ವಿಶ್ವಸಂಸ್ಥೆಯ ಟೀಕೆಗೆ ಭಾರತದ ತೀವ್ರ ಖಂಡನೆ
ಹೊಸದಿಲ್ಲಿ, ಸೆ.12: ಭಾರತವು ರೋಹಿಂಗ್ಯಾ ಮುಸ್ಲಿಮರನ್ನು ನಡೆಸಿಕೊಳ್ಳುತ್ತಿರುವ ರೀತಿ ಸರಿಯಲ್ಲ ಹಾಗೂ ದೇಶದಲ್ಲಿ ಮಾನವ ಹಕ್ಕುಗಳಿಗಾಗಿ ಹೋರಾಡುತ್ತಿರುವವರಿಗೆ ಜೀವಬೆದರಿಕೆ ಇದೆ ಎಂಬ ವಿಶ್ವಸಂಸ್ಥೆಯ ಟೀಕೆಯ ಬಗ್ಗೆ ಭಾರತ ತೀವ್ರ ಖಂಡನೆ ವ್ಯಕ್ತಪಡಿಸಿದೆ.
ಕೆಲವು ವೈಯಕ್ತಿಕ ಘಟನೆಗಳನ್ನು ಬಹುದೊಡ್ಡ ಸಾಮಾಜಿಕ ದುರಂತ ಎಂಬ ರೀತಿಯಲ್ಲಿ ಬಣ್ಣಿಸಲಾಗುತ್ತಿದೆ. ಭಾರತದಲ್ಲಿ ಸ್ವತಂತ್ರ ನ್ಯಾಯಾಂಗ ವ್ಯವಸ್ಥೆ, ಪತ್ರಿಕಾ ಸ್ವಾತಂತ್ರ, ಸ್ಪಂದನಾಶೀಲ ನಾಗರಿಕ ಸಮಾಜ ಮತ್ತು ಕಾನೂನು ಹಾಗೂ ಮಾನವ ಹಕ್ಕುಗಳಿಗೆ ಗೌರವ ನೀಡುವ ವ್ಯವಸ್ಥೆ ಇರುವ ಬಗ್ಗೆ ಹೆಮ್ಮೆಯಿದೆ ಎಂದು ವಿಶ್ವಸಂಸ್ಥೆಯಲ್ಲಿ ಭಾರತದ ಪ್ರತಿನಿಧಿ ತಿಳಿಸಿದ್ದಾರೆ. ಗೋರಕ್ಷಣೆಯ ಹೆಸರಲ್ಲಿ ನಡೆಯುತ್ತಿರುವ ಹಲ್ಲೆಗಳು ಹಾಗೂ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಹಿನ್ನೆಲೆಯಲ್ಲಿ ವಿಶ್ವಸಂಸ್ಥೆಯ ಮಾನವಹಕ್ಕುಗಳ ಮಂಡಳಿ ನೀಡಿದ್ದ ಹೇಳಿಕೆಯ ಹಿನ್ನೆಲೆಯಲ್ಲಿ ಭಾರತ ಈ ಹೇಳಿಕೆ ನೀಡಿದೆ.
ಇತ್ತೀಚಿನ ವರ್ಷದಲ್ಲಿ ಮ್ಯಾನ್ಮಾರ್‌ನಿಂದ ಭಾರತಕ್ಕೆ ವಲಸೆ ಬಂದಿರುವ ಸುಮಾರು 40,000ದಷ್ಟು ರೊಹಿಂಗ್ಯಾ ಮುಸ್ಲಿಮರನ್ನು ಗಡೀಪಾರು ಮಾಡಲು ನಿರ್ಧರಿಸಿರುವುದಾಗಿ ಭಾರತ ತಿಳಿಸಿತ್ತು. ಇವರಲ್ಲಿ 16,000 ರೊಹಿಂಗ್ಯಾರು ನಿರಾಶ್ರಿತರ ದಾಖಲೆ ಪತ್ರಗಳನ್ನು ಪಡೆದುಕೊಂಡಿದ್ದಾರೆ.
ರೋಹಿಂಗ್ಯಾ ಮುಸ್ಲಿಮರಿಗೆ ಅವರ ದೇಶದಲ್ಲಿ ಭದ್ರತೆ ಇಲ್ಲದ ಕಾರಣ ಅವರನ್ನು ಸಾಮೂಹಿಕವಾಗಿ ಮ್ಯಾನ್ಮಾರ್‌ಗೆ ಗಡೀಪಾರು ನಡೆಸುವ ಯತ್ನವನ್ನು ಭಾರತ ಕೈಗೊಳ್ಳುವಂತಿಲ್ಲ ಎಂದು ಎಂದು ವಿಶ್ವಸಂಸ್ಥೆಯ ಮಾನವಹಕ್ಕು ವಿಭಾಗದ ಹೈಕಮಿಶನರ್ ಝೈದ್ ಅಲ್ ಹಸ್ಸನ್ ಹೇಳಿದ್ದರು.
ಮ್ಯಾನ್ಮಾರ್‌ನಲ್ಲಿ ರೋಹಿಂಗ್ಯಾ ಮುಸ್ಲಿಮರ ವಿರುದ್ಧ ವ್ಯಾಪಕ ಹಿಂಸಾಚಾರದ ಹಿನ್ನೆಲೆಯಲ್ಲಿ ಅವರು ಭಾರತಕ್ಕೆ ಬಂದಿದ್ದಾರೆ. ಇಂತಹ ಸಂದರ್ಭದಲ್ಲಿ ಅವರನ್ನು ಮ್ಯಾನ್ಮಾರ್‌ಗೆ ಗಡೀಪಾರು ಮಾಡಲು ಭಾರತ ಕೈಗೊಂಡಿರುವ ಕ್ರಮದಿಂದ ವ್ಯಥೆಯಾಗಿದೆ ಎಂದು ಝೈದ್ ಅಲ್ ಹಸ್ಸನ್ ಹೇಳಿಕೆ ನೀಡಿದ್ದರು.
ನಿರಾಶ್ರಿತರ ಕುರಿತಾದ ಒಪ್ಪಂದಕ್ಕೆ ಭಾರತ ಸಹಿ ಹಾಕಿಲ್ಲದ ಕಾರಣ ಈ ವಿಷಯದ ಬಗ್ಗೆ ಇರುವ ಅಂತಾರಾಷ್ಟ್ರೀಯ ಕಾನೂನಿನಿಂದ ಭಾರತಕ್ಕೆ ವಿನಾಯಿತಿ ಇದೆ ಎಂದು ಭಾರತದ ಗೃಹ ಸಚಿವಾಲಯದ ಸಹಾಯಕ ಸಚಿವ ಕಿರಣ್ ರಿಜಿಜು ಇತ್ತೀಚೆಗೆ ಹೇಳಿಕೆ ನೀಡಿದ್ದಾರೆ . ಆದರೆ ಅಂತಾರಾಷ್ಟ್ರೀಯ ಕಾನೂನಿಗೆ ಭಾರತ ಕೂಡಾ ಬಾಧ್ಯವಾಗಿರುವ ಕಾರಣ ನಿರಾಶ್ರಿತರನ್ನು ಬಲಾತ್ಕಾರದಿಂದ ಗಡೀಪಾರು ಮಾಡುವಂತಿಲ್ಲ ಎಂಬ ಸಾರ್ವಕಾಲಿಕ ನೀತಿಗೆ ಭಾರತ ಬದ್ಧವಾಗಿರಬೇಕು ಎಂದು ಹಸ್ಸನ್ ಹೇಳಿದ್ದರು.
ಅಲ್ಲದೆ ಜಾನುವಾರು ವ್ಯಾಪಾರಿಗಳು ಹಾಗೂ ಸಾಗಾಟಗಾರರ ಮೇಲೆ ಸ್ವಯಂಘೋಷಿತ ಗೋರಕ್ಷಕರಿಂದ ನಡೆದಿರುವ ಸರಣಿ ಹಲ್ಲೆ ಘಟನೆಯನ್ನು ಉಲ್ಲೇಖಿಸಿದ್ದ ಅವರು, ಭಾರತದಲ್ಲಿ ಗೋರಕ್ಷಣೆಯ ಹೆಸರಲ್ಲಿ ಮಾರಕ ಆಯುಧಗಳಿಂದ ನಡೆಸಲಾಗುತ್ತಿರುವ ಗುಂಪು ಹಲ್ಲೆ ಪ್ರಕರಣ ದಿಗಿಲುಹುಟ್ಟಿಸುತ್ತಿದೆ ಎಂದಿದ್ದರು. ಬೆೆಂಗಳೂರಿನಲ್ಲಿ ದುಷ್ಕರ್ಮಿಗಳಿಂದ ಹತ್ಯೆಯಾಗಿರುವ ಪತ್ರಕರ್ತೆ ಗೌರಿ ಲಂಕೇಶ್ ಪ್ರಕರಣವನ್ನು ಉಲ್ಲೇಖಿಸಿದ್ದ ಅವರು, ದ್ವೇಷಸಾಧಕರ ಹಾಗೂ ಸಂಪ್ರದಾಯವಾದಿಗಳ ವಿರುದ್ಧ ನಿರಂತರವಾಗಿ ದಣಿವರಿಯದೆ ಧ್ವನಿ ಎತ್ತಿದ್ದ ಗೌರಿ ಲಂಕೇಶ್ ಹತ್ಯೆ ಕಳವಳಕಾರಿಯಾಗಿದೆ .ಭಾರತದಲ್ಲಿ ಮಾನವ ಹಕ್ಕುಗಳ ಬಗ್ಗೆ ಧ್ವನಿ ಎತ್ತುವವರನ್ನು ಬೆದರಿಸಲಾಗುತ್ತಿದೆ . ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಪ್ರಕರಣ ಹಾಗೂ ಗುಂಪು ಹಲ್ಲೆಯನ್ನು ಖಂಡಿಸಿ ಮತ್ತು ಅಭಿವ್ಯಕ್ತಿ ಸ್ವಾತಂತ್ರಕ್ಕೆ ಆಗ್ರಹಿಸಿ ಭಾರತದ 12 ನಗರಗಳಲ್ಲಿ ನಡೆದಿರುವ ರ್ಯಾಲಿಗಳನ್ನು ಕಂಡು ಹೃದಯ ತುಂಬಿ ಬಂದಿದೆ ಎಂದಿದ್ದರು.