×
Ad

ಬೆರಳಚ್ಚಿನ ತದ್ರೂಪ ಬಳಸಿ ನಕಲಿ ಆಧಾರ್ ಕಾರ್ಡ್ ತಯಾರಿ: 10 ಮಂದಿಯ ಬಂಧನ

Update: 2017-09-11 22:40 IST

ಹೊಸದಿಲ್ಲಿ, ಸೆ. 10: ಹ್ಯಾಕರ್‌ಗಳು ಕೇವಲ ಬೆರಳಚ್ಚಿನ ಆಧಾರ್ ಬಯೋಮೆಟ್ರಿಕ್ ಪ್ರಕ್ರಿಯೆಯಿಂದ ಮಾತ್ರವಲ್ಲದೆ, ರೆಟಿನಾ ಸ್ಕ್ಯಾನಿಂಗ್‌ನಿಂದಲೂ ತಪ್ಪಿಸಿಕೊಳ್ಳಲು ಅಡ್ಡ ದಾರಿ ಕಂಡುಕೊಳ್ಳುತ್ತಿದ್ದಾರೆ ಎಂದು ಉತ್ತರಪ್ರದೇಶ ಪೊಲೀಸರು ಸೋಮವಾರ ತಿಳಿಸಿದ್ದಾರೆ.

ಯುಐಡಿಎಐಯ ಬಯೋಮೆಟ್ರಿಕ್ ವ್ಯವಸ್ಥೆ ಬದಲಾಯಿಸುವ ಹಾಗೂ ಬೆರಳಚ್ಚಿನ ತದ್ರೂಪ ಬಳಸಿ ನಕಲಿ ಆಧಾರ್ ಕಾರ್ಡ್ ಅನ್ನು ತಯಾರಿಸುವ ಹ್ಯಾಕರ್‌ಗಳ ರಾಜ್ಯ ವ್ಯಾಪಿ ಜಾಲವನ್ನು ಪೊಲೀಸರ ವಿಶೇಷ ತಂಡ ಭೇದಿಸಿದ ಬಳಿಕ ಈ ವಿಷಯ ಬೆಳಕಿಗೆ ಬಂದಿದೆ.

 ಕಾನ್ಪುರದಲ್ಲಿ ಪೊಲೀಸರ ವಿಶೇಷ ಕಾರ್ಯಪಡೆ ಕಾರ್ಯಾಚರಣೆ ನಡೆಸಿದ್ದು, ನಕಲಿ ಹಾಗೂ ತದ್ರೂಪಿ ಸೃಷ್ಟಿಯ ಆರೋಪದಲ್ಲಿ 10 ಮಂದಿಯನ್ನು ಬಂಧಿಸಿದೆ.

 ನಕಲಿ ಅರ್ಜಿದಾರರನ್ನು ಸೃಷ್ಟಿಸಲು ಯುಐಡಿಎಐ ಅರ್ಜಿದಾರರ (ಆಧಾರ್ ನೋಂದಣಿ ಮಾಡುವ ಏಜೆನ್ಸಿ ಬಳಸುವ ಸಾಫ್ಟ್‌ವೇರ್) ಮೂಲ ಸಂಕೇತ (ಸೋರ್ಸ್ ಕೋಡ್)ದೊಂದಿಗೆ ತಿದ್ದುಪಡಿ ಹಾಗೂ ಬೆರಳಚ್ಚು ಪ್ರತಿಗಳೊಂದಿಗೆ ಯುಐಡಿಎಐಯ ಬಯೋಮೆಟ್ರಿಕ್ ನಿಯಮಗಳನ್ನು ಆರೋಪಿಗಳು ಬದಲಾಯಿಸುತ್ತಿದ್ದರು. ದೃಢೀಕರಣ ಪ್ರಕ್ರಿಯೆಯ ಆಪರೇಟರ್ ಅನ್ನು ಬದಲಾಯಿಸಿ ನಕಲಿ ಆಧಾರ್ ಕಾರ್ಡ್‌ಗಳನ್ನು ಸೃಷ್ಟಿಸುತ್ತಿದ್ದರು. ಹ್ಯಾಕರ್‌ಗಳು ಅರ್ಜಿದಾರರ ಅರ್ಜಿಗಳನ್ನು ಅನಧಿಕೃತ ಆಪರೇಟರ್‌ಗಳಿಗೆ ಕಳುಹಿಸಿಕೊಡುತ್ತಿದ್ದು, 5 ಸಾವಿರ ರೂ. ಶುಲ್ಕ ಪಡೆಯುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಲಕ್ನೊದ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ. ಆರೋಪಿಗಳ ವಿಚಾರಣೆ ಹಾಗೂ ತನಿಖೆಯ ಬಳಿಕ ಪೊಲೀಸರು ವಂಚನೆ ಹಾಗೂ ವ್ಯಕ್ತಿಯನ್ನು ಬದಲಾಯಿಸುವ ವಿಧಾನವನ್ನು ವಿವರಿಸಿದ್ದಾರೆ. ಇತ್ತೀಚೆಗೆ ದಿಯೋರಿಯಾ ಹಾಗೂ ಲಕ್ನೊದಲ್ಲಿ ನಕಲಿ ಆಧಾರ್ ಕಾರ್ಡ್ ಪತ್ತೆಯಾದ ಬಳಿಕ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದರು.

ಆಧಾರ್ ನಕಲಿ ಹೇಗೆ ಮಾಡುತ್ತಿದ್ದರು: ಆರೋಪಿಗಳು ಆಧಿಕೃತ ಆಧಾರ್ ನೋಂದಣಿ ಮಾಡುವ ಸಂಸ್ಥೆಯ ಯುಐಡಿಎಐ ವ್ಯವಸ್ಥೆಯಿಂದ ಬೆರಳಚ್ಚು ಮುದ್ರಣ ತೆಗೆದುಕೊಳ್ಳುತ್ತಿದ್ದರು. ಅನಂತರ ಈ ಬೆರಳಚ್ಚನ್ನು ಬಟರ್‌ಶೀಟ್ ಮೇಲೆ ಮುದ್ರಿಸುತ್ತಿದ್ದರು. ಬಳಿಕ ಪೋಲಿಮರ್ ರೆಸಿನ್ ಬಳಸಿ ಕೃತಕ ಬೆರಳಚ್ಚು ರೂಪಿಸುತ್ತಿದ್ದರು. ಈ ಬೆರಳಚ್ಚು ಬಳಸಿ ಆಧಾರ್ ವೆಬ್‌ಸೈಟ್ ಲಾಗ್ ಆನ್ ಆಗುತ್ತಿದ್ದರು.

ಏನೆಲ್ಲ ವಶಪಡಿಸಲಾಗಿದೆ: ನಕಲುಗೊಳಿಸಲು ಬಳಸುತ್ತಿದ್ದ ಸಾಧನ, 38 ಬೆರಳಚ್ಚು ಪೇಪರ್, 46 ಬೆರಳಚ್ಚು ಉತ್ಪಾದಿಸುವ ರಾಸಾಯನಿಕ, 2 ಆಧಾರ್ ಬೆರಳಚ್ಚು ಸ್ಕ್ಯಾನರ್, 2 ಐರಿಸ್ ರೆಟಿನಾ ಸ್ಕ್ಯಾನರ್, 8 ರಬ್ಬರ್ ಸ್ಟ್ಯಾಂಪ್, 18 ಆಧಾರ್ ಕಾರ್ಡ್, ವೆಬ್ ಕ್ಯಾಮ್, ಜಿಪಿಎಸ್ ಸಾಧನ, ಪಾಲಿಮರ್ ಒಣಗಿಸುವ ಸಲಕರಣೆ, 12 ಲ್ಯಾಪ್‌ಟಾಪ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News