ಸ್ತ್ರೀಯರನ್ನು ಗೌರವಿಸದವರಿಗೆ ವಂದೇ ಮಾತರಂ ಹಾಡುವ ಹಕ್ಕಿಲ್ಲ : ಮೋದಿ

Update: 2017-09-11 13:10 GMT

ಹೊಸದಿಲ್ಲಿ, ಸೆ.11: ಸಾಮಾಜಿಕ ಅನಿಷ್ಟಗಳ ವಿರುದ್ಧ ಹೋರಾಡುವಂತೆ ಜನರಿಗೆ ಕರೆ ನೀಡಿರುವ ಪ್ರಧಾನಿ ಮೋದಿ, ಸ್ವಚ್ಛತೆಯ ಬಗ್ಗೆ ಕಾಳಜಿ ಹೊಂದಿಲ್ಲದ ಹಾಗೂ ಮಹಿಳೆಯರನ್ನು ಗೌರವಿಸದ ವ್ಯಕ್ತಿಗೆ ವಂದೇ ಮಾತರಂ ಹಾಡುವ ಹಕ್ಕಿಲ್ಲ ಎಂದು ಹೇಳಿದ್ದಾರೆ.

ಸ್ವಾಮಿ ವಿವೇಕಾನಂದರು ಶಿಕಾಗೊದಲ್ಲಿ ಮಾಡಿದ್ದ ಭಾಷಣದ 125ನೇ ವರ್ಷಾಚರಣೆ ಹಾಗೂ ಪಂಡಿತ್ ದೀನದಯಾಳ್ ಉಪಾಧ್ಯಾಯರ ಶತಮಾನೋತ್ಸವ ಆಚರಣೆಯ ಅಂಗವಾಗಿ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ಸಮ್ಮೇಳನದಲ್ಲಿ ಮಾತನಾಡಿದ ಪ್ರಧಾನಿ ಸಾಮಾಜಿಕ ಬದಲಾವಣೆಯ ಅಗತ್ಯದ ಬಗ್ಗೆ ಒತ್ತಿ ಹೇಳಿದರು. ಜನರು ಆಗಾಗ ವಂದೇ ಮಾತರಂ ಎನ್ನುತ್ತಾರೆ. ಆದರೆ ನಾವು ಮಹಿಳೆಯರನ್ನು ಗೌರವಿಸುತ್ತಿದ್ದೇವೆಯೇ ಎಂದು ನಮ್ಮಲ್ಲೇ ಪ್ರಶ್ನಿಸಬೇಕಿದೆ. ಪಾನ್ ತಿಂದು ಭಾರತ ಮಾತೆಯ ಮೇಲೆ ಉಗುಳುತ್ತೇವೆ. ಆಗ ನಾವು ವಂದೇ ಮಾತರಂ ಹೇಳಲು ಆಗುತ್ತದೆಯೇ. ಎಲ್ಲಾ ಕಸಕಡ್ಡಿ, ತ್ಯಾಜ್ಯಗಳನ್ನು ಭಾರತ ಮಾತೆಯ ಮೇಲೆಸೆದು ವಂದೇ ಮಾತರಂ ಹೇಳುವುದರಲ್ಲಿ ಅರ್ಥವಿದೆಯೇ ಎಂದು ಮೋದಿ ಪ್ರಶ್ನಿಸಿದರು. ಈ ದೇಶವನ್ನು ಸ್ವಚ್ಛಗೊಳಿಸಲು ಸಾಧ್ಯವಿಲ್ಲ ಎಂದರೆ ಕೊಳಕಾಗಿಸಲೂ ಯಾರಿಗೂ ಹಕ್ಕಿಲ್ಲ. ಸ್ವಚ್ಛತಾ ಕಾರ್ಮಿಕರು ವಂದೇ ಮಾತರಂ ಹಾಡುವ ಮೊದಲ ಅಧಿಕಾರ ಪಡೆದಿದ್ದಾರೆ ಎಂದು ಪ್ರಧಾನಿ ಹೇಳಿದರು.

ಕೃಷಿ ಕ್ರಾಂತಿ, ಹೊಸ ಸಂಶೋಧನೆ, ಕೌಶಲ್ಯ ಅಭಿವೃದ್ಧಿ, ಅಂತ್ಯೋದಯ.. ಹೀಗೆ ಸ್ವಾಮಿ ವಿವೇಕಾನಂದರ ಚಿಂತನೆಗಳನ್ನು ತಮ್ಮ ಸರಕಾರ ಯೋಜನೆಗಳನ್ನಾಗಿ ಜಾರಿಗೊಳಿಸಿದೆ ಎಂದ ಅವರು, ವಿವೇಕಾನಂದರ ಆದರ್ಶವನ್ನು ಪಾಲಿಸಿ ಸಾಮಾಜಿಕ ಅನಿಷ್ಟ ಪದ್ದತಿಯ ವಿರುದ್ಧ ಹೋರಾಡುವಂತೆ ಕರೆ ನೀಡಿದರು.

1893ರ ನವೆಂಬರ್ 9ರಂದು ವಿವೇಕಾನಂದರು ಶಿಕಾಗೊದಲ್ಲಿ ಭಾಷಣ ಮಾಡಿದರೆ, 2001ರ ನವೆಂಬರ್ 9ರಂದು ಅಮೆರಿಕದ ಮೇಲೆ ಭಯೋತ್ಪಾಕರ ದಾಳಿ ನಡೆಯಿತು. ಒಂದು ಘಟನೆ ಜಗತ್ತಿಗೆ ಪ್ರೀತಿ ಮತ್ತು ಸಹೋದರತ್ವದ ಸಂದೇಶ ನೀಡಿದರೆ ಇನ್ನೊಂದು ಘಟನೆ ಇದಕ್ಕೆ ತದ್ವಿರುದ್ಧವಾಗಿತ್ತು ಎಂದು ಮೋದಿ ಹೇಳಿದರು. ವಿಶ್ವವಿದ್ಯಾನಿಲಯ, ಶಾಲೆ. ಕಾಲೇಜುಗಳ ಚುನಾವಣೆಯಲ್ಲಿ ಸ್ಪರ್ಧಿಸುವ ವಿದ್ಯಾರ್ಥಿ ಮುಖಂಡರು ಹಲವು ಭರವಸೆಗಳನ್ನು ನೀಡುತ್ತಾರೆ. ಮುಂದಿನ ದಿನಗಳಲ್ಲಿ ಶಿಕ್ಷಣ ಸಂಸ್ಥೆಗಳ ಸುತ್ತಮುತ್ತ ಸ್ವಚ್ಛತೆ ಕಾಯ್ದುಕೊಳ್ಳುವ ಭರವಸೆಯೂ ವಿದ್ಯಾರ್ಥಿಗಳ ಚುನಾವಣಾ ಪ್ರಣಾಳಿಕೆಯಲ್ಲಿ ಸೇರಿರಲಿ ಮತ್ತು ಈ ಭರವಸೆ ಕಾರ್ಯರೂಪಕ್ಕೆ ಬರುವಂತಾಗಲಿ ಎಂದವರು ಆಶಿಸಿದರು.

ಶಾಲೆ, ಕಾಲೇಜುಗಳಲ್ಲಿ ‘ರೋಸ್ ಡೇ’ ಮುಂತಾದ ಆಚರಣೆಗೆ ತನ್ನ ವಿರೋಧವಿಲ್ಲ ಎಂದ ಮೋದಿ, ಆದರೆ ವಿದ್ಯಾರ್ಥಿಗಳು ರೋಬಟ್‌ಗಳಂತೆ ಆಗಬಾರದು . ವಿದ್ಯಾರ್ಥಿಗಳು ರಚನಾತ್ಮಕತೆ ಹಾಗೂ ಹುಮ್ಮಸ್ಸು ಬೆಳೆಸಿಕೊಂಡರೆ ‘ಯುವ ಭಾರತ - ನವ ಭಾರತ’ ಪರಿಕಲ್ಪನೆ ಸಾಕಾರರೂಪಕ್ಕೆ ಬರುವುದರಲ್ಲಿ ಸಂಶಯವಿಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News