ಇನ್ನೂ 10 ವಿಮಾನ ನಿಲ್ದಾಣಗಳಲ್ಲಿ ಕೈ ಸರಕುಗಳಿಗೆ ಟ್ಯಾಗ್ ಅಳವಡಿಕೆ ರದ್ದುಗೊಳಿಸಲು ಕೋರಿದ ಸಿಐಎಸ್‌ಎಫ್
ಗುವಾಹತಿ, ಸೆ. 10: ದೇಶಾದ್ಯಂತ 59 ವಿಮಾನ ನಿಲ್ದಾಣಗಳಿಗೆ ಭದ್ರತೆ ಒದಗಿಸುವ ಅರೆ ಸೇನಾ ಪಡೆ ಸಿಐಎಸ್‌ಎಫ್, ಇನ್ನೂ 10 ವಿಮಾನ ನಿಲ್ದಾಣಗಳಲ್ಲಿ ಕೈ ಸರಕುಗಳಿಗೆ ಟ್ಯಾಗ್ ಅಳವಡಿಸುವುದನ್ನು ಕೊನೆಗಾಣಿಸಲು ಬಯಸಿದೆ ಹಾಗೂ ಅಲ್ಲಿ ಅಗತ್ಯವಿರುವ ಮೂಲಭೂತ ಸೌಕರ್ಯ ಒದಗಿಸಲು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ಪತ್ರ ಬರೆದಿದೆ.
2016 ಡಿಸೆಂಬರ್‌ನಲ್ಲಿ 7 ಮೆಟ್ರೊ ವಿಮಾನ ನಿಲ್ದಾಣಗಳಲ್ಲಿ ಕೈ ಸರಕುಗಳಿಗೆ ಟ್ಯಾಗ್ ಅಳವಡಿಕೆ ರದ್ದುಗೊಳಿಸುವುದನ್ನು ಕೇಂದ್ರ ಕೈಗಾರಿಕಾ ಭದ್ರತಾ ಪಡೆ ಪರಿಶೀಲನಾರ್ಥ ಆರಂಭಿಸಿತ್ತು. ಪರೀಕ್ಷೆ ಬಳಿಕ ದಿಲ್ಲಿ, ಮುಂಬೈ, ಕೋಲ್ಕತಾ, ಬೆಂಗಳೂರು, ಹೈದರಾಬಾದ್, ಅಹ್ಮದಾಬಾದ್ ಹಾಗೂ ಕೊಚ್ಚಿಯಲ್ಲಿ ಈ ಟ್ಯಾಗ್ ಅಳವಡಿಸುವುದನ್ನು ರದ್ದುಗೊಳಿಸಿತು. ತರುವಾಯದ ಹಂತದಲ್ಲಿ ಇನ್ನಷ್ಟು ವಿಮಾನ ನಿಲ್ದಾಣಗಳಲ್ಲಿ ನೂತನ ನಿಯಮಕ್ಕೆ ಒಳಪಡಿಸಲು ನಿರ್ಧರಿಸಿದೆ.
ಸೆಪ್ಟಂಬರ್ 15ರಿಂದ ಅಮೃತಸರ, ಚಂಡಿಗಡ, ವಾರಣಾಸಿ, ಉದಯಪುರ, ರಾಂಚಿ, ದಿಬ್ರುಗಡ, ನಾಗಪುರ, ಥಾಣೆ, ಮಂಗಳೂರು, ತಿರುಚಿ ವಿಮಾನ ನಿಲ್ದಾಣಗಳಲ್ಲಿ ಕೈ ಸರಕುಗಳಿಗೆ ಟ್ಯಾಗ್ ಅಳವಡಿಸುವುದನ್ನು ರದ್ದುಗೊಳಿಸಲು 1 ತಿಂಗಳ ಕಾಲ ಪರೀಕ್ಷಾರ್ಥ ಪ್ರಯೋಗ ನಡೆಸಲಿದೆ.
ಸಿಐಎಸ್‌ಎಫ್ ಈ ಪರೀಕ್ಷೆಗಳನ್ನು ಕೊಯಂಬತ್ತೂರು, ಕಲ್ಲಿಕೋಟೆ, ಇಂಧೋರ್, ಭುವನೇಶ್ವರ, ಬಾಗ್ದೋಗ್ರಾ ಹಾಗೂ ವಡೋದರಾ ವಿಮಾನ ನಿಲ್ದಾಣಗಳಲ್ಲಿ ನಡೆಸಿದೆ. ಆದರೆ, ಭುವನೇಶ್ವರ ಹಾಗೂ ಬಾಗ್ದೋಗ್ರಾದಲ್ಲಿ ಭದ್ರತಾ ಮೂಲ ಸೌಕರ್ಯದ ಬಗ್ಗೆ ತೃಪ್ತಿ ಹೊಂದಿಲ್ಲ.
ನಾಲ್ಕು ವಿಮಾನ ನಿಲ್ದಾಣಗಳಲ್ಲಿ ಕೈ ಸರಕು ಟ್ಯಾಗ್ ಅಳವಡಿಸುವ ನಿಯಮವನ್ನು ರದ್ದುಗೊಳಿಸಲಾಗುವುದು. ಆದರೆ, ಬಾಗ್ದೋಗ್ರಾ ಹಾಗೂ ಭುವನೇಶ್ವರದಲ್ಲಿ ಈ ವ್ಯವಸ್ಥೆ ರದ್ದುಗೊಳಿಸುವ ಮುನ್ನ ಸಿಸಿಟಿವಿ, ಸ್ಕಾನರ್‌ನಂತಹ ಸೌಲಭ್ಯಗಳನ್ನು ಸುಧಾರಿಸುವ ಬಗ್ಗೆ ವಿಮಾನ ನಿಲ್ದಾಣ ಪ್ರಾಧಿಕಾರದಲ್ಲಿ ವಿನಂತಿಸಿದ್ದೇವೆ ಎಂದು ಸಿಐಎಸ್‌ಎಫ್‌ನ ಅಧಿಕಾರಿ ತಿಳಿಸಿದ್ದಾರೆ.
ಜೂನ್ 1ರಿಂದ ಚೆನ್ನೈ, ಪಾಟ್ನಾ, ಗುವಾಹತಿ, ತಿರುವನಂತಪುರ, ಜೈಪುರ ಹಾಗೂ ಲಕ್ನೊದಲ್ಲೂ ಕೈ ಸರಕು ಟ್ಯಾಗ್ ಅನ್ನು ಕೇಂದ್ರ ಕೈಗಾರಿಕಾ ಭದ್ರತಾ ಪಡೆ ರದ್ದುಗೊಳಿಸಲಿದೆ.