×
Ad

7 ಸಂಸದರು, 98 ಶಾಸಕರ ಆಸ್ತಿಯಲ್ಲಿ ಏರಿಕೆ: ಸುಪ್ರೀಂಕೋರ್ಟ್‌ಗೆ ಮಾಹಿತಿ ನೀಡಿದ ಸಿಬಿಡಿಟಿ

Update: 2017-09-11 22:28 IST

ಹೊಸದಿಲ್ಲಿ, ಸೆ. 5: ಲೋಕಸಭೆಯ 7 ಸಂಸದರು ಹಾಗೂ 98 ಶಾಸಕರ ಆಸ್ತಿ ಗಣನೀಯವಾಗಿ ಏರಿಕೆಯಾಗಿದೆ ಎಂದು ಸೋಮವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಲಾಯಿತು.

ಸದಸ್ಯರ ಹೆಸರನ್ನು ಮುಚ್ಚಿದ ಲಕೋಟೆಯಲ್ಲಿ ಮಂಗಳವಾರ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲಾಗುವುದು ಎಂದು ನೇರ ತೆರಿಗೆಗಳ ಕೇಂದ್ರ ಮಂಡಳಿ (ಸಿಬಿಡಿಟಿ) ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

ಅವರ ಆಸ್ತಿ ಬಗ್ಗೆ ಆದಾಯ ತೆರಿಗೆ ಇಲಾಖೆ ಪ್ರಾಥಮಿಕ ತನಿಖೆ ನಡೆಸಲಿದೆ. ಲೋಕಸಭೆ ಸಂಸದರ ಆಸ್ತಿಯಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿ ಹಾಗೂ ಶಾಸಕರ ಆಸ್ತಿಯಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ ಎಂದು ಆದಾಯ ತೆರಿಗೆ ಇಲಾಖೆಯ ತನಿಖೆಯಿಂದ ಬಹಿರಂಗಗೊಂಡಿದೆ.

ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವಾಗ ಆದಾಯ ಮೂಲ ಬಹಿರಂಗಪಡಿಸುವ ಕುರಿತು ಸರಕಾರೇತರ ಸಂಸ್ಥೆ ಲೋಕ್ ಪ್ರಹಾರಿ ಮನವಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿತು. ರಾಜಕಾರಣಿಗಳ ಆಸ್ತಿಯಲ್ಲಿ ಶೇ. 500ರಷ್ಟು ಏರಿಕೆಯಾಗಿದೆ ಎಂದು ದೂರೂದಾರರು ಆರೋಪಿಸಿದ್ದರು. ಇನ್ನೂ 9 ಲೋಕಸಭೆ ಸಂಸದರು, 11 ರಾಜ್ಯಸಭೆ ಸಂಸದರು ಹಾಗೂ 42 ಶಾಸಕರ ಆಸ್ತಿಯ ಪ್ರಾಥಮಿಕ ಅಂದಾಜು ನಡೆಯುತ್ತಿದೆ ಎಂದು ಸಿಬಿಡಿಟಿ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

ಕೇಂದ್ರ ಸರಕಾರದ ನಡತೆಯಿಂದ ಅಸಮಾಧಾನಗೊಂಡಿರುವ ಸುಪ್ರೀಂ ಕೋರ್ಟ್, ಸಂಸದರು ಹಾಗೂ ಶಾಸಕರ ಆಸ್ತಿಯಲ್ಲಿ ಏರಿಕೆಯಾಗಿರುವ ಬಗ್ಗೆ ಅಗತ್ಯವಿರುವ ಮಾಹಿತಿ ಸಲ್ಲಿಸುವಂತೆ ಆದೇಶಿಸಿದೆ.

 ಚುನಾವಣೆಗೆ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವಾಗ ಅವರ, ಅವರ ಪತ್ನಿ, ಮಕ್ಕಳು ಹಾಗೂ ಇತರ ಅವಲಂಬಿತರಿಗಿರುವ ಆಸ್ತಿ ವಿವರ ಸಲ್ಲಿಸುವಂತೆ ಹೇಳಲಾಗಿತ್ತು. ಆದರೆ, ಅವರು ಆದಾಯದ ಮೂಲವನ್ನು ಬಹಿರಂಗಗೊಳಿಸಿಲ್ಲ ಎಂದು ಮನವಿಯಲ್ಲಿ ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News