×
Ad

ವಿಶ್ವದ ಅತ್ಯಂತ ದುಬಾರಿ ಕಾಫಿಹುಡಿ ಉತ್ಪಾದನೆ ಆರಂಭಿಸಿದ ಭಾರತ

Update: 2017-09-11 22:38 IST

ಹೊಸದಿಲ್ಲಿ, ಸೆ.11: ವಿಶ್ವದ ಅತ್ಯಂತ ದುಬಾರಿ ಬೆಲೆಯ ಕಾಫಿಹುಡಿಯ ಉತ್ಪಾದನೆಯನ್ನು ಭಾರತ ಆರಂಭಿಸಿದೆ. ಸಿವೆಟ್ ಕಾಫಿ ಅಥವಾ ಲುವಾರ್ಕ್ ಕಾಫಿ ಎಂದು ಕರೆಯಲಾಗುವ ಈ ಕಾಫಿಹುಡಿ ಗಲ್ಫ್ ರಾಷ್ಟ್ರಗಳಲ್ಲಿ ಮತ್ತು ಯುರೋಪ್‌ನಲ್ಲಿ ಅತ್ಯಂತ ಜನಪ್ರಿಯವಾಗಿದ್ದು ಇದರ ಬೆಲೆ ಒಂದು ಕಿ.ಗ್ರಾಂ.ಗೆ 20,000 ರೂ.ನಿಂದ 25,000 ರೂ. ಆಗಿದೆ.

ಪುನುಗು ಬೆಕ್ಕು ಎಂದು ಕರೆಯಲಾಗುವ ಕಾಡು ಬೆಕ್ಕಿನ ದೇಹದಿಂದ ಹೊರಬೀಳುವ ತ್ಯಾಜ್ಯದಿಂದ ಇದನ್ನು ತಯಾರಿಸಲಾಗುತ್ತದೆ. ಕೊಡಗಿನಲ್ಲಿ ಈಗ ಈ ವಿಶಿಷ್ಟ ಕಾಫಿಹುಡಿಯ ಉತ್ಫಾದನೆ ಆರಂಭವಾಗಿದೆ. ಪುನುಗು ಬೆಕ್ಕುಗಳಿಗೆ ಕಾಫಿಯ ಬೀಜವೆಂದರೆ ಪಂಚಪ್ರಾಣ. ಕಾಫಿತೋಟಕ್ಕೆ ನುಸುಳುವ ಈ ಬೆಕ್ಕುಗಳು ಕಾಫಿ ಬೀಜದ ತಿರುಳನ್ನು ತಿನ್ನುತ್ತವೆ. ಇದು ಪುನಿಗು ಬೆಕ್ಕಿನ ಉದರ ಪ್ರವೇಶಿಸಿ ಕರುಳಿನಲ್ಲಿ ಕಿಣ್ವದ ಜೊತೆ ಬೆರೆಯುತ್ತದೆ. ಮರುದಿನ ಈ ಬೆಕ್ಕುಗಳು ಹೊರಹಾಕುವ ತ್ಯಾಜ್ಯ (ಮಲ)ದಲ್ಲಿ ಈ ಬೀಜದ ಅಂಶ ಸೇರಿಕೊಂಡಿರುತ್ತದೆ ಮತ್ತು ಇದು ಅತ್ಯಂತ ಸುವಾಸನೆಯುಕ್ತವಾಗಿರುತ್ತದೆ.

ಈ ಅಂಶವನ್ನು ಸಂಗ್ರಹಿಸಿ ಇದನ್ನು ಕಾಫಿ ಹುಡಿ ತಯಾರಿಸುವಾಗ ಬೆರೆಸಿದರೆ ಅತ್ಯಂತ ಸುವಾಸನೆಯುಕ್ತವಾಗಿರುತ್ತದೆ. ಆದರೆ ಪುನುಗು ಬೆಕ್ಕಿನ ದೇಹದಿಂದ ಹೊರಬೀಳುವ ತ್ಯಾಜ್ಯವನ್ನು ಸಂಗ್ರಹಿಸುವ ಕಾರ್ಯ ಅತ್ಯಂತ ತ್ರಾಸದಾಯಕವಾಗಿರುವ ಕಾರಣ ಈಗ ಸಣ್ಣ ಮಟ್ಟದಲ್ಲಿ ‘ಸಿವೆಟ್ ಕಾಫಿ’ ತಯಾರಿಸುವ ಉಪಕ್ರಮವನ್ನು ಕರ್ನಾಟಕದ ಕೊಡಗಿನಲ್ಲಿರುವ ‘ಕೂರ್ಗ್ ಕನ್ಸಾಲಿಡೇಟೆಡ್ ಕಮಾಡಿಟೀಸ್’ (ಸಿಸಿಸಿ) ಆರಂಭಿಸಿದೆ. ಆರಂಭಿಕ ಹಂತದಲ್ಲಿ 20 ಕಿ.ಗ್ರಾಂನಷ್ಟು ಸಿವೆಟ್ ಕಾಫಿ ಉತ್ಪಾದಿಸಲಾಗಿದೆ. 2015-16ರಲ್ಲಿ 60 ಕಿ.ಗ್ರಾಂ.ನಷ್ಟು ಹಾಗೂ ಕಳೆದ ವರ್ಷ 200 ಕಿ.ಗ್ರಾಂ. ಕಾಫಿಹುಡಿ ಉತ್ಪಾದಿಸಲಾಗಿದೆ. ಅಕ್ಟೋಬರ್‌ನಲ್ಲಿ ಪ್ರಥಮ ಬೆಳೆ ಕಟಾವಿಗೆ ಬರುವಾಗ ಸುಮಾರು 50 ಕಿ.ಗ್ರಾಂನಷ್ಟು ಉತ್ಪಾದನೆ ನಿರೀಕ್ಷಿಸಲಾಗಿದೆ ಎಂದು ಸಿಸಿಸಿಯ ಸಂಸ್ಥಾಪಕರಲ್ಲಿ ಓರ್ವರಾಗಿರುವ ನರೇಂದ್ರ ಹೆಬ್ಬಾರ್ ಹೇಳಿದ್ದಾರೆ. ‘ಎಯ್ನಾಮನೆ’ ಎಂಬ ಬ್ರಾಂಡ್‌ಹೆಸರಲ್ಲಿ ಸ್ಥಳೀಯವಾಗಿ ಇದನ್ನು ಮಾರಾಟ ಮಾಡಲಾಗುತ್ತಿದೆ. ಶೀಘ್ರದಲ್ಲೇ ಈ ಕಾಫಿಯನ್ನು ‘ಕೂರ್ಗ್ ಲುವಾರ್ಕ್ ಕಾಫಿ’ ಎಂಬ ಹೆಸರಲ್ಲಿ ಸ್ಥಳೀಯವಾಗಿ ಮಾರಾಟ ಮಾಡುವ ಕೆಫೆಯನ್ನು ತೆರೆಯಲಾಗುವುದು . ಇಲ್ಲಿ ಕಪುಚಿನೊ, ಎಕ್ಸ್‌ಪ್ರೆಸೊ ಎಂಬ ಇತರ ಎರಡು ಬ್ರಾಂಡ್‌ನ ಕಾಫಿಹುಡಿಯೂ ದೊರೆಯಲಿದೆ ಎಂದವರು ತಿಳಿಸಿದ್ದಾರೆ. ಸ್ಥಳೀಯವಾಗಿ ಈ ಕಾಫಿಹುಡಿಯ ಬೆಲೆ ಕಿ.ಗ್ರಾಂಗೆ 8,000 ರೂ. ವಿದೇಶದಲ್ಲಿ 20,000ದಿಂದ 25,000 ರೂ. ಬೆಲೆ ಇದೆ. ಆದರೆ ಈಗ ಉತ್ಪಾದನೆ ಕಡಿಮೆ ಪ್ರಮಾಣದಲ್ಲಿ ಆಗುತ್ತಿರುವ ಕಾರಣ ರಫ್ತು ಪ್ರಕ್ರಿಯೆ ದುಬಾರಿಯಾಗುತ್ತದೆ ಎಂದು ಹೆಬ್ಬಾರ್ ಹೇಳಿದ್ದಾರೆ.

ವಿದೇಶದಲ್ಲಿ ಪುನುಗುಬೆಕ್ಕುಗಳನ್ನು ಗೂಡಿನಲ್ಲಿ ಕೂಡಿಹಾಕಿ, ಅವುಗಳಿಗೆ ಕಾಫಿ ಬೀಜವನ್ನು ತಿನ್ನಿಸಲಾಗುತ್ತದೆ. ಆದರೆ ನಾವು ನೈಸರ್ಗಿಕವಾಗಿ ಇದನ್ನು ತಯಾರಿಸುವ ಕಾರಣ ಈ ಕಾಫಿಗೆ ವಿಶೇಷ ಪರಿಮಳ ಇರುತ್ತದೆ ಎಂದವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News