ಕಾಶ್ಮೀರಿ ಪ್ರತ್ಯೇಕತಾವಾದಿಯ ಮಗಳ ಮದುವೆ ಔತಣದಲ್ಲಿ ಇಡೀ ಕಾಶ್ಮೀರ ಸರ್ಕಾರವೇ ಭಾಗಿ !

Update: 2017-09-05 10:40 GMT

ಶ್ರೀನಗರ,ಸೆ.5: ರಾಜ್ಯದ ಸಮಾಜ ಕಲ್ಯಾಣ ಸಚಿವ ಸಜ್ಜಾದ್ ಲೋನೆ ಅವರ ಹಿರಿಯ ಸೋದರ ಹಾಗೂ ಹಿರಿಯ ಹುರಿಯತ್ ನಾಯಕ ಬಿಲಾಲ್ ಲೋನೆಯ ಪುತ್ರಿಯ ವಿವಾಹದ ಔತಣಕೂಟವು ಕಳೆದ ಗುರುವಾರ ತಾಜ್ ವಿವಿಂತಾದಲ್ಲಿ ನಡೆದಿದ್ದು, ಮುಖ್ಯಮಂತ್ರಿ ಮೆಹಬೂಬ ಮುಫ್ತಿ, ಬಿಜೆಪಿ ಸಚಿವರು ಸೇರಿದಂತೆ ಇಡೀ ಸಂಪುಟ ಮತ್ತು ರಾಜ್ಯದ ಹಿರಿಯ ಅಧಿಕಾರಿಗಳು ಇದರಲ್ಲಿ ಪಾಲ್ಗೊಂಡಿದ್ದರು. ಬಿಲಾಲ್ ಮಿರ್ವೈಝ್ ನೇತೃತ್ವದ ಹುರಿಯತ್ ಕಾನ್‌ಫರೆನ್ಸ್‌ನ ಐವರು ಉನ್ನತ ಕಾರ್ಯಕಾರಿ ಸಮಿತಿ ಸದಸ್ಯರಲ್ಲೋರ್ವರಾಗಿದ್ದಾರೆ. ಅವರ ಪುತ್ರಿಯ ಮದುವೆ ಆ.20ರಂದು ಕಾಶ್ಮೀರಿ ಉದ್ಯಮಿಯ ಜೊತೆಗೆ ದುಬೈನಲ್ಲಿ ನಡೆದಿತ್ತು.

ಆದರೆ ಮುಖ್ಯ ಮದುವೆ ಸಮಾರಂಭ ಆ.19-20ರಂದು ತಾಜ್ ವಿವಿಂತಾ ಹೋಟೆಲ್‌ನಲ್ಲಿ ನಡೆದಿತ್ತು. ಹುರಿಯತ್ ಅಧ್ಯಕ್ಷ ಮಿರ್ವೈಝ್ ಉಮರ್ ಫಾರೂಕ್ ಅಲ್ಲದೆ ಹಿರಿಯ ಹುರಿಯತ್ ನಾಯಕ ಅಬ್ದುಲ್ ಗನಿ ಭಟ್, ಹಲವಾರು ಬಿಜೆಪಿ ಶಾಸಕರೂ ಆ.19ರಂದು ನಡೆದಿದ್ದ ಕೂಟದಲ್ಲಿ ಭಾಗಿಯಾಗಿದ್ದರು.

ಸಜ್ಜಾದ್ ಲೋನೆ ಅವರು ಸೋದರನ ಪುತ್ರಿಯ ಮದುವೆಯ ಅಂಗವಾಗಿ ಔತಣಕೂಟವನ್ನು ಗುರುವಾರ ಏರ್ಪಡಿಸಿದ್ದರು.

ಕಾಶ್ಮೀರದ ಕುರಿತು ನಮ್ಮ ಪಕ್ಷ ಮಾತ್ರ ದೃಢ ನಿಲುವು ತಾಳುತ್ತದೆ ಎಂದು ಹೇಳುವ, ಕಾಶ್ಮೀರಕ್ಕೆ ನೀಡಿರುವ ವಿಶೇಷ ಸ್ಥಾನಮಾನವನ್ನು ರದ್ದು ಪಡಿಸಬೇಕು ಎಂದು ಆಗ್ರಹಿಸುವ, ಕಾಶ್ಮೀರಿ ಪ್ರತ್ಯೇಕತಾವಾದಿಗಳ ಕುರಿತು ಕಾಂಗ್ರೆಸ್ ಮೃದು ಧೋರಣೆ ಅನುಸರಿಸುತ್ತಿದೆ ಎಂದು ದೂರುತ್ತಲೇ ಬಂದಿರುವ ಬಿಜೆಪಿಯ ಈ ನಡೆ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆ, ಟೀಕೆ ವ್ಯಕ್ತವಾಗಿದೆ. ಇಡೀ ದೇಶದಲ್ಲಿ ಒಂದು ಧೋರಣೆ ಅನುಸರಿಸುವ ಬಿಜೆಪಿ ಅಧಿಕಾರಕ್ಕಾಗಿ ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿಗಳ ಜೊತೆ ಊಟ ಮಾಡಲು ಹೇಸುವುದಿಲ್ಲ ಎಂಬ ಆಕ್ರೋಶ ಕೇಳಿ ಬಂದಿದೆ. ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿಗಳ ಬಗ್ಗೆ ಮೃದು ಧೋರಣೆ ಹೊಂದಿರುವ, ಸಂಸತ್ ದಾಳಿ ಪ್ರಕರಣದ ಅಪರಾಧಿ ಆಫ್ಜಲ್ ಗುರುಗೆ ಮರಣ ದಂಡನೆ ನೀಡಿದ್ದನ್ನು ವಿರೋಧಿಸಿದ್ದ ಪಿಡಿಪಿ ಜೊತೆ ಬಿಜೆಪಿ ಸೇರಿ ಸರ್ಕಾರ ರಚಿಸಿದಾಗಲೇ ಅದರ ವಿರುದ್ಧ ವ್ಯಾಪಕ ಅಸಮಾಧಾನ ಕೇಳಿ ಬಂದಿತ್ತು. ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಪ್ರತ್ಯೇಕತಾವಾದಿಗಳ ಮನೆಯ ಮದುವೆ ಔತಣಕ್ಕೂ ಬಿಜೆಪಿಯ ಇಡೀ ಸಚಿವರ ದಂಡೇ ಹೋಗಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News