ಸರಣಿ ಸ್ಫೋಟ ಸಂಚಿನ ಪ್ರಧಾನ ರೂವಾರಿಗಳಾದ ದಾವೂದ್ , ಮೆಮೊನ್ ಇನ್ನೂ ಭೂಗತ

Update: 2017-09-07 13:56 GMT

ಮುಂಬೈ, ಸೆ.7: ಮುಂಬೈ ಬಾಂಬ್ ಸ್ಫೋಟ ಪ್ರಕರಣದಲ್ಲಿ ಪ್ರಧಾನ ಆರೋಪಿ ದಾವೂದ್ ಇಬ್ರಾಹಿಂ , ಈತನ ಸಹಚರರಾದ ಟೈಗರ್ ಮೆಮೊನ್, ಮುಹಮ್ಮದ್ ಅಹ್ಮದ್ ಉಮರ್ ದೊಸ ಮತ್ತು ಜಾವೇದ್ ಚಿಕ್ನ ಸೇರಿದಂತೆ ಪ್ರಕರಣದಲ್ಲಿ ಆರೋಪಿಗಳಾಗಿರುವ 35 ಪಾತಕಿಗಳು ಇನ್ನೂ ತಲೆತಪ್ಪಿಸಿಕೊಂಡಿದ್ದು ಇವರ ಬಂಧನಕ್ಕಾಗಿ ಪ್ರಯತ್ನ ಮುಂದುವರಿದಿದೆ.

ದಾವೂದ್ ಇಬ್ರಾಹಿಂ: ಪೊಲೀಸ್ ಕಾನ್‌ಸ್ಟೇಬಲ್ ಪುತ್ರನಾಗಿರುವ ದಾವೂದ್, ಮುಂಬೈಯ ಭೂಗತ ಜಗತ್ತಿನ ‘ಡಾನ್’ ಆಗಿ ಬೆಳೆದ. ವಿರೋಧಿ ಮಾಫಿಯಾ ಬಣಗಳನ್ನು ಮಟ್ಟಹಾಕಿದ ದಾವೂದ್ 1984ರಲ್ಲಿ ಭಾರತ ಬಿಟ್ಟು ವಿದೇಶಕ್ಕೆ ತೆರಳಿದ್ದು ಈಗ ಪಾಕಿಸ್ತಾನದ ಕರಾಚಿಯಲ್ಲಿದ್ದಾನೆ ಎನ್ನಲಾಗಿದೆ. 1993ರ ಮುಂಬೈ ಬಾಂಬ್‌ಸ್ಫೋಟ ಪ್ರಕರಣದ ಪ್ರಧಾನ ಆರೋಪಿ ದಾವೂದ್ ಎಂದು ನ್ಯಾಯಾಲಯಕ್ಕೆ ಸಲ್ಲಿಸಲಾಗಿರುವ ಆರೋಪಪಟ್ಟಿಯಲ್ಲಿ ಹೆಸರಿಸಲಾಗಿದೆ.

ಟೈಗರ್ ಮೆಮೊನ್: ಕಾನ್ವೆಂಟ್ ಶಿಕ್ಷಣ ಪಡೆದಿದ್ದ ಇಬ್ರಾಹಿಂ ಅಬ್ದುಲ್ ರಝಾಕ್ ಮೆಮೊನ್ ಅಲಿಯಾಸ್ ಟೈಗರ್ ಮೆಮೊನ್, ಹಣದ ಹಿಂದೆ ಬಿದ್ದು ಭೂಗತ ಜಗತ್ತಿನ ಸಂಪರ್ಕಕ್ಕೆ ಬಂದಿದ್ದ. 1992ರ ಹಿಂಸಾಚಾರದಲ್ಲಿ ಈತನ ಕುಟುಂಬದವರಿಗೆ ಭಾರೀ ಸಮಸ್ಯೆಯಾಗಿದ್ದು , ಇದಕ್ಕಾಗಿ ಪ್ರತೀಕಾರ ತೀರಿಸಬೇಕು ಎಂದು ಪಣತೊಟ್ಟಿದ್ದ. ದುಬೈ ಮೂಲಕ ಪಾಕಿಸ್ತಾನಕ್ಕೆ ತೆರಳಿದ್ದ ಈತ ಆರ್‌ಡಿಎಕ್ಸ್ ಸ್ಫೋಟಕವನ್ನು ಮಹಾರಾಷ್ಟ್ರ ಕಡಲತೀರಕ್ಕೆ ತಲುಪಿಸುವಲ್ಲಿ ಪ್ರಧಾನ ಪಾತ್ರ ನಿರ್ವಹಿಸಿದ್ದ. ಸರಣಿ ಸ್ಫೋಟ ಸಂಭವಿಸಿದ ಬಳಿಕ ಈತನ ಪತ್ತೆಗೆ ನಡೆಸಿದ ಪ್ರಯತ್ನವೆಲ್ಲಾ ವಿಫಲವಾಗಿದೆ.

ಮುಹಮ್ಮದ್ ಉಮರ್ ಅಹ್ಮದ್ ದೊಸ್ಸ: ಮುಸ್ತಫಾ ದೊಸ್ಸನ ಸೋದರ. ಮುಂಬೈ ಸರಣಿ ಸ್ಫೋಟದ ಸಂಚು ಹೂಡಲು ದುಬೈಯಲ್ಲಿ ಹಲವು ಸಭೆಗಳನ್ನು ಈತ ಆಯೋಜಿಸಿದ್ದ ಎನ್ನಲಾಗಿದೆ. ವಿಶ್ವದ ಪ್ರಮುಖ ಮೂವರು ಹವಾಲಾ ವ್ಯವಹಾರ ನಡೆಸುವವರಲ್ಲಿ ದೊಸ್ಸ ಕೂಡಾ ಒಬ್ಬನಾಗಿದ್ದು ದುಬೈಯಲ್ಲಿ ಹಲವು ಚಿನ್ನಾಭರಣ ಅಂಗಡಿಗಳನ್ನು ಹೊಂದಿದ್ದಾನೆ ಎಂದು ಮೂಲಗಳು ತಿಳಿಸಿವೆ.

 ಜಾವೆದ್ ಚಿಕ್ನ: 1992ರಲ್ಲಿ ಮುಂಬೈಯಲ್ಲಿ ನಡೆದಿದ್ದ ಹಿಂಸಾಚಾರ ಸಂದರ್ಭ ಜಾವೆದ್ ದಾವೂದ್ ಟೈಲರ್ ಅಲಿಯಾಸ್ ಜಾವೆದ್ ಚಿಕ್ನನಿಗೆ ಗುಂಡೇಟು ತಗುಲಿತ್ತು. ಈತ ಕೂಡಾ 1993ರ ಮುಂಬೈ ಸರಣಿ ಬಾಂಬ್ ಸ್ಫೋಟದ ತಲೆತಪ್ಪಿಸಿಕೊಂಡಿರುವ ಆರೋಪಿ. ಸ್ಫುರದ್ರೂಪಿಯಾಗಿದ್ದ ಜಾವೆದ್‌ಗೆ ‘ಚಿಕ್ನ’ ಎಂಬ ಅಡ್ಡಹೆಸರಿದೆ. ಶಸ್ತ್ರಾಸ್ತ್ರ ಹಾಗೂ ಬಾಂಬ್‌ಗಳನ್ನು ವಾಹನಕ್ಕೆ ತುಂಬಿಸುವ ಹಾಗೂ ಬಾಂಬ್‌ಗಳನ್ನು ನಿಗದಿತ ಸ್ಥಳದಲ್ಲಿ ಇಡುವ ಕಾರ್ಯದ ಉಸ್ತುವಾರಿಯನ್ನು ಈತ ವಹಿಸಿಕೊಂಡಿದ್ದ. ಸರಣಿ ಸ್ಫೋಟದ ಬಳಿಕ ಈತ ದುಬೈಗೆ ಪಲಾಯನ ಮಾಡಿದ್ದು ಈಗ ಪಾಕಿಸ್ತಾನದಲ್ಲಿ ಇರುವನೆಂದು ನಂಬಲಾಗಿದೆ.

ದಾವೂದ್ ಫನ್ಸೆ: ಟೈಗರ್ ಮೆಮೊನ್‌ನ ಏಜೆಂಟ್ ಆಗಿದ್ದ ದಾವೂದ್ ಫನ್ಸೆ ದಾವೂದ್‌ನನ್ನು ದುಬೈಯಲ್ಲಿ ಭೇಟಿಯಾದ ಬಳಿಕ ಸಂಚಿನಲ್ಲಿ ಪಾಲ್ಗೊಳ್ಳಲು ಒಪ್ಪಿದ್ದ. ಮಹಾರಾಷ್ಟ್ರದ ಕಡಲ ತೀರದಲ್ಲಿ ಬೋಟ್‌ಗಳಲ್ಲಿದ್ದ ಶಸ್ತ್ರಾಸ್ತ್ರ, ಸ್ಫೋಟಕಗಳನ್ನು ಮುಂಬೈಗೆ ತಲುಪಿಸುವಲ್ಲಿ ಈತನ ಸಹಚರರು ನೆರವಾಗಿದ್ದರು.

ಶರೀಫ್ ಅಬ್ದುಲ್ ಗಫೂರ್ ಪಾರ್ಕರ್: ಟೈಗರ್ ಮೆಮೊನ್ ನಡೆಸುತ್ತಿದ್ದ ಸ್ಮಗ್ಲಿಂಗ್ ವ್ಯವಹಾರದಲ್ಲಿ ಭಾಗಿಯಾಗಿದ್ದ ಪಾರ್ಕರ್, ಶಸ್ತ್ರಾಸ್ತ್ರ ಮತ್ತು ಸ್ಪೋಟಕಗಳನ್ನು ಸಾಗಿಸುವಲ್ಲಿ ನೆರವಾಗಿದ್ದ. ಈತನ ಮಗ ಕೂಡಾ ಇದೇ ಸಂಚಿನಲ್ಲಿ ಭಾಗಿಯಾಗಿದ್ದ ಎಂಬ ಆರೋಪವಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News