ಸ್ವಿಸ್: ನೀರ್ಗಲ್ಲು ಕುಸಿತದ ಭೀತಿ; ನೂರಾರು ಮಂದಿ ಸ್ಥಳಾಂತರ
Update: 2017-09-10 23:09 IST
ಜಿನೇವಾ,ಸೆ.10: ಸ್ವಿಝರ್‌ಲ್ಯಾಂಡ್‌ನ ಟ್ರಿಫ್ಟ್‌ನಲ್ಲಿರುವ ಅಲ್ಪೈನ್ ನೀರ್ಗಲ್ಲು ಪ್ರದೇಶವು ಕುಸಿಯುವ ಅಪಾಯದಲ್ಲಿರುವುದರಿಂದ ಆಸುಪಾಸಿನ ಪ್ರದೇಶಗಳಲ್ಲಿ ವಾಸಿಸುವ ನೂರಾರು ಜನರನ್ನು ಸ್ವಿಸ್ ಅಧಿಕಾರಿಗಳು ತೆರವುಗೊಳಿಸಿದ್ದಾರೆ. ನೀರ್ಗಲ್ಲು ಕುಸಿದು ಭಾರೀ ಹಿಮಪಾತ ಸಂಭವಿಸುವ ಸಾಧ್ಯತೆಯಿದೆಯೆಂದು ಅವರು ಎಚ್ಚರಿಕೆ ನೀಡಿದ್ದಾರೆ.
ಟ್ರಿಫ್ಟ್ ನೀರ್ಗಲ್ಲು ಮೇಲ್ಭಾಗದಲ್ಲಿ ಗಣನೀಯವಾದ ಚಲನೆಯನ್ನು ಭೂಶಾಸ್ತ್ರಜ್ಞರು ಗಮನಿಸಿದ್ದಾರೆ. ಈ ನೀರ್ಗಲ್ಲು ಒಂದೇ ದಿನದಲ್ಲಿ 130 ಸೆಂ.ಮೀ.ವರೆಗೆ ಚಲಿಸಿದೆಯೆಂದು ಅವರು ಹೇಳಿದ್ದಾರೆ.
ಒಂದು ವೇಳೆ ನೀರ್ಗಲ್ಲು ಕುಸಿದುಬಿದ್ದಲ್ಲಿ ಭಾರೀ ಹಿಮಪಾತವುಂಟಾಗಿ ಅಲ್ಲಿರುವ ಸಾದ್-ಗ್ರುಂಡ್ ಹಳ್ಳಿಗೆ ಹಾನಿಯಾಗುವ ಸಾಧ್ಯತೆಯಿರುವುದರಿಂದ ಈಗಾಗಲೇ ಅಲ್ಲಿಂದ 222 ಮಂದಿಯನ್ನು ಸ್ಥಳಾಂತರಿಸಲಾಗಿದೆಯೆಂದು ಪೊಲೀಸ್ ವಕ್ತಾರ ಸೈಮನ್ ಬ್ಯುಮ್ನಾನ್ ಹೇಳಿದ್ದಾರೆ.