದ ಕುರಿತು ಬೆಳಕು ಚೆಲ್ಲಿದೆ. 500/1,000 ರೂ ನೋಟುಗಳ ರದ್ಧತಿಯಿಂದ ಎಷ್ಟು ಕಪ್ಪು ಹಣ ಬಯಲಿಗೆ ಬಂದಿದೆ ಅಥವಾ ನೋಟು ಬದಲಾವಣೆ ಮೂಲಕ ಎಷ್ಟು ಕಪ್ಪು ಹಣ ಸಕ್ರಮಗೊಂಡಿದೆ ಎಂದು ತನ್ನ ಬಳಿ ಯಾವುದೇ ಮಾಹಿತಿ ಇಲ್ಲ ಎಂದು ಆರ್ ಬಿ ಐ ಸಂಸದೀಯ ಸಮಿತಿಗೆ ತಿಳಿಸಿದೆ. 

15.28 ಲಕ್ಷ ಕೋಟಿ ರೂ. ಮೌಲ್ಯದ ರದ್ದದ ನೋಟುಗಳು ವಾಪಸ್ ಬಂದಿವೆ  ಎಂದು ಈಗಾಗಲೇ ಹೇಳಿರುವ ಆರ್ ಬಿ ಐ ಇದು ಮುಂದೆ ದೃಢೀಕರಣ ಪ್ರಕ್ರಿಯೆಯಲ್ಲಿ ಕಂಡು ಬರುವ ಬದಲಾವಣೆಗಳು ಅನ್ವಯಿಸುತ್ತವೆ  ಎಂದು ತಿಳಿಸಿದೆ. ಮುಂದೆ ನಿಯಮಿತವಾಗಿ ನೋಟು ರದ್ದತಿ ಮಾಡುವ ಕುರಿತು ತನಗೆ ಯಾವುದೇ ಮಾಹಿತಿ ಇಲ್ಲವೆಂದು ಅದು ಸ್ಪಷ್ಟಪಡಿಸಿದೆ. 

ಕಳೆದ ನವೆಂಬರ್ 8 ರಂದು ಹಠಾತ್ತನೆ ಮಾಡಿದ ನೋಟು ರದ್ಧತಿಯಿಂದಾಗಿ ಕಪ್ಪು ಹಣ ನಿಯಂತ್ರಣವಾಗಿದೆ ಎಂದು ಕೇಂದ್ರ ಸರ್ಕಾರ ಹೇಳುತ್ತಿತ್ತು. ಆದರೆ  ರಿಸರ್ವ್ ಬ್ಯಾಂಕ್ ಇತ್ತೀಚಿಗೆ ತನ್ನ ವಾರ್ಷಿಕ ವರದಿಯಲ್ಲಿ ರದ್ದಾದ ಬಹುತೇಕ ಎಲ್ಲ ನೋಟುಗಳು ಬ್ಯಾಂಕಿಗೆ ವಾಪಸ್ ಬಂದಿವೆ ಎಂದು ಹೇಳುವ ಮೂಲಕ ನೋಟು ರದ್ದತಿಯಿಂದ ನಿಜವಾಗಿಯೂ ಲಾಭವಾಗಿದೆಯೇ ಎಂಬ ಬಗ್ಗೆ ಗಂಭೀರ ಚರ್ಚೆ ಹುಟ್ಟು ಹಾಕಿದೆ. ಈ ಪ್ರಕ್ರಿಯೆಯಲ್ಲಿ ಆರ್ ಬಿ ಐ ಕಾರ್ಯ ವೈಖರಿಯ ಕುರಿತೂ ವಿಪಕ್ಷಗಳು ತೀವ್ರ ಟೀಕೆ ಮಾಡಿದ್ದವು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News