ನೋಟು ನಿಷೇಧದಿಂದ ದೀರ್ಘಾವಧಿಯಲ್ಲಿ ದೇಶಕ್ಕೆ ಲಾಭ : ಆರೆಸ್ಸೆಸ್
ವೃಂದಾವನ್, ಸೆ. 4: ಕೇಂದ್ರ ಸರಕಾರದ ನೋಟು ನಿಷೇಧದ ಬೆಂಬಲಕ್ಕೆ ನಿಂತಿರುವ ಆರೆಸ್ಸೆಸ್, ಅಧಿಕ ಮುಖಬೆಲೆಯ ನೋಟು ನಿಷೇಧದಿಂದ ದೇಶಕ್ಕೆ ದೀರ್ಘಾವಧಿಯಲ್ಲಿ ಲಾಭವಾಗಲಿದೆ ಎಂಬುದು ಜನರಿಗೆ ಅರಿವಾಗಿದೆ ಎಂದಿದೆ.
ಆರೆಸ್ಸೆಸ್‌ನ ಉನ್ನತ ನಾಯಕರು ಆರೆಸ್ಸೆಸ್‌ನ ಸಹ ಸಂಘಟನೆಗಳ ಪದಾಧಿಕಾರಿಗಳೊಂದಿಗೆ ನಡೆಸಿದ ರಹಸ್ಯ ಸಭೆ ವೃಂದಾವನದಲ್ಲಿ ಅಂತ್ಯಗೊಂಡಿದ್ದು, ಈ ಸಭೆಯಲ್ಲಿ ಆರೆಸ್ಸೆಸ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಆದಾಗ್ಯೂ, ಈ ಹಿಂದೆ ಆರೆಸ್ಸೆಸ್‌ನ ಕೆಲವು ಸಹ ಸಂಸ್ಥೆಗಳು ಅಧಿಕ ಮುಖ ಬೆಲೆಯ 500, 1000 ರೂ. ನೋಟುಗಳನ್ನು ನಿಷೇಧಿಸಿರುವ ಬಗ್ಗೆ ಕೇಂದ್ರ ಸರಕಾರವನ್ನು ಟೀಕಿಸಿತ್ತು. ಆರೆಸ್ಸೆಸ್ ಪದಾಧಿಕಾರಿಗಳು ಇದೇ ಮೊದಲ ಬಾರಿಯಾಗಿ ನೋಟು ನಿಷೇಧವನ್ನು ಬೆಂಬಲಿಸಿದ್ದಾರೆ.
ಸಭೆಯಲ್ಲಿ ಆರ್ಥಿಕ ನೀತಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಸುದೀರ್ಘ ಚರ್ಚೆ ನಡೆಸಲಾಗಿದೆ ಹಾಗೂ ಆರೆಸ್ಸೆಸ್‌ನ ಸಹ ಸಂಸ್ಥೆಗಳು ತಮ್ಮ ನಿಲುವು ಹಂಚಿಕೊಂಡಿವೆ ಎಂದು ಆರೆಸ್ಸೆಸ್ ಪ್ರಚಾರ ಪ್ರಮುಖ್ ಮನಮೋಹನ್ ವೈದ್ಯ ತಿಳಿಸಿದ್ದಾರೆ.
ನೋಟು ನಿಷೇಧದಿಂದ ಜನರು ಆಘಾತಕ್ಕೆ ಒಳಗಾಗಿದ್ದರು. ಆದರೆ, ಈಗ ಆಘಾತದಿಂದ ಹೊರ ಬಂದಿದ್ದಾರೆ. ನೋಟು ನಿಷೇಧದಿಂದ ದೀರ್ಘಾವಧಿಯಲ್ಲಿ ದೇಶಕ್ಕೆ ಲಾಭವಾಗಲಿದೆ ಎಂಬುದು ಅವರಿಗೆ ಅರಿವಾಗಿದೆ ಎಂದು ವೈದ್ಯ ತಿಳಿಸಿದ್ದಾರೆ.
ದೇಶದ ಸಣ್ಣ ಕೈಗಾರಿಕೆಗಳಿಗೆ ಉತ್ತೇಜನ ಹಾಗೂ ನಿರುದ್ಯೋಗದ ಬಗ್ಗೆ ಕೂಡ ಚರ್ಚೆ ನಡೆಸಲಾಗಿದೆ. ಚೀನಾ ವಸ್ತುಗಳನ್ನು ಬಹಿಷ್ಕರಿಸುವ ಸ್ವದೇಶಿ ಜಾಗರಣ್ ಮಂಚ್ ಚಳವಳಿಗೆ ಆರೆಸ್ಸೆಸ್ ಬೆಂಬಲ ನೀಡಲಿದೆ ಎಂದು ವೈದ್ಯ ಹೇಳಿದ್ದಾರೆ.
ಆರೆಸ್ಸೆಸ್‌ನ ಸಹ ಸಂಸ್ಥೆಗಳ ನಡುವೆ ಉತ್ತಮ ಸಂಯೋಜನೆ ರೂಪಿಸಲು ಈ ಸಭೆ ಆಯೋಜಿಸಲಾಗಿತ್ತು.