‘ರಾಜಕೀಯದಲ್ಲಿ ಬದುಕುಳಿಯಲು ಆರ್‌ಜೆಡಿ ಸೇರಿ’

Update: 2017-09-13 12:43 GMT

ಪಾಟ್ನಾ,ಸೆ.13: ತನ್ನ ಹಿರಿಯ ಬಂಡುಕೋರ ನಾಯಕ ಶರದ್ ಯಾದವ್ ಅವರನ್ನು ಬುಧವಾರ ತೀವ್ರ ತರಾಟೆಗೆತ್ತಿಕೊಂಡ ಜೆಡಿಯು, ಲಾಲು ಪ್ರಸಾದ್ ಅವರ ಆರ್‌ಜೆಡಿ ಪಕ್ಷವನ್ನು ಸೇರಿಕೊಳ್ಳುವಂತೆ ತಿಳಿಸಿದೆ.

ಯಾದವ್ ಅವರು ವಿಳಂಬ ಮಾಡದೇ ಪ್ರತಿಪಕ್ಷ ಆರ್‌ಜೆಡಿಗೆ ವಿಧ್ಯುಕ್ತವಾಗಿ ಸೇರ್ಪಡೆಗೊಳ್ಳಬೇಕು ಎಂದು ಹೇಳಿದ ಜೆಡಿಯು ವಕ್ತಾರ ನೀರಜ ಕುಮಾರ್ ಅವರು, ರಾಜಕೀಯದಲ್ಲಿ ಬದುಕುಳಿಯಲು ಅವರಿಗೆ ಆರ್‌ಜೆಡಿ ಸೇರ್ಪಡೆಯ ಹೊರತು ಇನ್ಯಾವುದೇ ದಾರಿಯುಳಿದಿಲ್ಲ. ಈಗ ಅವರು ಶೀಘ್ರವೇ ರಾಜ್ಯಸಭಾ ಸದಸ್ಯತ್ವವನ್ನೂ ಕಳೆದುಕೊಳ್ಳಬಹುದು ಎಂದರು.

ತನ್ನ ಬಣವನ್ನು ನಿಜವಾದ ಜೆಡಿಯು ಎಂದು ಪರಿಗಣಿಸಬೇಕೆಂದು ಕೋರಿ ಯಾದವ ಸಲ್ಲಿಸಿದ್ದ ಅರ್ಜಿಯನ್ನು ಚುನಾವಣಾ ಆಯೋಗವು ಮಂಗಳವಾರ ಪುರಸ್ಕರಿಸಿರಲಿಲ್ಲ. ದಾಖಲೆಗಳ ಕೊರತೆಯನ್ನು ಅದು ಬೆಟ್ಟು ಮಾಡಿತ್ತು.

ಭ್ರಷ್ಟಾಚಾರದ ಆರೋಪಗಳಲ್ಲಿ ಸಿಬಿಐನಿಂದ ಕ್ರಮಗಳನ್ನು ಎದುರಿಸುತ್ತಿರುವ ಲಾಲು ಕುಟುಂಬಕ್ಕೆ ಈಗ ಯಾದವ್ ‘ಚಿಕ್ಕಪ್ಪ’ನಾಗಿದ್ದಾರೆ ಎಂದು ಛೇಡಿಸಿದ ನೀರಜ ಕುಮಾರ್, ಯಾದವ್ ಮತ್ತು ಪಕ್ಷದ ಇನ್ನೋರ್ವ ಸಂಸದ ಅಲಿ ಅನ್ವರ್ ಅವರನ್ನು ಸದಸ್ಯತ್ವದಿಂದ ಅನರ್ಹಗೊಳಿಸುವಂತೆ ಕೋರಿ ಜೆಡಿಯು ರಾಜ್ಯಸಭೆಯ ಸಭಾಪತಿ ಎಂ.ವೆಂಕಯ್ಯ ನಾಯ್ಡು ಅವರಿಗೆ ಅರ್ಜಿಯನ್ನು ಸಲ್ಲಿಸಿದ್ದು, ಈ ಬಗ್ಗೆ ತಮ್ಮ ನಿಲುವನ್ನು ವಿವರಿಸುವಂತೆ ಅವರು ಉಭಯ ಸಂಸದರಿಗೆ ನೋಟೀಸ್ ಜಾರಿಗೊಳಿಸಿದ್ದಾರೆ ಎಂದರು.

ಜೆಡಿಯುನಲ್ಲಿ ಕಳೆದ ಜುಲೈನಲ್ಲಿ ಒಡಕುಂಟಾಗಿದ್ದು, ಒಂದು ಬಣದ ನೇತೃತ್ವವನ್ನು ಶರದ್ ಯಾದವ್ ವಹಿಸಿದ್ದರೆ, ಇನ್ನೊಂದು ಬಣವು ಪಕ್ಷಾಧ್ಯಕ್ಷ ಹಾಗೂ ಮುಖ್ಯಮಂತ್ರಿ ನಿತೀಶ ಕುಮಾರ್ ಅವರಿಗ ನಿಷ್ಠವಾಗಿದೆ.

ಜೆಡಿಯು ಆ.12ರಂದು ಯಾದವ್ ಅವರನ್ನು ರಾಜ್ಯಸಭೆಯಲ್ಲಿ ಪಕ್ಷದ ನಾಯಕನ ಸ್ಥಾನದಿಂದ ವಜಾಗೊಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News