×
Ad

ದಿಲ್ಲಿ ಜಾಮಾ ಮಸೀದಿ ಕುರಿತು ಸುಳ್ಳುಸುದ್ದಿ ಪ್ರಸಾರ ಮಾಡಿ ಮತ್ತೆ ಡಿಲೀಟ್ ಮಾಡಿದ ರಿಪಬ್ಲಿಕ್ ಟಿವಿ !

Update: 2017-09-05 16:51 IST

ಹೊಸದಿಲ್ಲಿ, ಸೆ. 5 : ಐದು ವರ್ಷಗಳ ಹಿಂದಿನ ಸುದ್ದಿಯೊಂದನ್ನು ತಾಜಾ ಸುದ್ದಿಯೆಂದು ರಿಪಬ್ಲಿಕ್ ಟಿವಿ ಸುಳ್ಳು ಸುದ್ದಿ ಪ್ರಸಾರ ಮಾಡಿ ಮುಖಭಂಗಕ್ಕೀಡಾದ ಮತ್ತೊಂದು ಪ್ರಸಂಗ ಬಹಿರಂಗವಾಗಿದೆ. ಸಾಮಾನ್ಯವಾಗಿ ಕೆಲವು ವೆಬ್ ಸೈಟ್ ಗಳು ಮುಸ್ಲಿಮರು, ಇಸ್ಲಾಂ ಧರ್ಮ ಇತ್ಯಾದಿಗಳ ಕುರಿತು ಹಸಿ ಹಸಿ ಸುಳ್ಳುಗಳನ್ನೇ ಈಗಷ್ಟೇ ನಡೆದ ಬಿಸಿ ಬಿಸಿ ಸುದ್ದಿ ಎಂಬಂತೆ ಪ್ರಕಟಿಸಿ ಓದುಗರನ್ನು ದಾರಿ ತಪ್ಪಿಸುತ್ತವೆ. ಆದರೆ ಇತ್ತೀಚಿಗೆ ಪ್ರಾರಂಭವಾಗಿರುವ ರಿಪಬ್ಲಿಕ್ ಟಿವಿ ಕೂಡ ಇದೇ ವೆಬ್ ಸೈಟ್ ಗಳನ್ನು ಅನುಸರಿಸಿ ಇದೀಗ ನಗೆಪಾಟಲಿಗೀಡಾಗಿದೆ. 

ದೆಹಲಿಯ ಖ್ಯಾತ ಜಾಮಾ ಮಸೀದಿಯ ಇಮಾಮ್ ಬುಖಾರಿ ಹಾಗು ವಕ್ಫ್ ಬೋರ್ಡ್ ನಡುವಿನ ವಿವಾದದಿಂದಾಗಿ ದೆಹಲಿಯ ವಿದ್ಯುತ್ ಸರಬರಾಜು ಕಂಪೆನಿಗೆ ನಾಲ್ಕು ಕೋಟಿಗೂ ಅಧಿಕ ಮೊತ್ತದ  ಬಿಲ್ ಪಾವತಿಸದೇ ಬಾಕಿ ಇಟ್ಟಿದೆ ಎಂದು ಐದು ವರ್ಷಗಳ ಹಿಂದೆ ಸುದ್ದಿಯಾಗಿತ್ತು. ಅದನ್ನು ಬಳಿಕ ಬಗೆಹರಿಸಲಾಗಿತ್ತು. ಈ ಬಗ್ಗೆ ಬಿ ಎಸ್ ಇ ಎಸ್ ಕೂಡ ಹಲವು ಟ್ವೀಟ್ ಗಳ ಮೂಲಕ ವಿಷಯ ಬಗೆಹರಿದಿದೆ ಎಂದು ಸ್ಪಷ್ಟಪಡಿಸಿತ್ತು. 

ಆದರೆ ಅದ್ಯಾವುದನ್ನೂ ಲೆಕ್ಕಕ್ಕೆ ತೆಗೆದುಕೊಳ್ಳದ  ಫೇಕ್ ನ್ಯೂಸ್ ವೆಬ್ ಸೈಟ್ ಅಥವಾ ಟ್ವಿಟರ್ ಹ್ಯಾಂಡಲ್ ನೋಡಿಕೊಂಡ ರಿಪಬ್ಲಿಕ್ ಟಿವಿ ಕೂಡಲೇ ತನ್ನ ವರದಿಗಾರ  ಪಡೆಯನ್ನು ಮಸೀದಿಗೆ ದೌಡಾಯಿಸಿದೆ. 

ಅಲ್ಲಿಗೆ ತೆರಳಿದ ವರದಿಗಾರ ಹಿಂದೆ ಮುಂದೆ ಯೋಚಿಸದೆ , ವಿಷಯದ ಬಗ್ಗೆ ಅಲ್ಲಿರುವ ಯಾರೊಂದಿಗೂ ಯಾವುದೇ ಪ್ರಶ್ನೆ ಕೇಳದೆ ನೇರವಾಗಿ " ಜಾಮಾ ಮಸೀದಿಗೆ ಬಿ ಎಸ್ ಇ ಎಸ್ ( ವಿದ್ಯುತ್ ಸರಬರಾಜು ಕಂಪೆನಿ ) ಈವರೆಗಿನ ಅತ್ಯಂತ ದೊಡ್ಡ ಹೊಡೆತ ನೀಡಿದೆ " ಎಂದೇ " ದಾಳಿ " ಪ್ರಾರಂಭಿಸಿಬಿಟ್ಟರು. ರಾತ್ರಿ ಮಸೀದಿಗೆ ತೆರಳಿದ್ದ ಈ ವರದಿಗಾರ ಅಲ್ಲಿ ಕತ್ತಲು ಇದ್ದದನ್ನೇ " ಇಲ್ಲಿಗೆ ವಿದ್ಯುತ್ ಸಂಪರ್ಕವನ್ನೇ ಕಡಿತಗೊಳಿಸಲಾಗಿದೆ " ಎಂದು ಘೋಷಿಸಿಬಿಟ್ಟ . ಇಮಾಮ್ ಬುಖಾರಿಯ ಮನೆ ಆವರಣಕ್ಕೆ ಹೋದ ವರದಿಗಾರ ಅಲ್ಲಿದ್ದ ದುಬಾರಿ ಕಾರುಗಳನ್ನೆಲ್ಲಾ ತೋರಿಸುತ್ತ " ಅವು ಯಾವ ಕಂಪೆನಿಯ ಕಾರುಗಳು, ಎಷ್ಟು ದುಬಾರಿ ? ಇಷ್ಟೆಲ್ಲಾ ಇದ್ದು ವಿದ್ಯುತ್ ಬಿಲ್ ಕಟ್ಟಿಲ್ಲ " ಎಂದು ಭಾಷಣವನ್ನೇ ಬಿಗಿದ. ಆದರೆ ಬುಖಾರಿಯ ಮನೆಯವರನ್ನು ಮಾತನಾಡಿಸುವ , ಅವರಲ್ಲಿ ವಿವರಣೆ ಕೇಳುವ ಗೋಜಿಗೇ ಹೋಗಲಿಲ್ಲ.  ಅಲ್ಲೇ ಇರುವ ವಿದ್ಯುತ್ ಸಂಪರ್ಕದಿಂದ ಬೆಳಗುತ್ತಿದ್ದ ಬೋರ್ಡ್ ಅನ್ನು ಆತನೇ ತೋರಿಸಿದರೂ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದರೆ ಆ ಬೋರ್ಡ್ ನಲ್ಲಿ ಹೇಗೆ ವಿದ್ಯುತ್ ಇದೆ ಎಂದು ಯೋಚಿಸುವ ಕಷ್ಟ ತೆಗೆದುಕೊಳ್ಳಲಿಲ್ಲ. ಸಾಮಾನ್ಯವಾಗಿ ಮಸೀದಿಯಲ್ಲಿ ಎಷ್ಟು ಹೊತ್ತಿಗೆ ಲೈಟ್ ಗಳನ್ನು ಆಫ್ ಮಾಡಲಾಗುತ್ತದೆ ಎಂಬ ಸಾಮಾನ್ಯ ಪ್ರಶ್ನೆಯನ್ನೂ ಕೇಳಲಿಲ್ಲ. 

altnews.in ಈ ಬಗ್ಗೆ ಸತ್ಯವನ್ನು ಬಹಿರಂಗಪಡಿಸಿದ ಕೂಡಲೇ ರಿಪಬ್ಲಿಕ್ ಟಿವಿ ತನ್ನ ಟ್ವೀಟ್ ಹಾಗು ವೀಡಿಯೊವನ್ನು ಡಿಲೀಟ್ ಮಾಡಿಬಿಟ್ಟಿತು. ಆದರೆ ಏಕೆ ಡಿಲೀಟ್ ಮಾಡಿದ್ದು ಎಂಬ ಬಗ್ಗೆ ವಿವರಣೆಯಾಗಲಿ , ಸುಳ್ಳು ಸುದ್ದಿ ನೀಡಿದ್ದಕ್ಕೆ ಸ್ಪಷ್ಟೀಕರಣವಾಗಲಿ , ವಿಷಾದವಾಗಲಿ ನೀಡಲಿಲ್ಲ. 

Courtesy : altnews.in

ರಿಪಬ್ಲಿಕ್ ಟಿವಿ ಪ್ರಸಾರ ಮಾಡಿದ ಸುಳ್ಳು ಸುದ್ದಿಯ ವೀಡಿಯೋದ ಕಾಪಿ ಇಲ್ಲಿದೆ : 

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News