ಸಂಗೀತ ನಿರ್ದೇಶನಕ್ಕೆ ಸಾಧುಕೋಕಿಲಾ ಪುತ್ರ

Update: 2017-09-08 12:24 GMT

ಸಾಧುಕೋಕಿಲಾ ಸ್ಯಾಂಡಲ್‌ವುಡ್‌ನ ಅತ್ಯಂತ ಜನಪ್ರಿಯ ಕಾಮಿಡಿ ನಟನೆಂಬುದರಲ್ಲಿ ಎರಡು ಮಾತಿಲ್ಲ. ಸಾಧುಕೋಕಿಲಾ ಚಿತ್ರದಲ್ಲಿದ್ದರೆ ಹಾಸ್ಯಕ್ಕೆ ಬರವಿರದು ಎಂಬುದಂತೂ ಗ್ಯಾರಂಟಿ. ಆದರೆ ಸಾಧು ಕೋಕಿಲಾ ಮೂಲತಃಸಂಗೀತ ನಿರ್ದೇಶಕರಾಗಿ ಚಿತ್ರರಂಗ ಪ್ರವೇಶಿಸಿದವರು. ‘ರಾಕ್ಷಸ’, ‘ರಥಾವರ’, ‘ದಾಸ’, ‘ಮಾಸ್ತಿಗುಡಿ’ ಹೀಗೆ 20ಕ್ಕೂ ಅಧಿಕ ಚಿತ್ರಗಳಿಗೆ ಅವರು ಸಂಗೀತ ನೀಡಿದ್ದಾರೆ.

ಬ್ಯುಸಿ ನಟನಾದರೂ ಸಾಧುಕೋಕಿಲಾ ಸಂಗೀತ ನಿರ್ದೇಶನದ ಕಾಯಕವನ್ನು ನಿಷ್ಠೆಯಿಂದ ಮುಂದುವರಿಸಿ ಕೊಂಡು ಬಂದಿದ್ದಾರೆ. ಇದೀಗ ಅವರ ಪುತ್ರ ಸುರಾಗ್ ಸಂಗೀತ ನಿರ್ದೇಶಕರಾಗಿ ಸ್ಯಾಂಡಲ್‌ವುಡ್‌ಗೆ ಎಂಟ್ರಿಕೊಡುತ್ತಿದ್ದಾರೆ. ಮಹೇಶ್‌ಬಾಬು ನಿರ್ದೇಶನದ ‘ಅತಿರಥ’ ಚಿತ್ರಕ್ಕೆ ಸಂಗೀತ ನೀಡಲಿದ್ದಾರೆ. ತಂದೆಯ ಗರಡಿಯಲ್ಲಿ ಪಳಗಿರುವ ಸುರಾಗ್ ವೆಸ್ಟರ್ನ್, ಕ್ಲಾಸಿಕ್ ಸಂಗೀತದಲ್ಲೂ ಪರಿಣತಿ ಹೊಂದಿದ್ದಾರೆ. ಸುರಾಗ್‌ಗೆ ಈ ಮೊದಲು ಸಾಧುಕೋಕಿಲಾ ಸಂಗೀತ ನೀಡಿದ್ದ ‘ಕಿರಗೂರಿನ ಗಯ್ಯಾಳಿಗಳು’ ಹಾಗೂ ‘ಗೋಲಿ ಸೋಡಾ’ ಸೇರಿದಂತೆ ಹಲವಾರು ಕನ್ನಡ ಚಿತ್ರಗಳಿಗೆ ಸಂಗೀತ ಪ್ರೋಗ್ರಾಮಿಂಗ್ ಮಾಡಿದ್ದ ಅನುಭವವೂ ಇದೆ.

ಹಾಗೆ ನೋಡಿದರೆ ಸುರಾಗ್, ಇದಕ್ಕೂ ಮೊದಲೇ ಸಂಗೀತ ನಿರ್ದೇಶಕರಾಗಬೇಕಿತ್ತು. ‘ಗಡಿಯಾರ’ ಚಿತ್ರಕ್ಕೆ ಅವರು ಸಂಗೀತ ನಿರ್ದೇಶಕರಾಗಿ ಆಯ್ಕೆಯಾಗಿದ್ದರು. ಆದೇಕೋ ಕಾರಣಾಂತರಗಳಿಂದ ‘ಗಡಿಯಾರ’ ಅರ್ಧದಲ್ಲೇ ನಿಂತುಬಿಟ್ಟಿತು. ಇದೀಗ ‘ಅತಿರಥ’ ಚಿತ್ರದ ಮೂಲಕ ಸಂಗೀತ ನಿರ್ದೇಶಕರಾಗುತ್ತಿರುವ ಸುರಾಗ್‌ಗೆ ಬೆಸ್ಟ್ ಆಫ್ ಲಕ್ ಎನ್ನೋಣ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News