ತುಳಿಸಿಕೊಂಡ ದಲಿತರ ಹೋರಾಟ

Update: 2017-09-07 19:10 GMT

ಮಹಾಡ್‌ನಲ್ಲಾದ ಚವ್‌ದಾರ್ ಕೆರೆಯ ವಿಷಯದಲ್ಲಿ ಸತ್ಯಾಗ್ರಹ ಮಾಡುತ್ತೇವೆಂದು ದಲಿತರು ಹೇಳಿಯೇ ಒಂಬತ್ತು ಹತ್ತು ತಿಂಗಳಾದವು. ಆದರೆ ಈ ಕಾಲದಲ್ಲಿ ಮಾಹಾಡ್‌ನ ಬ್ರಾಹ್ಮಣರು ಈ ವಿಷಯದಲ್ಲಿ ಯಾವ ಹೆಜ್ಜೆಯನ್ನಿಡಬೇಕು ಎಂದು ಇನ್ನೂ ಯೋಚಿಸದಿರುವುದು ಯಾರಿಗೂ ಆಶ್ಚರ್ಯವೆನಿಸಬಹುದು. ಬಹುಶಃ ದಲಿತರು ಏನು ಮಾಡಿಯಾರು? ಅವರು ಕೇವಲ ದೊಡ್ಡ ದೊಡ್ಡ ಮಾತನ್ನಾಡುತ್ತಾರೆ ಅಷ್ಟೆ, ಎದುರು ಬಂದರೆ ಒಂದು ಕೈ ನೋಡಿಕೊಳ್ಳೋಣ ಎಂದೇನಾದರೂ ಈ ಜನಕ್ಕೆ ಅನಿಸಿತೋ ಹೇಗೆ? ಈಗ ದಲಿತರು ತಮ್ಮ ನಿರ್ಧಾರವನ್ನು ಸಡಿಲಗೊಳಿಸದೆ ತಯಾರಿಯನ್ನು ಮುಂದುವರಿಸುತ್ತಿರುವುದನ್ನು ನೋಡಿದ ಈ ಜನ ಎಚ್ಚೆತ್ತುಕೊಂಡು ಏನೆಲ್ಲ ಕಪಿಚೇಷ್ಟೆಗಳನ್ನು ಮಾಡುತ್ತಿದ್ದಾರೆ.

ದುರಾಗ್ರಹ ಪೀಡಿತ ಜನರಿಗೆ ಕ್ರಿಮಿನಲ್ ಪ್ರೊಸೀಜರ್ ಕೋಡ್‌ನ 144ನೆಯ ಕಲಮು ಯಾವತ್ತೂ ಕಣ್ಣೆದುರಿಗೆ ಕಾಣುತ್ತಿರುತ್ತದೆ ಹಾಗೂ ಅದನ್ನೇ ಅಧಾರವಾಗಿಟ್ಟುಕೊಂಡು ಕುಲಾಬಾ ಜಿಲ್ಲೆ ಡಿಸ್ಟ್ರಿಕ್ಟ್ ಮೆಜಿಸ್ಟ್ರೇಟ್‌ರವರನ್ನು ಭೇಟಿಯಾಗಿ ದಲಿತರು ಚವ್‌ದಾರ್ ಕೆರೆಗೆ ಬರದಂತೆ ತಡೆಯುವ ತಡೆಯಾಜ್ಞೆಯನ್ನು ಪಡೆಯುವ ಉಪಾಯವನ್ನು ಕಂಡಿದ್ದಾರೆ. ಈ ಅರ್ಜಿಗೆ ಬೆಂಬಲ ಸಿಗಲೆಂದು ಮುನಿಸಿಪಾಲ್ಟಿಯ ಸಭಾಸದರು ಒಂದು ಮಜವಾದ ಕ್ರಮವೊಂದನ್ನು ಕೈಗೊಂಡಿದ್ದಾರೆ. ಮೊದಲು ಈ ಕೆರೆಯನ್ನು ದಲಿತರಿಗಾಗಿಯೂ ತೆರೆಯಿರಿ ಅನ್ನುವ ಮಸೂದೆಯನ್ನು ಮಂಜೂರು ಮಾಡಿದ ಪಾಲಿಕೆಯೇ ಮುಂದೊಂದು ದಿನ ಅದನ್ನು ರದ್ದುಮಾಡಿತು ಹಾಗೂ ಪಾಲಿಕೆಯ ಈ ಪ್ರತಿಗಾಮಿ ಧೋರಣೆಗೆ ಜನತೆಯ ಬೆಂಬಲವಿದೆ ಎಂದು ತೋರಿಸಲು ಮಹಾಡ್ ಪಾಲಿಕೆಯ ಮತದಾರರ ಸಭೆಯನ್ನು ಕರೆದು ಈ ಪ್ರಶ್ನೆಯ ಮೇಲೆ ಅವರ ಅನಿಸಿಕೆಗಳನ್ನು ಕೇಳಲಾಯಿತು.

ಅವುಗಳಲ್ಲಿ 261 ಮತಗಳು ದಲಿತರ ವಿರುದ್ಧ, 7 ಮತಗಳು ಅವರ ಪರವಾಗಿವೆ. ಅವರಲ್ಲಿ 13 ಜನ ಯಾರಿಗೂ ತಮ್ಮ ಮತ ಕೊಡದೆ ತಟಸ್ಥರಾಗಿದ್ದರು. ಪಾಲಿಕೆಯ ಮತದಾರರು ಹಾಗೂ ಪಾಲಿಕೆಯವರು ಸೀದಾ ವಿರೋಧ ಪ್ರಕಟಿಸಿದಾಗ ಅದನ್ನು ಕಲೆಕ್ಟರರಲ್ಲಿಗೆ ಕಳಿಸಲಾಗಿ ಅಲ್ಲಿಂದ ತಡೆಯಾಜ್ಞೆಕೇಳಲಾಗಿದೆ ಅನ್ನುವುದನ್ನು ಕೇಳಿದ್ದೇನೆ. ಈ ತೀರ್ಪಿಗೆ ನಾವು ಕವಡೆಯಷ್ಟೂ ಬೆಲೆ ಕೊಡುವುದಿಲ್ಲ. ಈ ಕೆರೆ ಸಾರ್ವಜನಿಕವಾಗಿದ್ದರೆ ಪಾಲಿಕೆಯೇನು, ಅದರ ಮತದಾರರೇನು ಸರಕಾರ ಕೂಡ ದಲಿತರನ್ನು ತಡೆಯುವುದು ಸಾಧ್ಯವಿಲ್ಲ ಹಾಗೂ ಈ ಕೆರೆ ಖಾಸಗಿಯದ್ದಾಗಿದ್ದರೆ ಪಾಲಿಕೆ ಹಾಗೂ ಮತದಾರರು ಇದರಲ್ಲಿ ಮೂಗು ತೂರಿಸುವ ಅಗತ್ಯವಿಲ್ಲ. ಈ ಕೆರೆ ಯಾರದ್ದಾದರೂ ಸ್ವಂತದ್ದಾಗಿದ್ದರೆ ಆದರ ಮಾಲಕರು ಹಾಗೂ ದಲಿತರು ನೋಡಿಕೊಳ್ಳುತ್ತಾರೆ. ಇವರ ಮಧ್ಯೆ ಪಾಲಿಕೆಯು ವಕೀಲತನ ಮಾಡುವ ಅಗತ್ಯವಿಲ್ಲ.

ಇಂತಹುದೇ ಧೋರಣೆಯನ್ನು ಕುಲಾಬಾ ಜಿಲ್ಲೆಯ ಡಿಸ್ಟ್ರಿಕ್ಟ್ ಮೆಜಿಸ್ಟ್ರೇಟರು ಕೂಡ ಸ್ವೀಕರಿಸಿದಂತಿದೆ. 7.12.27ರಂದು ಡಿ. ಮೆಜಿಸ್ಟ್ರೇಟರು ಜನರೊಂದಿಗೆ ಚರ್ಚಿಸಲು ಬೇಕೆಂದೇ ಮಹಾಡ್‌ಗೆ ಹೋಗಿದ್ದರು ಹಾಗೂ ಬ್ರಾಹ್ಮಣ ಮತ್ತು ದಲಿತ ವರ್ಗದ ಸ್ಥಳೀಯ ನೇತಾರರನ್ನು ಕರೆದು ಮಾತುಕತೆ ಆರಂಭಿಸಿದರು. ಕಡೆಗೆ ಅಲ್ಲಿ ಸೇರಿದ ಬ್ರಾಹ್ಮಣರ ನೇತಾರರನ್ನು ಕುರಿತು, ‘‘ದಲಿತರು ಕೆರೆಯನ್ನು ಮುಟ್ಟದಂತೆ ಸರಕಾರ ಅವರನ್ನು ತಡೆಯಲಾರದು, ತಡೆಯಲೇಬೇಕು ಅನ್ನುವುದು ನಿಮ್ಮಿಚ್ಛೆಯಾಗಿದ್ದರೆ ನೀವು ದಿವಾಣಿ ಕೋರ್ಟಿಗೆ ಹೋಗಿ ದಲಿತರನ್ನು ಕೆರೆಗೆ ಹೋಗದಂತೆ ತಡೆಯುವುದು ನಿಮ್ಮ ಹಕ್ಕು ಅನ್ನುವುದನ್ನು ತೋರಿಸಿಕೊಡಿ, ಎಲ್ಲಿಯವರೆಗೆ ನೀವು ಹಾಗೆ ಮಾಡುವುದಿಲ್ಲವೋ ಅಲ್ಲಿಯವರೆಗೆ ದಲಿತರಿಗೆ ಹಕ್ಕು ಪಡೆಯುವಂತೆ ಸಹಾಯ ಮಾಡುವುದು ಸರಕಾರದ ಕರ್ತವ್ಯವಾಗಿದೆ’’ ಎಂದು ಹೇಳಿದರು. ಹೀಗೆ ಸದ್ಯಕ್ಕೆ ಸರಕಾರ ಬ್ರಾಹ್ಮಣರನ್ನು ತಡೆದಿದ್ದು ಅದರಿಂದ ಅವರು ಹೇಗೆ ಬೇರೆ ಮಾರ್ಗವನ್ನು ಕಂಡುಹಿಡಿಯುತ್ತಾರೆ ಅನ್ನುವುದನ್ನು ಕಾದು ನೋಡಬೇಕಿದೆ.

ಕುಲಾಬಾ ಸಮಾಚಾರ್‌ನ 10.12.1927ರ ವರದಿಯ ಪ್ರಕಾರ ಕಲೆಕ್ಟರರ ಸೂಚನೆಯಂತೆ ಬಹುಶಃ ಈ ಕೇಸು ದಿವಾಣಿ ಕೋರ್ಟಿಗೆ ಹೋಗಲಿದೆ ಅನಿಸುತ್ತದೆ. ನಾವು ಅದಕ್ಕೆ ಸಿದ್ಧರಿದ್ದೇವೆ. ಆದರೆ ಈ ಕೆಲಸವನ್ನಾರಂಭಿಸುವ ಮುನ್ನ ದಲಿತರನ್ನು ತಡೆಯಬೇಕೋ ಬೇಡವೋ ಅನ್ನುವುದನ್ನವರು ಮತ್ತೊಮ್ಮೆ ಯೋಚಿಸಲಿ ಎಂದು ನಾವವರಿಗೆ ಸೂಚಿಸುತ್ತೇವೆ. ಪಾಲಿಕೆ ಹಾಗೂ ಅದರ ಮತದಾರರು ಏನೇ ಮಾಡಿದರೂ ಅವರಲ್ಲಿ ಹಾಗೂ ಮಹಾಡ್‌ನ ಜನರಲ್ಲಿ ದಲಿತರು ಕೆರೆಗೆ ಹೋಗಬಾರದು ಅನ್ನುವುದರಲ್ಲಿ ಒಮ್ಮತವಿರುವಂತೆ ಕಾಣುತ್ತಿಲ್ಲ. ಒಂದು ಮಾತ್ರ ನಿಜ ಮಹಾಡ್‌ನ ಸಾಕಷ್ಟು ಜನ ದಲಿತರ ಪರವಿದ್ದಾರೆ ಅನ್ನುವುದು 27ನೆ ನವೆಂಬರ್ 1927 (ತಾರೀಕು 17ನೆ ನವೆಂಬರ್ 1927 ಎಂದಿದೆ)ರ ದಿನ ಮಹಾಡ್‌ನ ಶ್ರೀ ವೀರೇಶ್ವರ ದೇವಾಸ್ಥಾನದಲ್ಲಿ ಅಖಿಲ ನಾಗರಿಕರ ಸಭೆಯಲ್ಲಾದ ಘಟನೆಗಳಿಂದ ಸ್ಪಷ್ಟವಾಗುತ್ತದೆ.

ಆ ಘಟನೆಗಳಿಂದ ಹಾಗೂ ಜ್ಞಾನಪ್ರಕಾಶದಲ್ಲಿ ಮುದ್ರಿತವಾದ ವರದಿಯಿಂದ ಈ ಸಭೆಯನ್ನು ಕರೆದವರ ಉದ್ದೇಶ ದಲಿತರ ಸತ್ಯಾಗ್ರಹವನ್ನು ವಿರೋಧಿಸುವ ಮಸೂದೆಯನ್ನು ನಾಗರಿಕರಿಂದ ಮಂಜೂರು ಮಾಡಿಸಿಕೊಳ್ಳುವುದಾಗಿತ್ತು. ಆದರೆ ಅವರದನ್ನು ಎಲ್ಲರೆದುರು ಹೇಳಿರಲಿಲ್ಲ. ಸಭೆಯನ್ನು ಕೇವಲ ಸತ್ಯಾಗ್ರಹದ ಬಗ್ಗೆ ಯೋಚಿಸಲು ಕರೆಯಲಾಗಿದೆ ಎಂದಷ್ಟೇ ಹೇಳಲಾಗಿತ್ತು. ಸಭೆ ಕರೆದವರ ಕಣ್ಣುಮುಚ್ಚಾಲೆ ಆಟ ಸಭಾಸದರಿಗೆ ತಿಳಿದ ಮೇಲೆ ರಾ.ವಾಮನ್ ರಾವ್ ವಕೀಲರು ಸಭೆಯ ಅಧ್ಯಕ್ಷ ಸ್ಥಾನವನ್ನು ಬಾಳಂಭಡಜಿಯವರು ಸ್ವೀಕರಿಸಲಿ ಎಂದು ಘೋಷಿಸಿದಾಗ ಅಧ್ಯಕ್ಷರ ಹೆಸರನ್ನು ಸೂಚಿಸುವ ಇಂತಹ 7-8 ಸೂಚನೆಗಳು ಸಭೆಯೆದುರು ಬಂದವು. ಇಷ್ಟೊಂದು ಸೂಚನೆಗಳು ಬರಲು ಒಂದೇ ಕಾರಣವಿತ್ತು. ಅಧ್ಯಕ್ಷರಾಗುವವರು ಎರಡೂ ಪಕ್ಷದ ಮಾತುಗಳನ್ನು ಕೇಳಿಸಿಕೊಳ್ಳುವುದಾಗಿ ಆಶ್ವಾಸನೆ ಕೊಡದೆ ಅಧ್ಯಕ್ಷ ಸ್ಥಾನ ಸ್ವೀಕರಿಸಬಾರದು ಅನ್ನುವುದೇ ಸಭಾಸದರ ಆಸೆಯಾಗಿತ್ತು. ಆದರೆ ಇಂತಹ ಆಶ್ವಾಸನೆಯನ್ನು ಕೊಡಲು ಯಾರೂ ಸಿದ್ಧರಾಗದೆ ಅಧ್ಯಕ್ಷರೇ ಸಿಗದಂತಾಯಿತು.

ಇಂತಹ ಪರಿಸ್ಥಿತಿಯಲ್ಲಿ ಸದಾಶಿವ್ ಧಾರಪ್ ವಕೀಲ್ ಅವರು ವಿರೋಧವನ್ನು ಪರಿಗಣಿಸದೆ ಅಧ್ಯಕ್ಷ ಸ್ಥಾನದಲ್ಲಿ ಹೋಗಿ ಕುಳಿತರು. ಹೀಗೆ ಅಧ್ಯಕ್ಷ ಸ್ಥಾನಕ್ಕೆ ಯಾರೂ ಸಿಗದಾದಾಗ ವಾಮನ್ ಜೋಶಿ ವಕೀಲರು ‘‘ಸತ್ಯಾಗ್ರಹವನ್ನು ವಿರೋಧಿಸಲು ಈ ಸಭೆಯನ್ನು ಕರೆಯಲಾಗಿದೆ, ವಿರೋಧಿಸುವುದಕ್ಕಿಲ್ಲದವರು ಸಭೆ ಬಿಟ್ಟು ಹೋಗಬಹುದು’’ ಅಂದಾಗಲೂ ಕೂಡ ದೊಡ್ಡ ವಾದವಿವಾದಗಳಾದವು ಹಾಗೂ ಹನ್ನೆರಡು ಗಂಟೆಯಾದರೂ ಚಿಂತೆಯಿಲ್ಲ ಆದರೆ ಸಭೆಯನ್ನು ಬಿಟ್ಟು ಹೋಗಬೇಡಿ ಎಂದು ಚಿಟಣಿಸ್ ಅವರು ಹೇಳಿದಾಗ ಯಾರೂ ಸಭೆಯನ್ನು ಬಿಟ್ಟು ಹೋಗಲಿಲ್ಲ. ಕಡೆಗೆ ವಾಮನ್‌ರಾವ್ ಜೋಶಿಯವರು ‘‘ಸಭೆ ಮುಕ್ತಾಯವಾಯಿತು’’ ಎಂದು ಘೋಷಿಸಬೇಕಾಯಿತು. ಇದರಿಂದ ಮಹಾಡ್‌ನ ಸಾಕಷ್ಟು ಜನ ದಲಿತರ ಪರವಾಗಿದ್ದಾರೆ ಅನ್ನುವುದು ಸ್ಪಷ್ಟವಾಗುತ್ತದೆ. ಜನ ಯಾರ ಕಡೆಗಿದ್ದಾರೆ ಎಂದು ತಿಳಿದುಕೊಳ್ಳಬೇಕಾದರೆ ಜನತೆಯ ಮತಗಳನ್ನೇ ಪರಿಗಣಿಸಬೇಕಾಗುತ್ತದೆ. ಕೇವಲ ಪಾಲಿಕೆಯ ಮತದಾರರನ್ನು ನಂಬಲಾಗುವುದಿಲ್ಲ. ಆರು ಸಾವಿರ ಜನಸಂಖ್ಯೆಯಿರುವ ಮಹಾಡ್‌ನಲ್ಲಿ ಪಾಲಿಕೆಯ ಜನ ಕೇವಲ 213 ಅಷ್ಟೆ. ಅಂದರೆ ಸಮುದ್ರದಲ್ಲಿ ಗಸಗಸೆಯಿದ್ದಷ್ಟೆ.

ಮಹಾಡ್‌ನ ಹೆಚ್ಚು ಜನ ನಮ್ಮಂದಿಗಿದ್ಧಾರೆ ಅನ್ನುವುದು ಈ ಸಭೆಯಿಂದ ಕಂಡುಬರುತ್ತದೆ. ಆದರೆ ಈಗ ದಲಿತರ ವಿರೋಧದಲ್ಲಿರುವ ಕೆಲವೇ ಜನರನ್ನು ದಲಿತರ ಪರ ಮಾಡಿಕೊಳ್ಳುವುದು ಬ್ರಾಹ್ಮಣ ನೇತಾರರ ಆದ್ಯ ಕರ್ತವ್ಯವಾಗಿದೆ. ಈ ಕರ್ತವ್ಯವನ್ನವರು ಸಾಕಷ್ಟು ಪ್ರಮಾಣದಲ್ಲಿ ಪಾಲಿಸಿದ್ದಾರೆ ಅನ್ನುವುದು ಕಾಣುತ್ತಿದೆ. ಪುಣೆಯ ನೇತಾರ ಬಾಬುರಾವ್ ಗೋಖಲೆ (ಪುಣೆಯ ಹಿಂದೂ ಮಹಾಸಭೆಯ ನೇತಾರ) ಹಾಗೂ ಕೇಸರಿಯ ಸಹಾಯಕ ಸಂಪಾದಕರಾದ ಜ.ಸ.ಕಾರಂದೀಕರ್ ಅವರು ಕೆಲವು ದಿನಗಳ ಹಿಂದೆ ಬೇಕೆಂದೇ ಪುಣೆಯಿಂದ ಮಹಾಡ್‌ಗೆ ಹೋಗಿದ್ದರು ಹಾಗೂ ನವೆಂಬರ್ 30ರಂದು ಅವರು ಮಹಾಡ್‌ನಲ್ಲಿ ನಾಗರಿಕರ ಸಭೆಯೊಂದನ್ನು ಕರೆದು ಅಲ್ಲಿಯ ಜನರಿಗೆ ದಲಿತರ ಸತ್ಯಾಗ್ರಹಕ್ಕೆ ವಿರೋಧಿಸಬೇಡಿ ಅನ್ನುವ ಹಿಂದೂ ಮಹಾಸಭೆಯ ಸಂದೇಶವನ್ನು ಹೇಳಿದರು.

ಇದರ ಅನುಕೂಲ ಪರಿಣಾಮ ಅಲ್ಲಿಯ ಬ್ರಾಹ್ಮಣರ ಮೇಲೆ ಆಗಿಯೇ ಅಗುತ್ತದೆ. ಈ ಕಾರ್ಯಕ್ರಮದಿಂದ ಬ್ರಾಹ್ಮಣರು ತಮ್ಮ ಜವಾಬ್ದಾರಿಯಿಂದ ತಪ್ಪಿಸಿಕೊಂಡರು ಅನ್ನುವ ಆರೋಪವನ್ನು ಅವರ ಮೇಲೆ ಹೊರಿಸಲಾಗುವುದಿಲ್ಲ. ಬ್ರಾಹ್ಮಣೇತರ ನೇತಾರರು ಮಾತ್ರ ಈ ವಿಷಯದಲ್ಲಿ ಏನನ್ನೂ ಮಾಡಲಿಲ್ಲ. ಹಳ್ಳಿಯ ಮರಾಠಾ ಆದಿಯಾಗಿ ಬ್ರಾಹ್ಮಣೇತರರೆಲ್ಲರೂ ದಲಿತರ ಸತ್ಯಾಗ್ರಹವನ್ನು ವಿರೋಧಿಸುವ ಕಾರ್ಯದಲ್ಲಿ ಮುಳುಗಿದ್ದಾರೆ ಎಂದು ಸತತವಾಗಿ ಕೇಳಿ ಬರುತ್ತಿದೆ. ಇಂತಹ ಸಮಯದಲ್ಲಿ ಮರಾಠಾ ಬ್ರಾಹ್ಮಣೇತರ ನೇತಾರರು ಕುಲಾಬ ಜಿಲ್ಲೆಗೆ ಹೋಗಿ ತಮ್ಮ ಜಾತಿ ಬಾಂಧವರಿಗೆ ತಿಳಿಹೇಳಬೇಕಿತ್ತು. ಹೋಗಿ ತಿಳಿಹೇಳುವುದು ಸಾಧ್ಯವಿರದಿದ್ದರೆ ಒಂದು ಪತ್ರವನ್ನು ಬರೆದು ಎಲ್ಲೆಡೆ ಅದನ್ನು ಹಂಚುವ ವ್ಯವಸ್ಥೆ ಮಾಡಬೇಕಿತ್ತು.

ಬ್ರಾಹ್ಮಣೇತರ ಪಕ್ಷವು ಈ ಕೆಲಸದ ಕಡೆ ಗಮನ ಕೊಡದಿದ್ದರೆ ಮುಂದಿನ ಅನರ್ಥದ ಜವಾಬ್ದಾರಿ ಅವರ ಮೇಲೆ ಬಂದೀತು. ಅಷ್ಟೇ ಅಲ್ಲ ಇವರ ಬಗ್ಗೆ ದಲಿತರ ಮನಸ್ಸು ಹಾಳಾಗದಿರದು. ಇಂದು ಮಹಾಡ್‌ನ ದಲಿತರ ಮೇಲೆರಗಿರುವ ಪ್ರಸಂಗ ಚೇವೋಳ್‌ನಲ್ಲಿಯ ಬ್ರಾಹ್ಮಣೇತರರ ಮೇಲೂ ಎರಗಿತ್ತು. ಮಹಾಡ್‌ನಲ್ಲಿ ದಲಿತರಿಗೆ ಕೆರೆಗೆ ಹೋಗುವ ಅನುಮತಿಯಿಲ್ಲದಂತೆ ಚೇವುಳ್‌ನಲ್ಲಿ ಶ್ರೀ ರಾಮೇಶ್ವರ ದೇವಸ್ಥಾನದಲ್ಲಿ ಕೋಳೀ, ಭಂಡಾರಿ, ಆಗ್ರಿ, ಮರಾಠಾರಂತಹ ಬ್ರಾಹ್ಮಣೇತರರಿಗೆ ಗರ್ಭಗುಡಿಯ ಒಳಗೆ ಕಾಲಿಡುವ ಅನುಮತಿಯನ್ನು ಅಲ್ಲಿಯ ಬ್ರಾಹ್ಮಣ ಟ್ರಸ್ಟ್ ನಿರಾಕರಿಸಿದೆ. ಹಾಗಾಗಿ ಟ್ರಸ್ಟ್ ಹಾಗೂ ಸ್ಥಳೀಯ ಬ್ರಾಹ್ಮಣೇತರ ಜನರ ಚಳವಳಿ ಆರಂಭವಾಗಿದೆ.

ಇಂತಹ ಪ್ರಸಂಗದಲ್ಲಿ ಬ್ರಾಹ್ಮಣರ ಕಾಲಡಿ ತುಳಿಸಿಕೊಂಡ ಬ್ರಾಹ್ಮಣೇತರರು ಅದೇ ಜಿಲ್ಲೆಯ ಬ್ರಾಹ್ಮಣರ ವಿರುದ್ಧ ಹೋರಾಡುತ್ತ್ತಿರುವ ದಲಿತರನ್ನು ವಿರೋಧಿಸಲು ಸಿದ್ಧರಾಗಿರುವುದು ದೊಡ್ಡ ನಾಚಿಕೆಗೇಡು! ಆದರೆ ಪಾಪ ಅವರಾದರೂ ಏನು ಮಾಡಿಯಾರು? ಅವರ ನೇತಾರರು ಮಹಾತ್ಮ ಫುಲೆಯವರ ಶತಸಂವತ್ಸರವನ್ನು ಆಚರಿಸುವುದರಲ್ಲಿ ಮುಳುಗಿದ್ದಾರೆ. ಹಾಗಾಗಿ ಅವರಿಗೆ ಸನ್ಮಾರ್ಗ ತೋರಿಸುವವರು ಯಾರೂ ಇಲ್ಲವಾಗಿದ್ದಾರೆ. ಮಹಾಡ್‌ನ ಸತ್ಯಾಗ್ರಹ ನಡೆಯುವಾಗ ಬ್ರಾಹ್ಮಣ ನಿಲುವು ನೆಲ ಕಚ್ಚುತ್ತಿರುವುದನ್ನು ಕೇಳಿ ಬ್ರಾಹ್ಮಣೇತರ ನೇತಾರರು ಮನೆಯಲ್ಲೇ ಕುಳಿತು ‘‘ಮಹಾತ್ಮಾ ಫುಲೆ ಕಿ ಜೈ’’ ಎಂದು ಕೂಗುವುದು ಹಾಗೂ ಅವರ ಅನುಯಾಯಿಗಳು ಮಹಾಡ್‌ಗೆ ಬಂದು ‘‘ಹರಹರ ಮಹಾದೇವ್’’ ಅನ್ನುತ್ತ ಬ್ರಾಹ್ಮಣರ ಸಂರಕ್ಷಣೆ ಮಾಡುವಂತಹ ಒಂದು ದೊಡ್ಡ ಮೋಜು ನೋಡಲು ಸಿಗಲಿದೆ ಎಂದು ಬಹಳ ಕಷ್ಟದಿಂದ ಹೇಳಬೇಕಾಗುತ್ತದೆ. ದೇವರ ದಯೆಯಿಂದ ಬ್ರಾಹ್ಮಣೇತರರಿಗೆ ಇಂತಹ ಅವಮಾನವಾಗದಿರಲಿ.

(ಕೃಪೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರಕಟಿತ ಅಂಬೇಡ್ಕರ್ ಭಾಷಣ-ಬರಹಗಳ ಸಂಪುಟ)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News