ಮೂರನೆ ಟೆಸ್ಟ್: ಇಂಗ್ಲೆಂಡ್ ಜಯಭೇರಿ, ಸರಣಿ ಕೈವಶ

Update: 2017-09-09 18:40 GMT

ಲಂಡನ್, ಸೆ.9: ಆತಿಥೇಯ ಇಂಗ್ಲೆಂಡ್ ತಂಡ ವೆಸ್ಟ್‌ಇಂಡೀಸ್ ವಿರುದ್ಧ್ದ ಐತಿಹಾಸಿಕ ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆದ ಮೂರನೆ ಟೆಸ್ಟ್ ಪಂದ್ಯವನ್ನು 9 ವಿಕೆಟ್‌ಗಳ ಅಂತರದಿಂದ ಗೆದ್ದುಕೊಂಡಿದೆ. ಈ ಮೂಲಕ ಮೂರು ಪಂದ್ಯಗಳ ಸರಣಿಯನ್ನು 2-1 ಅಂತರದಿಂದ ವಶಪಡಿಸಿಕೊಂಡಿದೆ.

ಆ್ಯಂಡರ್ಸನ್ ಅಪೂರ್ವ ಬೌಲಿಂಗ್ ನೆರವಿನಿಂದ ಗೆಲುವಿಗೆ 107 ರನ್ ಸವಾಲು ಪಡೆದಿದ್ದ ಇಂಗ್ಲೆಂಡ್ 28ನೆ ಓವರ್‌ನಲ್ಲಿ 1 ವಿಕೆಟ್ ನಷ್ಟಕ್ಕೆ ಗೆಲುವಿನ ದಡ ಸೇರಿತು. 8ನೆ ಓವರ್‌ನಲ್ಲಿ 36 ರನ್ ಗಳಿಸುವಷ್ಟರಲ್ಲಿ ಆರಂಭಿಕ ಆಟಗಾರ ಅಲಿಸ್ಟರ್ ಕುಕ್(17) ವಿಕೆಟ್ ಕಳೆದುಕೊಂಡಿತು. ಆಗ ಜೊತೆಯಾದ ಮಾರ್ಕ್ ಸ್ಟೋನ್‌ಮ್ಯಾನ್(ಅಜೇಯ 40,74 ಎಸೆತ, 5 ಬೌಂಡರಿ) ಹಾಗೂ ಟಾಮ್ ವೆಸ್ಟ್ಲೇ (ಅಜೇಯ 44, 72 ಎಸೆತ, 7 ಬೌಂಡರಿ) ಎರಡನೆ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 72 ರನ್ ಸೇರಿಸಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು.

ವೆಸ್ಟ್‌ಇಂಡೀಸ್ ತಂಡ ಮೂರನೆ ಟೆಸ್ಟ್‌ನ ಎರಡನೆ ದಿನವಾದ ಶುಕ್ರವಾರ ಎರಡನೆ ಇನಿಂಗ್ಸ್‌ನಲ್ಲಿ 3 ವಿಕೆಟ್‌ಗಳ ನಷ್ಟಕ್ಕೆ 93 ರನ್ ಗಳಿಸಿದ್ದು ಕೇವಲ 22 ರನ್ ಮುನ್ನಡೆಯಲ್ಲಿತ್ತು. ಶನಿವಾರ ಬ್ಯಾಟಿಂಗ್ ಮುಂದುವರಿಸಿದ ವಿಂಡೀಸ್ ತಂಡ ಜೇಮ್ಸ್ ಆ್ಯಂಡರ್ಸನ್(7-42)ದಾಳಿಗೆ ತತ್ತರಿಸಿ 65.1 ಓವರ್‌ಗಳಲ್ಲಿ 177 ರನ್‌ಗೆ ಆಲೌ ಟಾ ಗಿ ಇಂಗ್ಲೆಂಡ್ ಗೆಲುವಿಗೆ ಕೇವಲ 107 ರನ್ ಗುರಿ ನೀಡಿತು. ಸರಣಿ 1-1ರಿಂದ ಸಮಬಲಗೊಂಡಿರುವ ಕಾರಣ ಈ ಪಂದ್ಯದಲ್ಲಿ ಗೆಲುವು ಸಾಧಿಸುವುದು ಆಂಗ್ಲರಿಗೆ ಅನಿವಾರ್ಯವಾಗಿತ್ತು.

ವಿಂಡೀಸ್‌ನ ಆರಂಭಿಕ ಆಟಗಾರ ಬ್ರಾತ್‌ವೇಟ್(4)ರನ್ನು ಕ್ಲೀನ್ ಬೌಲ್ಡ್ ಮಾಡಿದ ಆ್ಯಂಡರ್ಸನ್ 500 ವಿಕೆಟ್ ಕ್ಲಬ್‌ಗೆ ಸೇರ್ಪಡೆಯಾದರು. 500 ವಿಕೆಟ್ ಕ್ಲಬ್‌ಗೆ ಸೇರಿದ ಇಂಗ್ಲೆಂಡ್‌ನ ಮೊದಲ ಆಟಗಾರ ಎನಿಸಿಕೊಂಡಿರುವ ಆ್ಯಂಡರ್ಸನ್‌ಗೆ ಪ್ರೇಕ್ಷಕರು ಎದ್ದುನಿಂತು ಗೌರವ ನೀಡಿದರು.

2003ರಲ್ಲಿ ಲಾರ್ಡ್ಸ್ ಕ್ರೀಡಾಂಗಣದಲ್ಲಿ ಝಿಂಬಾಬ್ವೆ ವಿರುದ್ಧ ಟೆಸ್ಟ್‌ಗೆ ಕಾಲಿಟ್ಟಿರುವ ಆ್ಯಂಡರ್ಸನ್ ತನ್ನ 129ನೆ ಪಂದ್ಯದಲ್ಲಿ ಈ ಮೈಲುಗಲ್ಲು ತಲುಪಿದರು.

ಪ್ರವಾಸಿಗರ ಪರ ಮಧ್ಯಮ ಕ್ರಮಾಂಕದ ಆಟಗಾರ ಶೈ ಹೋಪ್(62, 144 ಎಸೆತ, 9 ಬೌಂಡರಿ) ಅಗ್ರ ಸ್ಕೋರರ್ ಎನಿಸಿಕೊಂಡರು. ಆರಂಭಿಕ ಆಟಗಾರ ಕಿರೊನ್ ಪೊವೆಲ್(45) ಹಾಗೂ ಜೇಸನ್ ಹೋಲ್ಡರ್(23)ಎರಡಂಕೆಯ ಸ್ಕೋರ್ ಗಳಿಸಿದರು.

ಸಂಕ್ಷಿಪ್ತ ಸ್ಕೋರ್

► ವೆಸ್ಟ್‌ಇಂಡೀಸ್ ಪ್ರಥಮ ಇನಿಂಗ್ಸ್: 123 ರನ್‌ಗೆ ಆಲೌಟ್

► ಇಂಗ್ಲೆಂಡ್ ಪ್ರಥಮ ಇನಿಂಗ್ಸ್: 194 ರನ್‌ಗೆ ಆಲೌಟ್

► ವೆಸ್ಟ್‌ಇಂಡೀಸ್ ದ್ವಿತೀಯ ಇನಿಂಗ್ಸ್: 177 ರನ್‌ಗೆ ಆಲೌಟ್

► ಇಂಗ್ಲೆಂಡ್ ದ್ವಿತೀಯ ಇನಿಂಗ್ಸ್:

28 ಓವರ್‌ಗಳಲ್ಲಿ 107/1

(ಸ್ಟೋನ್‌ಮ್ಯಾನ್ ಅಜೇಯ 40, ವೆಸ್ಟೇ ಅಜೇಯ 44)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News