ಟೋಲ್ ಪ್ಲಾಝಾದಲ್ಲಿ ಕಾರ್ಡ್ ಸ್ವೈಪ್ ಮಾಡಿದ ವ್ಯಕ್ತಿಗೆ 87,000 ರೂ.ಪಂಗನಾಮ
ಮುಂಬೈ,ಸೆ.12: ಪುಣೆ-ಮುಂಬೈ ಹೆದ್ದಾರಿಯಲ್ಲಿರುವ ಖಾಲಾಪುರ ಟೋಲ್ ಪ್ಲಾಝಾದಲ್ಲಿ ತನ್ನ ಡೆಬಿಟ್ ಕಾರ್ಡ್ ಮೂಲಕ ಶುಲ್ಕವನ್ನು ಪಾವತಿಸಿದ್ದ ವ್ಯಕ್ತಿಗೆ ಬರೋಬ್ಬರಿ 87,000 ರೂ.ಗಳ ಟೋಪಿ ಬಿದ್ದಿದೆ.
ಪುಣೆಯಲ್ಲಿ ಸೇಲ್ಸ್ ಮ್ಯಾನೇಜರ್ ಆಗಿರುವ ದರ್ಶನ ಪಾಟೀಲ್ ಸೆ.9ರಂದು ಈ ಟೋಲ್ ಪ್ಲಾಝಾದಲ್ಲಿ 230 ರೂ.ಶುಲ್ಕವನ್ನು ತನ್ನ ಕಾರ್ಡ್ ಮೂಲಕ ಪಾವತಿಸಿದ ಎರಡು ಗಂಟೆಗಳಲ್ಲಿ ಅವರ ಬ್ಯಾಂಕ್‌ಖಾತೆಯಿಂದ ಹಣ ಮಂಗಮಾಯವಾಗಿದೆ. ಈ ಬಗ್ಗೆ ಅವರು ಪುಣೆ ಪೊಲೀಸರಲ್ಲಿ ದೂರು ದಾಖಲಿಸಿದ್ದಾರೆ.
ಮುಂಬೈನಿಂದ ಪುಣೆಗೆ ವಾಪಸಾಗುತ್ತಿದ್ದಾಗ ಸಂಜೆ 6:27ಕ್ಕೆ ಅವರು ಕಾರ್ಡ್ ಮೂಲಕ ಟೋಲ್ ಪಾವತಿಸಿದ್ದು, ತಕ್ಷಣವೇ ಆ ಬಗ್ಗೆ ಅವರ ಮೊಬೈಲ್‌ಗೆ ಎಸ್‌ಎಂಎಸ್ ಬಂದಿತ್ತು. ರಾತ್ರಿ 8:31ರ ಸುಮಾರಿಗೆ ಅವರ ಕಾರ್ಡ್ ಮೂಲಕ 20,000 ರೂ.ಗಳ ಶಾಪಿಂಗ್ ಮಾಡಿರುವ ಬಗ್ಗೆ ಇನ್ನೊಂದು ಸಂದೇಶ ಬಂದಿತ್ತು. ಕೆಲವೇ ನಿಮಿಷಗಳಲ್ಲಿ ಇಂತಹ ಇನ್ನೂ ಆರು ಸಂದೇಶಗಳು ಅವರಿಗೆ ಬಂದಿದ್ದವು. 8:34ರ ವೇಳೆಗೆ ಒಟ್ಟೂ 87,000 ರೂ.ಗಳನ್ನು ಅವರ ಬ್ಯಾಂಕ್ ಖಾತೆಯಿಂದ ಎಗರಿಸಲಾಗಿತ್ತು. ಸೈಬರ್ ಕಳ್ಳರ ಕೆಲಸ ಅಲ್ಲಿಗೇ ನಿಂತಿರಲಿಲ್ಲ. 100 ರೂ.ಗಳ ಒಂದು ಮತ್ತು ತಲಾ 10 ರೂ.ಗಳ ಮೂರು ವಹಿವಾಟುಗಳನ್ನೂ ಅವರು ನಡೆಸಿ ಖಾತೆಯಲ್ಲಿದ್ದ ಅಷ್ಟೂ ಹಣವನ್ನು ತೆಗೆದಿದ್ದರು!
ಟೋಲ್ ಪ್ಲಾಝಾದಲ್ಲಿ ತಾನು ಕಾರ್ಡ್ ನೀಡಿದಾಗ ಅದರಲ್ಲಿದ್ದ ಮಾಹಿತಿಗಳನ್ನು ಮತ್ತು ಪಿನ್‌ನಂಬರ್ ಕದಿಯಲಾಗಿದೆ ಎಂದು ಪಾಟೀಲ್ ಶಂಕಿಸಿದ್ದಾರೆ.