ಕೈಬೀಸುವಾಗ ಆಯತಪ್ಪಿದ ಪೋಪ್ ಫ್ರಾನ್ಸಿಸ್
ಕಾರ್ಟಿಜಿನಾ,ಸೆ.11: ಅಮೆರಿಕದ ಕೊಲಂಬಿಯಾ ರಾಜ್ಯದಲ್ಲಿ ಪ್ರವಾಸದಲ್ಲಿರುವ ಪೋಪ್ ಫ್ರಾನ್ಸಿಸ್ ರವಿವಾರ ತಾನು ಪ್ರಯಾಣಿಸುತ್ತಿದ್ದ ವಿಶೇಷ ಮೊಬೈಲ್ ವಾಹನದಲ್ಲಿ ಜನಸಂದಣಿಯತ್ತ ಕೈಬೀಸುತ್ತಿದ್ದ ಸಂದರ್ಭದಲ್ಲಿ ಆಯತಪ್ಪಿದ್ದರಿಂದ ಅವರ ಎಡಭಾಗದ ಗಲ್ಲ ಹಾಗೂ ಕಣ್ಣಿನಗುಡ್ಡೆಗೆ ಪೆಟ್ಟಾಗಿದೆ. ಆದರೆ ಅದು ಗಂಭೀರಗಾಯವಲ್ಲವೆಂದು ಅಧಿಕೃತ ಮೂಲಗಳು ತಿಳಿಸಿವೆ.
ತಕ್ಷಣವೇ ಪೋಪ್ ಅವರಿಗೆ ಮಂಜುಗಡ್ಡೆಯ ಚಿಕಿತ್ಸೆ ನೀಡಲಾಗಿದ್ದು, ಅವರು ತಮ್ಮ ಪ್ರಯಾಣವನ್ನು ಮುಂದುವರಿಸಿದ್ದಾರೆಂದು ವ್ಯಾಟಿಕನ್‌ನ ಹೇಳಿಕೆ ತಿಳಿಸಿದೆ.
ಪೋಪ್ ಫ್ರಾನ್ಸಿಸ್ ಪ್ರಯಾಣಿಸುತ್ತಿದ್ದ ವಾಹನವು ಅವರಿಗಾಗಿಯೇ ವಿಶೇಷವಾಗಿ ವಿನ್ಯಾಸಗೊಳಿಸಲ್ಪಟ್ಟಿದೆ. ಈ ತೆರೆದ ವಾಹನದಲ್ಲಿ ಪೋಪ್ ಅವರು ನಿಂತುಕೊಂಡು, ಸಾರ್ವಜನಿಕರಿಗೆ ಶುಭಾಶಗಳನ್ನು ಕೋರುತ್ತಿದ್ದಾಗ ಅವರು ಹತೋಟಿತಪ್ಪಿದ್ದರೆಂದು ವರದಿಗಳು ತಿಳಿಸಿವೆ.
ಕೊಲಂಬಿಯಾದ ಸ್ಯಾನ್‌ಫ್ರಾನ್ಸಿಸ್ಕೊ ನಗರದಲ್ಲಿ ಬಡವರು ಅಧಿಕ ಸಂಖ್ಯೆಯಲ್ಲಿರುವ ಪ್ರದೇಶದ ಮನೆಯೊಂದಕ್ಕೆ ಭೇಟಿ ನೀಡಿದ ಅವರು ತನಗೆ ಗುದ್ದು ಬಿದ್ದಿದೆ, ನಾನೀಗ ಚೆನ್ನಾಗಿದ್ದೇನೆ ಎಂದು ತನ್ನ ಪ್ರಶ್ನಿಸಿದ ಪತ್ರಕರ್ತರೊಂದಿಗೆ ನಗೆ ಚಟಾಕಿ ಹಾರಿಸಿದರೆಂದು ಮೂಲಗಳು ತಿಳಿಸಿವೆ.