ಐಶ್ವರ್ಯಾಗೆ ರಾಜ್ ಕುಮಾರ್ ಹೀರೋ..!

Update: 2017-09-08 12:47 GMT

17 ವರ್ಷಗಳ ಸುದೀರ್ಘ ಗ್ಯಾಪ್‌ನ ಬಳಿಕ ಅನಿಲ್ ಕಪೂರ್ ಹಾಗೂ ಐಶ್ವರ್ಯಾ ರೈ ಮತ್ತೆ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ‘ಫಾನಿ ಖಾನ್’ ಎಂಬ ಚಿತ್ರದಲ್ಲಿ ಅವರು ಮುಖ್ಯಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದಕ್ಕೂ ಮುನ್ನ ಚಿತ್ರದಲ್ಲಿ ಅವರು ಪ್ರೇಮಿಗಳ ಪಾತ್ರದಲ್ಲಿ ನಟಿಸಲಿದ್ದಾರೆಂಬ ವದಂತಿಗಳು ಹರಡಿದ್ದವು.

ಆದರೆ ಅದನ್ನೀಗ ಸ್ವತಃ ಅನಿಲ್ ಕಪೂರ್ ಅವರೇ ನಿರಾಕರಿಸಿದ್ದರು. ಚಿತ್ರದಲ್ಲಿ ತಾನೊಬ್ಬ ಸಂಗೀತ ಕಲಾವಿದನಾಗಿ ಕಾಣಿಸಿಕೊಳ್ಳುತ್ತಿರುವುದಾಗಿ ಅವರು ಸ್ಪಷ್ಟಪಡಿಸಿದ್ದರು. ಹೀಗಿರುವಾಗ ಐಶ್ವರ್ಯಾಗೆ ನಾಯಕನ್ಯಾರು ಎಂಬ ಜಿಜ್ಞಾಸೆ ಕೂಡಾ ಮೂಡಿತ್ತು. ಇದೀಗ ಐಶ್ವರ್ಯಾಗೆ ನಾಯಕನಾಗಿ ರಾಷ್ಟ್ರಪ್ರಶಸ್ತಿ ಪುರಸ್ಕೃತ ನಟ ರಾಜ್‌ಕುಮಾರ್ ರಾವ್ ನಟಿಸಲಿರುವುದು ಖಚಿತವಾಗಿದೆ. ಈ ನಡುವೆ ನಾಯಕನ ಪಾತ್ರಕ್ಕೆ ಮಾಧವನ್ ಹೆಸರು ಕೂಡಾ ಕೇಳಿಬಂದಿದ್ದವು.

ರಾಕೇಶ್ ಓಂ ಪ್ರಕಾಶ್ ಮಿಶ್ರಾ ನಿರ್ದೇಶನದ ಫಾನಿಖಾನ್, 2000ರಲ್ಲಿ ರಿಲೀಸ್ ಆಗಿರುವ ಡಚ್ ಚಿತ್ರ ‘ಎವರಿ ಬಡೀಸ್ ಫೇಮಸ್’ನ ರಿಮೇಕ್ ಆಗಿದೆ. ಸಂಗೀತ ಸ್ಪರ್ಧೆಯಲ್ಲಿ ತಮ್ಮ ಮಕ್ಕಳನ್ನು ಗೆಲ್ಲುವಂತೆ ಮಾಡಲು, ಇತರ ಸ್ಪರ್ಧಿಗಳನ್ನು ಅಪಹರಿಸಿ ಕೊಂಡು ಹೋಗುವ ಪಾಲಕರಿಬ್ಬರ ಕತೆಯನ್ನು ಎವರಿಬಡೀಸ್ ಫೇಮಸ್ ಹೇಳುತ್ತದೆ. ಆದರೆ ಫಾನಿಖಾನ್‌ನಲ್ಲಿ ಭಾರತದ ನೇಟಿವಿಟಿಗೆ ತಕ್ಕಂತೆ ಮೂಲ ಚಿತ್ರದ ಕತೆಯಲ್ಲಿ ಸಾಕಷ್ಟು ಮಾರ್ಪಾಡುಗಳನ್ನು ಮಾಡಲಾಗಿದೆ. ಫಾನಿಖಾನ್‌ನ ಶೂಟಿಂಗ್ ಆರಂಭ ಗೊಂಡಿದ್ದು, ಮುಂದಿನ ವರ್ಷದ ಆರಂಭದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.

2000ನೆ ಇಸವಿಯಲ್ಲಿ ಬಿಡುಗಡೆಯಾದ ‘ದಿಲ್ ಆಪ್ ಕೆ ಪಾಸ್ ಹೈ’, ಅನಿಲ್- ಐಶ್ವರ್ಯಾ ಜೋಡಿಯ ಅಭಿನಯದ ಕೊನೆಯ ಚಿತ್ರವಾಗಿತ್ತು. 1999ರಲ್ಲಿ ಇವರಿಬ್ಬರೂ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದ ‘ತಾಲ್’ ಬಾಲಿವುಡ್‌ನಲ್ಲಿ ಭಾರೀ ಯಶಸ್ಸು ಕಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News