ಶೀಘ್ರವೇ ‘ಪ್ರಯಾಗರಾಜ್’ ಆಗಲಿರುವ ಅಲಹಾಬಾದ್‌…!

Update: 2017-09-12 13:05 GMT

ಲಕ್ನೋ,ಸೆ.12: ಮುಘಲ್‌ಸರಾಯ್ ರೈಲ್ವೆ ನಿಲ್ದಾಣವನ್ನು ಈಗಾಗಲೇ ‘ದೀನ ದಯಾಳ ಉಪಾಧ್ಯಾಯ ನಗರ’ ಎಂದು ಮರುನಾಮಕರಣಗೊಳಿಸಿರುವ ಉತ್ತರ ಪ್ರದೇಶ ಸರಕಾರವು ಶೀಘ್ರವೇ ಅಲಹಾಬಾದ್‌ನ್ನು ‘ಪ್ರಯಾಗರಾಜ್’ ಎಂದು ಮರುನಾಮಕರಣ ಗೊಳಿಸುವ ಸಾಧ್ಯತೆಗಳಿವೆ. ‘ಪ್ರಯಾಗರಾಜ್’ ಅಲಹಾಬಾದ್‌ನ ಪ್ರಾಚೀನ ಹೆಸರಾಗಿದೆ.

ಹಿಂದು ಸಾಧುಸಂತರ ಪರಮೋಚ್ಚ ಸಂಘಟನೆಯಾಗಿರುವ ಅಖಿಲ ಭಾರತ ಅಖಾಡಾ ಪರಿಷದ್‌ನ ಪದಾಧಿಕಾರಿಗಳು ಮಂಗಳವಾರ ಇಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರೊಂದಿಗೆ ಸಭೆ ನಡೆಸಿದ ಬಳಿಕ ಈ ಸುಳಿವನ್ನು ನೀಡಿದರು.

ಅಲಹಾಬಾದ್‌ನ್ನು ಪ್ರಯಾಗರಾಜ್ ಎಂದು ಮರುನಾಮಕರಣಗೊಳಿಸುವಂತೆ ಪ್ರಸ್ತಾವ ವೊಂದನ್ನು ಆದಿತ್ಯನಾಥ ಅವರಿಗೆ ಸಲ್ಲಿಸಲಾಗಿದ್ದು, ಈ ಬಗ್ಗೆ ವಿಧ್ಯುಕ್ತ ಪ್ರಕಟಣೆ ಶೀಘ್ರವೇ ಹೊರಬೀಳಲಿದೆ ಎಂದು ಪರಿಷದ್‌ನ ಅಧ್ಯಕ್ಷ ಮಹಂತ ನರೇಂದ್ರ ಗಿರಿ ಅವರು ಸುದ್ದಿಗಾರರಿಗೆ ತಿಳಸಿದರು.

ಉತ್ತರ ಪ್ರದೇಶವನ್ನು ತಮ್ಮ ನೆಲೆಯನ್ನಾಗಿ ಮಾಡಿಕೊಂಡಿರುವ 14 ‘ನಕಲಿ ಬಾಬಾ’ಗಳ ಪಟ್ಟಿಯೊಂದನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಿ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಲಾಗಿದೆ ಮತ್ತು ಅವರು ಆ ಬಗ್ಗೆ ಭರವಸೆ ನೀಡಿದ್ದಾರೆ ಎಂದೂ ಗಿರಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News