ರಹೀಮ್, ರಹ್ಮಾನ್ ಅರ್ಧಶತಕ

Update: 2017-09-04 18:51 GMT

ಚಿತ್ತಗಾಂಗ್, ಸೆ.4: ಆಸ್ಟ್ರೇಲಿಯ ವಿರುದ್ಧದ ಎರಡನೆ ಕ್ರಿಕೆಟ್ ಟೆಸ್ಟ್‌ನ ಮೊದಲ ದಿನ ಬಾಂಗ್ಲಾದೇಶ ತಂಡ ನಾಯಕ ಮತ್ತು ವಿಕೆಟ್ ಕೀಪರ್ ಮುಶ್ಫಿಕುರ್ರಹೀಮ್ ಅರ್ಧ ಶತಕ ಮತ್ತು ಶಬೀರ್ ರಹ್ಮಾನ್ ಅರ್ಧಶತಕಗಳ ನೆರವಿನಲ್ಲಿ ಸ್ಪರ್ಧಾತ್ಮಕ ಮೊತ್ತ ದಾಖಲಿಸಿದೆ.

  ಝಹೂರ್ ಅಹ್ಮದ್ ಚೌಧರಿ ಸ್ಟೇಡಿಯಂನಲ್ಲಿ ಸೋಮವಾರ ಆರಂಭಗೊಂಡ ಟೆಸ್ಟ್ ನ ಮೊದಲ ದಿನದಾಟದಂತ್ಯಕ್ಕೆ 90 ಓವರ್‌ಗಳಲ್ಲಿ 6 ವಿಕೆಟ್ ನಷ್ಟದಲ್ಲಿ 253 ರನ್ ಗಳಿಸಿತ್ತು.

62 ರನ್ ಗಳಿಸಿರುವ ನಾಯಕ ಮುಶ್ಫಿಕುರ್ರಹೀಮ್ ಮತ್ತು 19 ರನ್ ಗಳಿಸಿರುವ ನಾಸಿರ್ ಹುಸೈನ್ ಕ್ರೀಸ್‌ನಲ್ಲಿದ್ದರು.

  ಟಾಸ್ ಜಯಿಸಿದ ಬಾಂಗ್ಲಾ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತ್ತು. ಆಸ್ಟ್ರೇಲಿಯದ ವೇಗಿ ನಥಾನ್ ಲಿಯೋನ್ ನಾಲ್ವರು ದಾಂಡಿಗರನ್ನು ಎಲ್‌ಬಿಡಬ್ಲು ಬಲೆಗೆ ಬೀಳಿಸುವ ಮೂಲಕ ಬಾಂಗ್ಲಾಕ್ಕೆ ಆಘಾತ ನೀಡಿದರು. ಆರಂಭಿಕ ದಾಂಡಿಗರಾದ ತಮೀಮ್ ಇಕ್ಬಾಲ್ (9), ಇಮ್ರುಲ್ ಕೈಸ್(4), ಸೌಮ್ಯ ಸರ್ಕಾರ್(33), ಮುಮಿನುಲ್ ಹಕ್(31) ಅವರು ಲಿಯೋನ್‌ಗೆ ವಿಕೆಟ್ ಒಪ್ಪಿಸಿದರು. ಆಗ ಬಾಂಗ್ಲಾದ ಸ್ಕೋರ್ 34 ಓವರ್‌ಗಳಲ್ಲಿ 4 ವಿಕೆಟ್ ನಷ್ಟದಲ್ಲಿ 85 ಆಗಿತ್ತು.

    ಮೊದಲ ಟೆಸ್ಟ್‌ನ ಗೆಲುವಿನ ರೂವಾರಿ ಶಾಕಿಬ್ ಅಲ್ ಹಸನ್ 24 ರನ್ ಗಳಿಸಿ ಅಗರ್ ಎಸೆತದಲ್ಲಿ ವಿಕೆಟ್ ಕೀಪರ್ ಮ್ಯಾಥ್ಯೂ ವೇಡ್‌ಗೆ ಕ್ಯಾಚ್ ನೀಡಿದರು. 46.4 ಓವರ್‌ಗಳಲ್ಲಿ 117 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿ ಸಿಲುಕಿದ್ದ ಬಾಂಗ್ಲಾದ ಬ್ಯಾಟಿಂಗ್‌ನ್ನು ಮುನ್ನಡೆಸಿದ ನಾಯಕ ಮುಶ್ಫಿಕುರ್ರಹೀಮ್ ಮತ್ತು ಶಬೀರ್ ರಹ್ಮಾನ್ 105 ರನ್‌ಗಳ ಜೊತೆಯಾಟ ನೀಡಿ ತಂಡದ ಸ್ಕೋರ್‌ನ್ನು 200ರ ಗಡಿ ದಾಟಿಸಿದರು. 66 ರನ್(113ಎ, 6ಬೌ,1ಸಿ) ಗಳಿಸಿದ ರಹ್ಮಾನ್ ಅವರನ್ನು ಲಿಯೋನ್ ಎಸೆತದಲ್ಲಿ ವಿಕೆಟ್ ಕೀಪರ್ ವೇಡ್ ಸ್ಟಂಪ್ ಮಾಡಿ ಪೆವಿಲಿಯನ್‌ಗೆ ಅಟ್ಟಿದರು. ಶಬೀರ್ ರಹ್ಮಾನ್ ತನ್ನ 8ನೆ ಟೆಸ್ಟ್‌ನಲ್ಲಿ 4ನೆ ಅರ್ಧಶತಕ ದಾಖಲಿಸಿದರು. ನಾಯಕ ಮುಶ್ಫಿಕುರ್ರಹೀಮ್ 56ನೆ ಟೆಸ್ಟ್‌ನಲ್ಲಿ 18ನೆ ಅರ್ಧಶತಕ ದಾಖಲಿಸಿ ಬ್ಯಾಟಿಂಗ್‌ನ್ನು ಎರಡನೆ ದಿನಕ್ಕೆ ಕಾಯ್ದಿರಿಸಿದ್ದಾರೆ.

ಆಸ್ಟ್ರೇಲಿಯದ ಲಿಯೋನ್ 77ಕ್ಕೆ 5 ವಿಕೆಟ್ ಮತ್ತು ಅಸ್ಟನ್ ಅಗರ್ 46ಕ್ಕೆ 1 ವಿಕೆಟ್ ಪಡೆದರು.

ಸಂಕ್ಷಿಪ್ತ ಸ್ಕೋರ್

ಬಾಂಗ್ಲಾದೇಶ 90 ಓವರ್‌ಗಳಲ್ಲಿ 253/6

(ಮುಶ್ಫಿಕುರ್ರಹೀಮ್ ಔಟಾಗದೆ 62, ಶಬೀರ್ ರಹ್ಮಾನ್ 66; ಲಿಯೋನ್ 77ಕ್ಕೆ 5).

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News