ಅಫ್ಘಾನಿಸ್ತಾನ: ತಾಲಿಬಾನ್, ಐಸಿಸ್‌ನಿಂದ 35 ಮಂದಿಯ ಅಪಹರಣ
Update: 2017-09-10 23:13 IST
ಕಾಬೂಲ್,ಸೆ.10: ಉತ್ತರ ಅಫ್ಘಾನಿಸ್ತಾನದ ಜಾವ್‌ಝಾನ್ ಪ್ರಾಂತದಲ್ಲಿ ಶಂಕಿತ ಐಸಿಸ್ ಹಾಗೂ ತಾಲಿಬಾನ್ ಬಂಡುಕೋರರು 35ಕ್ಕೂ ಅಧಿಕ ನಾಗರಿಕರನ್ನು ಅಪಹರಿಸಿದ್ದಾರೆಂದು ಸ್ಥಳೀಯರು ರವಿವಾರ ತಿಳಿಸಿದ್ದಾರೆ.
ಐಸಿಸ್ ಹಾಗೂ ತಾಲಿಬಾನ್ ಬಂಡುಕೋರರು ಜಾವ್‌ಝಾನ್ ಪ್ರಾಂತದ ಕ್ಯುಶ್ ಟಿಪಾ ಹಾಗೂ ಡರ್ಝಾಬ್ ಜಿಲ್ಲೆಗಳಲ್ಲಿ ಪ್ರತ್ಯೇಕ ಪ್ರತ್ಯೇಕವಾಗಿ ತಪಾಸಣಾ ಠಾಣೆಗಳನ್ನು ನಿರ್ಮಿಸಿ, ಸ್ಥಳೀಯ ನಾಗರಿಕರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಈ ಎರಡೂ ಗುಂಪುಗಳು ಈ ವ್ಯಕ್ತಿಗಳನ್ನು ಎದುರಾಳಿ ಗುಂಪಿನ ಸಂಪರ್ಕವಿದೆಯೆಂದು ಆರೋಪಿಸಿ ಬಂಧನಕ್ಕೊಳಪಡಿಸಿದ್ದಾರೆಂದು ಸ್ಥಳೀಯ ನಿವಾಸಿಯೊಬ್ಬರು ಹೇಳಿದ್ದಾರೆ.
ಎರಡೂ ಎದುರಾಳಿ ಗುಂಪುಗಳು ಒಟ್ಟು 35 ಮಂದಿಯನ್ನು ಅಪಹರಿಸಿದ್ದಾರೆಂದು ಅವರು ತಿಳಿಸಿದ್ದಾರೆ.
ಈ ಮಧ್ಯೆ ಅಫ್ಘಾನ್ ಸೇನೆಯ 209ನೇ ಶಹೀನ್ ಕಾರ್ಪ್ಸ್ ಬೆಟಾಲಿಯನ್‌ನ ಮಾಧ್ಯಮ ಅಧಿಕಾರಿ ನಸ್ರತುಲ್ಲಾ ಜಮಶಿದಿ ಅವರು, ನಾಗರಿಕರ ಅಪಹರಣ ಘಟನೆಯ ಬಗ್ಗೆ ತಮಗೆ ಮಾಹಿತಿಯಿರುವುದಾಗಿ ಹೇಳಿದ್ದಾರೆ.