×
Ad

ಅಸ್ವಸ್ಥ ಬುಡಕಟ್ಟು ಮಹಿಳೆಯನ್ನು ಹೊತ್ತು 7 ಕಿ.ಮೀ. ನಡೆದ ಸಿಆರ್‌ಪಿಎಫ್ ಯೋಧರು

Update: 2017-09-04 22:57 IST

ರಾಯ್‌ಪುರ, ಸೆ. 4: ಅನಾರೋಗ್ಯಕ್ಕೀಡಾಗಿದ್ದ ಬುಡಕಟ್ಟು ಮಹಿಳೆಯನ್ನು ಛತ್ತೀಸ್‌ಗಡದ ದಾಂತೆವಾಡ ಜಿಲ್ಲೆಯ ನಕ್ಸಲ್ ಪ್ರಭಾವಿತ ಪ್ರದೇಶದಿಂದ ಸಿಆರ್‌ಪಿಎಫ್ ಯೋಧರು ತಾತ್ಕಾಲಿಕ ಸ್ಟ್ರೆಚರ್ ರೂಪಿಸಿ ಹೊತ್ತೊಯ್ದು ಮಾನವೀಯತೆ ಮೆರೆದಿದ್ದಾರೆ.

  ಕೇತಕಲ್ಯಾನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಾವೋವಾದಿಗಳ ವಿರುದ್ಧ ರವಿವಾರ ಎನ್‌ಕೌಂಟರ್ ನಡೆಸಿ ಹಿಂದಿರುಗುತ್ತಿದ್ದ 195ನೆ ತುಕಡಿಯ ಸಿಆರ್‌ಪಿಎಫ್ ಯೋಧರ ತಂಡ ನಾಯ್ನಿರ್ ಗ್ರಾಮದ ರಸ್ತೆ ಬದಿಯಲ್ಲಿ ಅನಾರೋಗ್ಯಕ್ಕೆ ತುತಾಗಿ ಮಲಗಿದ್ದ 40 ವರ್ಷದ ಮಹಿಳೆಯನ್ನು ಗಮನಿಸಿದರು. ವಿಚಾರಿಸಿದಾಗ ಮಹಿಳೆ ತನ್ನ ಹೆಸರು ಕೋಸಿ ಎಂದು ಹಾಗೂ ತಾನು ತೀವ್ರ ಜ್ವರ ಬಾಧಿತಳಾಗಿರುವ ಬಗ್ಗೆ ತಿಳಿಸಿದರು ಎಂದು ಸಿಆರ್‌ಪಿಎಫ್ ಅಧಿಕಾರಿಗಳು ತಿಳಿಸಿದ್ದಾರೆ.

 ಅವರ ಪತಿ ಹಾಗೂ ಸಂಬಂಧಿಕರು ಸಮೀಪದಲ್ಲಿರಲಿಲ್ಲ. ಎರಡು ತಿಂಗಳ ಮಗು ಸೇರಿದಂತೆ ಆಕೆಯ ಮಕ್ಕಳು ಸಮೀಪದಲ್ಲಿ ಅಳುತ್ತಿದ್ದರು ಎಂದು ಅವರು ತಿಳಿಸಿದ್ದಾರೆ. ಸುತ್ತಮುತ್ತ ಬೆಟ್ಟ ಇದ್ದುದರಿಂದ ಅವರನ್ನು ಹೆಲಿಕಾಪ್ಟರ್ ಮೂಲಕ ಕೊಂಡೊಯ್ಯಲು ಸಾಧ್ಯವಿರಲಿಲ್ಲ. ಆ್ಯಂಬಲೆನ್ಸ್ ವ್ಯವಸ್ಥೆ ಮಾಡಲು ರಸ್ತೆ ಸರಿಯಾಗಿ ಇರಲಿಲ್ಲ. ಆದುದರಿಂದ ಕೋಲನ್ನು ಬಳಸಿ ಸ್ಟ್ರೆಚರ್ ರೂಪಿಸಿ ಮಹಿಳೆ ಹಾಗೂ ಮಗುವನ್ನು ಯೋಧರು 7 ಕಿ.ಮೀ.. ಕೊಂಡೊಯ್ದು ಗಾತಮ್ ಗ್ರಾಮ ತಲುಪಿಸಿದರು. ಅಲ್ಲಿಂದ ಆಕೆಯನ್ನು ಆ್ಯಂಬುಲೆನ್ಸ್ ಮೂಲಕ ಜಿಲ್ಲೆಯ ಕೇತಕಲ್ಯಾನ್‌ನಲ್ಲಿರುವ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತು. ಮಹಿಳೆ ಹಾಗೂ ಅವರು ಮಗು ಈಗ ಆಸ್ಪತ್ರೆಯಲ್ಲಿದ್ದು, ತಜ್ಞರು ನಿಗಾ ವಹಿಸಿದ್ದಾರೆ ಎಂದು ಸಿಆರ್‌ಪಿಎಫ್ ಅಧಿಕಾರಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News