ಕೇಂದ್ರ ಸರಕಾರಿ ನೌಕರರು,ಪಿಂಚಣಿದಾರರ ತುಟ್ಟಿಭತ್ಯೆ ಶೇ.5ಕ್ಕೆ ಏರಿಕೆ
ಹೊಸದಿಲ್ಲಿ,ಸೆ,12: ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ಇಲ್ಲಿ ನಡೆದ ಸಂಪುಟ ಸಭೆಯು ತುಟ್ಟಿಭತ್ಯೆ(ಡಿಎ) ಮತ್ತು ತುಟ್ಟಿ ಪರಿಹಾರ (ಡಿಆರ್) ವನ್ನು ಶೇ.1ರಷ್ಟು ಹೆಚ್ಚಿಸಿ ಈಗಿನ ಶೇ.4ರಿಂದ ಶೇ.5ಕ್ಕೇರಿಸಿದ್ದು, ಇದರಿಂದ 49.26 ಲಕ್ಷ ಕೇಂದ್ರ ಸರಕಾರಿ ಉದ್ಯೋಗಿಗಳು ಮತ್ತು 61.17 ಲಕ್ಷ ಪಿಂಚಣಿದಾರರಿಗೆ ಲಾಭವಾಗಲಿದೆ. ನೂತನ ದರ ಜುಲೈನಿಂದಲೇ ಪೂರ್ವಾನ್ವಯಗೊಳ್ಳಲಿದೆ. ಖಾಸಗಿ ಕ್ಷೇತ್ರಗಳ ನೌಕರರಿಗೆ ಗ್ರಾಚ್ಯುಯಿಟಿ ಮಿತಿಯನ್ನು ಹೆಚ್ಚಿಸುವ ಮಸೂದೆಯೊಂದಕ್ಕೂ ಸಂಪುಟ ಸಭೆಯು ಹಸಿರು ನಿಶಾನೆ ತೋರಿಸಿದೆ.
ಈ ಏರಿಕೆಯಿಂದಾಗಿ ಸರಕಾರದ ಬೊಕ್ಕಸದ ಮೇಲೆ ವಾರ್ಷಿಕ 3,068.26 ಕೋ.ರೂ. ಮತ್ತು 2017-18ನೇ ಹಣಕಾಸು ವರ್ಷದಲ್ಲಿ 2,045.50 ಕೋ.ರೂ.ಗಳ ಹೆಚ್ಚುವರಿ ಹೊರೆ ಬೀಳಲಿದೆ.
ಹಣದುಬ್ಬರ ಮತ್ತು ಖಾಸಗಿ ಕ್ಷೇತ್ರಗಳ ಉದ್ಯೋಗಿಗಳ ವೇತನ ಹೆಚ್ಚಳವನ್ನು ಪರಿಗಣಿಸಿದ ಬಳಿಕ ಗ್ಯಾಚ್ಯುಯಿಟಿ ಮತ್ತು ತುಟ್ಟಿಭತ್ಯೆಗೆ ಸಂಬಂಧಿಸಿದ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ ಎಂದು ಅಧಿಕೃತ ಹೇಳಿಕೆಯು ತಿಳಿಸಿದೆ.