ತ.ನಾ.ರಾಜ್ಯಪಾಲರನ್ನು ಭೇಟಿಯಾದ ದಿನಕರನ್: ಮುಖ್ಯಮಂತ್ರಿ ಕೆ.ಪಳನಿಸ್ವಾಮಿ ವಜಾಕ್ಕೆ ಆಗ್ರಹ

Update: 2017-09-07 12:29 GMT

ಚೆನ್ನೈ,ಸೆ.7: ಮೂಲೆಗುಂಪಾಗಿರುವ ಎಐಎಡಿಎಂಕೆ ಪಕ್ಷದ ಉಪ ಪ್ರಧಾನ ಕಾರ್ಯದರ್ಶಿ ಟಿಟಿವಿ ದಿನಕರನ್ ಅವರು ಗುರುವಾರ ತಮಿಳುನಾಡು ರಾಜ್ಯಪಾಲ ಸಿ.ವಿದ್ಯಾಸಾಗರ ರಾವ್ ಅವರನ್ನು ಭೇಟಿಯಾಗಿ ಮುಖ್ಯಮಂತ್ರಿ ಇ.ಕೆ.ಪಳನಿಸ್ವಾಮಿ ಮತ್ತು ಉಪಮುಖ್ಯಮಂತ್ರಿ ಒ.ಪನ್ನೀರಸೆಲ್ವಂ ಅವರನ್ನು ವಜಾಗೊಳಿಸುವಂತೆ ಆಗ್ರಹಿಸಿದರು. ಇದೇ ವೇಳೆ ಸರಕಾರವು ಉರುಳುವುದನ್ನು ತಾನು ಬಯಸಿಲ್ಲ ಎಂದು ಅವರು ಸುಳಿವು ನೀಡಿದರು.

ತನಗೆ ನಿಷ್ಠರಾಗಿರುವ 19 ಶಾಸಕರು ಕಳೆದ ತಿಂಗಳು ಮುಖ್ಯಮಂತ್ರಿಗಳಲ್ಲಿ ಅವಿಶ್ವಾಸ ವ್ಯಕ್ತಪಡಿಸಿದ ಬಳಿಕ ಇದೇ ಮೊದಲ ಬಾರಿಗೆ ರಾಜ್ಯಪಾಲರನ್ನು ಭೇಟಿಯಾದ ದಿನಕರನ್, ಶಾಸಕರನ್ನು ಮರಳಿ ತನ್ನತ್ತ ಸೆಳೆದುಕೊಳ್ಳಲು ಸರಕಾರವು ತನ್ನ ಬಣದ ಮೇಲೆ ಒತ್ತಡ ಹೇರುತ್ತಿದೆ ಎಂದು ದೂರಿಕೊಂಡರು.

ರಾಜ್ಯಪಾಲರ ಭೇಟಿಯ ಬಳಿಕ ತನ್ನ ನಿವಾಸದ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಳನಿಸ್ವಾಮಿಯವರು ಬಹುಮತವನ್ನು ಕಳೆದುಕೊಂಡಿದ್ದಾರೆ ಎನ್ನುವುದು ಸ್ಪಷ್ಟವಾಗಿದೆ. ಆದ್ದರಿಂದ ಬಹುಮತವನ್ನು ಸಾಬೀತು ಮಾಡುವಂತೆ ರಾಜ್ಯಪಾಲರು ಅವರಿಗೆ ಸೂಚಿಸಬೇಕು ಎಂದು ಹೇಳಿದರು.

ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳ ಬದಲಾವಣೆ ನಮ್ಮ ಉದ್ದೇಶವಾಗಿದೆ ಎಂದರು.

ತಾನು ಪ್ರತಿಯೊಂದನ್ನೂ ಗಮನಿಸುತ್ತಿದ್ದೇನೆ. ಶೀಘ್ರವೇ ಒಳ್ಳೆಯ ನಿರ್ಧಾರವೊಂದನ್ನು ಕೈಗೊಳ್ಳುತ್ತೇನೆ ಮತ್ತು ತನ್ನ ಕರ್ತವ್ಯವನ್ನು ನಿರ್ವಹಿಸುತ್ತೇನೆ ಎಂದು ರಾಜ್ಯಪಾಲರು ತನ್ನ ನೇತೃತ್ವದ ನಿಯೋಗಕ್ಕೆ ಭರವಸೆ ನೀಡಿದ್ದಾರೆ ಎಂದು ದಿನಕರನ್ ತಿಳಿಸಿದರು.

ಆ.19ರಂದು ರಾಜ್ಯಪಾಲರನ್ನು ಭೇಟಿಯಾಗಿದ್ದ ದಿನಕರನ್ ಬಣದ 19 ಶಾಸಕರು , ತಾವು ಪಳನಿಸ್ವಾಮಿಯವರಲ್ಲಿ ವಿಶ್ವಾಸವನ್ನು ಕಳೆದುಕೊಂಡಿದ್ದೇವೆ, ಹೀಗಾಗಿ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ತೆಗೆಯಬೇಕು ಎಂದು ಕೋರಿಕೊಂಡಿದ್ದರು. ಅಲ್ಲಿಂದೀಚಿಗೆ ಭಿನ್ನಮತೀಯ ಶಾಸಕರ ಸಂಖ್ಯೆ 21ಕ್ಕೇರಿದೆ.

234 ಸದಸ್ಯಬಲದ ವಿಧಾನಸಭೆಯಲ್ಲಿ ಎಐಎಡಿಎಂಕೆ ಸ್ಪೀಕರ್ ಸೇರಿದಂತೆ 135 ಶಾಸಕರನ್ನು ಹೊಂದಿದೆ.

ಡಿಎಂಕೆಯ 89, ಕಾಂಗ್ರೆಸ್‌ನ 8 ಮತ್ತು ಐಯುಎಂಎಲ್‌ನ ಓರ್ವ ಶಾಸಕ ಸೇರಿದಂತೆ ಪ್ರತಿಪಕ್ಷವು ಒಟ್ಟು 98 ಸದಸ್ಯರನ್ನು ಹೊಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News