ಅಸ್ಸಾಂನಲ್ಲಿ ಪ್ರವಾಹ: ಓರ್ವ ವ್ಯಕ್ತಿ ನಾಪತ್ತೆ, ಸಾವಿರಾರು ಮಂದಿ ಸಂತ್ರಸ್ತ
ಗುವಾಹತಿ, ಸೆ. 10: ಕೇಂದ್ರ ಅಸ್ಸಾಂನ ಸೊಂಟಿಪುರ ಜಿಲ್ಲೆಯಲ್ಲಿ ರವಿವಾರ ಮುಂಜಾನೆ ಇದ್ದಕ್ಕಿದ್ದಂತೆ ನೆರೆ ನೀರು ಮನೆಗಳಿಗೆ ನುಗ್ಗಿದ ಪರಿಣಾಮ ಕನಿಷ್ಠ 40 ಸಾವಿರಕ್ಕೂ ಅಧಿಕ ಜನರು ತೊಂದರೆ ಅನುಭವಿಸಿದರು.
ಜೋರಖಾರ್ ನದಿ ನೀರಿನ ಮಟ್ಟ ಇದ್ದಕ್ಕಿದ್ದಂತೆ ಹೆಚ್ಚಾಗಿ ಪ್ರವಾಹ ನುಗ್ಗಿದ ಹಿನ್ನೆಲೆಯಲ್ಲಿ ಸಾವಿರಾರು ಜನರು ತಮ್ಮ ಮನೆ ಬಿಟ್ಟು ಓಡಿ ಹೋಗಿದ್ದಾರೆ. ಈ ಪ್ರವಾಹದಲ್ಲಿ ಓರ್ವ ವ್ಯಕ್ತಿ ಕೊಚ್ಚಿಕೊಂಡು ಹೋಗಿದ್ದಾನೆ.
ಈ ಪ್ರವಾಹದಿಂದ ಬಲಿಪಾರಾದ ವಿವಿಧ ಭಾಗ ಹಾಗೂ ಚರಿದುವಾರ್‌ನ 36ಕ್ಕೂ ಅಧಿಕ ಗ್ರಾಮಗಳು ತೊಂದರೆಗೀಡಾಗಿವೆ. ರಾಷ್ಟ್ರೀಯ ಹೆದ್ದಾರಿ ನೀರಿನಲ್ಲಿ ಮುಳುಗಿದ್ದು ಸಂಚಾರ ಅಸ್ತವ್ಯಸ್ತವಾಗಿದೆ.
ಅರುಣಾಚಲ ಪ್ರದೇಶದಲ್ಲಿ ಉಗಮವಾಗುವ ಈ ನದಿಯಲ್ಲಿ ಬೆಳಗ್ಗೆ 3 ಗಂಟೆಗೆ ಇದ್ದಕ್ಕಿದ್ದಂತೆ ನೀರು ಏರತೊಡಗಿತು. ಇದರಿಂದ ಬಲಿಪಾರಾದ ಹಲವು ಭಾಗ ಹಾಗೂ ಎನ್‌ಎಚ್-15ರ ಕೆಲವು ಸ್ಥಳಗಳಲ್ಲಿ 4 ಅಡಿಗಳಷ್ಟು ನೀರು ನುಗ್ಗಿತು ಎಂದು ಚಾರಿದುವಾರ್‌ನ ಸರ್ಕಲ್ ಅಧಿಕಾರಿ ಸೂರ್ಜ್ಯಾ ಕಮಲ್ ಬೋರಾಹ್ ತಿಳಿಸಿದ್ದಾರೆ.
ಅರುಣಾಚಲಪ್ರದೇಶದಲ್ಲಿ ಸಂಭವಿಸಿದ ಭೂಕುಸಿತ ಅಥವಾ ಕಾಲುವೆಗೆ ಹಾನಿ ಆಗಿರುವುದರಿಂದ ಪ್ರವಾಹ ಉಂಟಾಗಿರುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ. ಜೂನ್‌ನಲ್ಲಿ ನಿರಂತರ ಮಳೆ ಸುರಿದರೆ ಯಾವ ಪರಿಸ್ಥಿತಿ ನಿರ್ಮಾಣವಾಗುತ್ತದೆಯೋ ಅದೇ ಪರಿಸ್ಥಿತಿ ಇಲ್ಲಿ ಈಗ ನಿರ್ಮಾಣ ಆಗಿದೆ. ಮಾನ್ಸಿರಿ ಹಾಗೂ ಜೋರಖಾರ್ ಮುಂತಾದ ಹಲವು ಪ್ರದೇಶಗಳು ಜಲಾವೃತವಾಗಿವೆ ಎಂದು ಅವರು ತಿಳಿಸಿದ್ದಾರೆ.