×
Ad

ಕೇಜ್ರಿವಾಲ್‌ಗೆ 5 ಸಾವಿರ ರೂ. ದಂಡ ವಿಧಿಸಿದ ಹೈಕೋರ್ಟ್

Update: 2017-09-04 22:44 IST

ಹೊಸದಿಲ್ಲಿ, ಸೆ. 4: ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ದಾಖಲಿಸಿದ ಮಾನನಷ್ಟ ಮೊಕದ್ದಮೆಗೆ ಪ್ರತಿಕ್ರಿಯಿಸಲು ವಿಳಂಬಿಸಿದ ಹಿನ್ನೆಲೆಯಲ್ಲಿ ದಿಲ್ಲಿ ಉಚ್ಚ ನ್ಯಾಯಾಲಯ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ಗೆ ಸೋಮವಾರ 5 ಸಾವಿರ ರೂ. ದಂಡ ವಿಧಿಸಿದೆ.

  ಸೇನಾ ಕಲ್ಯಾಣ ನಿಧಿಗೆ ದಂಡವನ್ನು ಜಮಾ ಮಾಡುವಂತೆ ಜಂಟಿ ರಿಜಿಸ್ಟ್ರಾರ್ ಪಂಕಜ್ ಗುಪ್ತಾ ಹೇಳಿದ್ದಾರೆ ಹಾಗೂ ವಿಚಾರಣೆಯನ್ನು ಅಕ್ಟೋಬರ್ 12ಕ್ಕೆ ಮುಂದೂಡಿದ್ದಾರೆ. ಕೇಜ್ರಿವಾಲ್ ವಕೀಲರು ಬಳಸಿದ ಅವಮಾನಕಾರಿ ಪದ ಬಳಕೆಯನ್ನು ಆಕ್ಷೇಪಿಸಿ ಅರುಣ್ ಜೇಟ್ಲಿ ದಾಖಲಿಸಿದ ಎರಡನೆ ಮಾನನಷ್ಟ ಮೊಕದ್ದಮೆ ಹಿನ್ನೆಲೆಯಲ್ಲಿ ನ್ಯಾಯಾಲಯ ಕೇಜ್ರಿವಾಲ್‌ಗೆ ದಂಡ ವಿಧಿಸಿದೆ.

 ಕೇಜ್ರಿವಾಲ್ ಹಾಗೂ ಆಮ್ ಆದ್ಮಿ ಪಕ್ಷದ ಐವರು ನಾಯಕರ ವಿರುದ್ಧ ದಿಲ್ಲಿ ಹಾಗೂ ಜಿಲ್ಲಾ ಕ್ರಿಕೆಟ್ ಅಸೋಸಿಯೇಶನ್ ದಾಖಲಿಸಿದ ಮಾನನಷ್ಟ ಮೊಕದ್ದಮೆಗಿಂತ ಇದು ಬೇರೆಯಾಗಿದೆ.

  ಮಾನನಷ್ಟ ಮೊಕದ್ದಮೆಗೆ ಲಿಖಿತ ಹೇಳಿಕೆ ನೀಡಲು ಮುಖ್ಯಮಂತ್ರಿಗೆ ನ್ಯಾಯಾಲಯ ಜುಲೈ 26ರಂದು ಎರಡು ವಾರಗಳ ಕಾಲಾವಕಾಶ ನೀಡಿತ್ತು. ಆದರೆ, ಕೇಜ್ರಿವಾಲ್ ಅವರು ಸಮಯ ಮೀರಿ ಪ್ರತಿಕ್ರಿಯೆ ದಾಖಲಿಸಿದ್ದಾರೆ ಎಂದು ಜೇಟ್ಲಿ ಪರ ವಕೀಲ್ ಮಾಣಿಕ್ ದೋಗ್ರಾ ನ್ಯಾಯಾಲಯಕ್ಕೆ ಮಾಹಿತಿ ನೀಡಿದ ಬಳಿಕ ನ್ಯಾಯಾಲಯ ಕೇಜ್ರಿವಾಲ್‌ಗೆ ದಂಡ ವಿಧಿಸಿದೆ.

ಇದು ಮುಖ್ಯಮಂತ್ರಿ ಅವರ ವಿಳಂಬ ಮಾಡುವ ತಂತ್ರ ಎಂದು ಮಾಣಿಕ್ ದೋಗ್ರಾ ಹೇಳಿದರು. ಉಚ್ಚ ನ್ಯಾಯಾಲಯದ ರಿಜಿಸ್ಟ್ರಾರ್ ಎರಡು ಬಾರಿ ನಿರ್ದಿಷ್ಟ ತಾಂತ್ರಿಕ ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಲಿಖಿತ ಹೇಳಿಕೆ ಸಲ್ಲಿಸಲು ಸಾಧ್ಯವಾಗಲಿಲ್ಲ ಎಂಬುದನ್ನು ಮೂಲಾಧಾರವಾಗಿ ಇರಿಸಿ ನ್ಯಾಯಾಲಯ ಕ್ಷಮೆ ನೀಡಬೇಕು ಎಂದು ಕೇಜ್ರಿವಾಲ್ ಪರ ವಕೀಲ ರಿಷಿಕೇಶ್ ಕುಮಾರ್ ಮನವಿ ಮಾಡಿದರು.

ಈ ಪ್ರತಿಪಾದನೆಯನ್ನು ಪರಿಗಣಿಸಿದ ರಿಜಿಸ್ಟ್ರಾರ್ ಮುಖ್ಯಂತ್ರಿ ಅವರಿಂದ ಆಗಿರುವ ವಿಳಂಬವನ್ನು ಮನ್ನಿಸಿದರು ಹಾಗೂ ಅದಕ್ಕಾಗಿ 5,000 ರೂ. ದಂಡ ಪಾವತಿಸುವಂತೆ ನಿರ್ದೇಶಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News