×
Ad

ಜಿಎಸ್‌ಟಿ ಮಂಡಳಿ ಸಭೆ: ಇನ್ನು ಮುಂದೆ ಅಗ್ಗವಾಗಲಿದೆ ಈ ಉತ್ಪನ್ನಗಳ ಮೇಲಿನ ತೆರಿಗೆ...

Update: 2017-09-10 17:52 IST

ಹೊಸದಿಲ್ಲಿ,ಸೆ.10: ಇಡ್ಲಿ ಮತ್ತು ದೋಸೆಹಿಟ್ಟು, ರೇನ್‌ಕೋಟ್, ಪೊರಕೆ ಮತ್ತು ಕ್ವಾರ್ಡ್ರಾಯ್ ಬಟ್ಟೆಯಂತಹ ದಿನಬಳಕೆಯ ವಸ್ತುಗಳು ಸೇರಿದಂತೆ 40 ಉತ್ಪನ್ನಗಳ ಮೇಲಿನ ತೆರಿಗೆಗಳನ್ನು ಜಿಎಸ್‌ಟಿ ಮಂಡಳಿಯು ತಗ್ಗಿಸಿರುವುದರಿಂದ ಅವು ಇನ್ನು ಮುಂದೆ ಅಗ್ಗವಾಗಲಿವೆ.

ಶನಿವಾರ ಹೈದರಾಬಾದ್‌ನಲ್ಲಿ ನಡೆದ ಸರಕು ಮತ್ತು ಸೇವಾ ತೆರಿಗೆ ಮಂಡಳಿಯ 21ನೇ ಸಭೆಯು 20 ಇಂಚುಗಳವರೆಗಿನ ಕಂಪ್ಯೂಟರ್ ಮಾನಿಟರ್, ಹತ್ತಿಯ ರಜಾಯಿ, ರಬ್ಬರ್ ಬ್ಯಾಂಡ್ ಮತ್ತು ಗ್ಯಾಸ್ ಲೈಟರ್‌ಗಳ ಮೇಲಿನ ತೆರಿಗೆಯನ್ನೂ ಇಳಿಸಲು ನಿರ್ಧರಿಸಿದೆ.

ಕೇಂದ್ರೀಯ ಅಬಕಾರಿ ಮತ್ತು ಸೀಮಾಶುಲ್ಕ ಮಂಡಳಿಯ ಜಾಲತಾಣದಲ್ಲಿ ಅಪ್‌ಲೋಡ್ ಮಾಡಲಾಗಿರುವ ಸರಕುಗಳ ಪಟ್ಟಿಯಂತೆ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ಮಳಿಗೆಗಳ ಮೂಲಕ ಮಾರಾಟವಾಗುವ ಖಾದಿ ಉತ್ಪನ್ನ ಗಳಿಗೆ ಜಿಎಸ್‌ಟಿಯಿಂದ ವಿನಾಯಿತಿ ನೀಡಲಾಗಿದೆ.

ಸೀರೆಯ ಫಾಲ್‌ಗಳು, ಧೂಪದ ಬತ್ತಿ, ಕ್ವಾರ್ಡ್ರಾಯ್ ಬಟ್ಟೆ, ಅಕ್ರೋಟು, ಒಣ ಹುಣಿಸೆ ಮತ್ತು ಹುರಿದ ಬೇಳೆಗಳ ಮೇಲಿನ ಜಿಎಸ್‌ಟಿ ದರವನ್ನು ಮೊದಲಿನ ಶೇ.12ರಿಂದ ಶೇ.5ಕ್ಕೆ ಇಳಿಸಲಾಗಿದೆ.

ಈ ಮೊದಲು ಶೇ.28ರಷ್ಟು ತೆರಿಗೆಯನ್ನು ಹೇರಲಾಗಿದ್ದ ಪ್ಲಾಸ್ಟಿಕ್ ರೇನ್‌ಕೋಟ್‌ಗಳು ಮತ್ತು ರಬ್ಬರ್ ಬ್ಯಾಂಡ್‌ಗಳನ್ನು ಈಗ ಅನುಕ್ರಮವಾಗಿ ಶೇ.18 ಮತ್ತು ಶೇ.12 ತೆರಿಗೆ ವರ್ಗದಲ್ಲಿ ಸೇರಿಸಲಾಗಿದೆ.

ಶೇ.18ರಷ್ಟು ಜಿಎಸ್‌ಟಿ ವಿಧಿಸಲಾಗಿದ್ದ ಇಡ್ಲಿ ಮತ್ತು ದೋಸೆಹಿಟ್ಟುಗಳನ್ನು ಈಗ ಶೇ.12ರ ತೆರಿಗೆ ವರ್ಗಕ್ಕೆ ಸೇರಿಸಲಾಗಿದ್ದು, ಪೊರಕೆ ಮತ್ತು ಬ್ರಷ್‌ಗಳಿಗೆ ತೆರಿಗೆಯಿಂದ ಸಂಪೂರ್ಣ ವಿನಾಯಿತಿಯನ್ನು ನೀಡಲಾಗಿದೆ.

ಕಿಚನ್ ಗ್ಯಾಸ್ ಲೈಟರ್‌ಗಳ ಮೇಲಿನ ಜಿಎಸ್‌ಟಿಯನ್ನು ಶೇ.28ರಿಂದ ಶೇ.18ಕ್ಕೆ ಮತ್ತು ಜಪಮಾಲೆಗಳ ಮೇಲಿನ ತೆರಿಗೆಯನ್ನು ಶೇ.18ರಿಂದ ಶೇ.5ಕ್ಕೆ ತಗ್ಗಿಸಲಾಗಿದೆ. 20 ಇಂಚುಗಳವರೆಗಿನ ಕಂಪ್ಯೂಟರ್ ಮಾನಿಟರ್‌ಗಳ ಮೇಲಿನ ತೆರಿಗೆಯನ್ನು ಶೇ.28ರಿಂದ ಶೇ.18ಕ್ಕೆ ಇಳಿಸಲಾಗಿದೆ. ಈ ಮೊದಲು 17 ಇಂಚುಗಳವರೆಗಿನ ಮಾನಿಟರ್‌ಗಳಿಗೆ ಮಾತ್ರ ಶೇ.18 ಜಿಎಸ್‌ಟಿಯನ್ನು ನಿಗದಿಗೊಳಿಸಲಾಗಿತ್ತು.

1,000 ರೂ.ವರೆಗಿನ ಹತ್ತಿಯ ರಜಾಯಿಗಳಿಗೆ ಶೇ.5 ಮತ್ತು ಅದಕ್ಕಿಂತ ಹೆಚ್ಚಿನ ವೌಲ್ಯದ್ದಕ್ಕೆ ಶೇ.12 ಜಿಎಸ್‌ಟಿಯನ್ನು ನಿಗದಿಗೊಳಿಸಲಾಗಿದೆ. ಈ ಮೊದಲು ಇವುಗಳ ಮೇಲೆ ಶೇ.18 ಏಕರೂಪಿ ತೆರಿಗೆಯನ್ನು ಹೇರಲಾಗಿತ್ತು.

ಊಟದ ಟೇಬಲ್‌ಗಳಲ್ಲಿ ಬಳಸುವ ಸಾಧನಗಳು, ಅಡಿಗೆಮನೆ ಪರಿಕರಗಳು, ಇತರ ಗೃಹಬಳಕೆ ಸರಕುಗಳ ಮೇಲಿನ ತೆರಿಗೆಯನ್ನು ಶೇ.18ರಿಂದ ಶೇ.12ಕ್ಕೆ ಹಾಗೂ ಟಾಯ್ಲೆಟ್ ಸಾಧನಗಳ ಮೇಲಿನ ತೆರಿಗೆಯನ್ನು ಶೇ.28ರಿಂದ ಶೇ.12ಕ್ಕೆ ತಗ್ಗಿಸಲಾಗಿದೆ.

ಗಂಟೆ ಮತ್ತು ಜಾಗಟೆಯಂತಹ ವಿದ್ಯುತ್ ಸಂಪರ್ಕಿತವಲ್ಲದ ಕ್ಷುದ್ರಲೋಹಗಳ ಎಲ್ಲ ವಸ್ತುಗಳು ಮತ್ತು ಮೂರ್ತಿಗಳು ಹಾಗೂ ಕ್ಷುದ್ರಲೋಹಗಳ ಇತರ ಆಭರಣಗಳು ಈಗ ಶೇ.18ರ ಜಿಎಸ್‌ಟಿ ವರ್ಗದಿಂದ ಶೇ.12ರ ವರ್ಗಕ್ಕೆ ಸೇರ್ಪಡೆಗೊಂಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News