ಒಬಿಸಿಯ ಕೆನೆಪದರದ ಆದಾಯದ ಮಿತಿ 8 ಲಕ್ಷ ರೂ.ಗೆ ಏರಿಕೆ
ಹೊಸದಿಲ್ಲಿ, ಸೆ. 13: ಒಬಿಸಿ ಮೀಸಲಾತಿಯ ಕೆನೆಪದರದ ಗರಿಷ್ಠ ಆದಾಯದ ಮಿತಿಯನ್ನು ವರ್ಷಕ್ಕೆ ಈಗಿರುವ 6 ಲಕ್ಷ ರೂಪಾಯಿಯಿಂದ 8 ಲಕ್ಷ ರೂಪಾಯಿಗೆ ಏರಿಕೆ ಮಾಡಲಾಗಿದೆ.
ನಿರಂತರ ಮೂರು ವರ್ಷ ಅವಧಿಯಲ್ಲಿ 8 ಲಕ್ಷ ರೂಪಾಯಿ ಹಾಗೂ ಅದಕ್ಕಿಂತ ಹೆಚ್ಚು ಒಟ್ಟು ವಾರ್ಷಿಕ ಆದಾಯ ಹೊಂದಿರುವ ವ್ಯಕ್ತಿಗಳ ಮಕ್ಕಳು ಕೆನೆಪದರದ ವ್ಯಾಪ್ತಿಯಲ್ಲಿ ಬರುತ್ತಾರೆ. ಇವರಿಗೆ ಒಬಿಸಿಗೆ ಲಭ್ಯವಿರುವ ಮೀಸಲಾತಿ ಸೌಲಭ್ಯ ದೊರೆಯಲಾರದು.
ಒಬಿಸಿಯಲ್ಲಿ ಕೆನೆಪದರವನ್ನು ನಿರ್ಣಯಿಸಲು ಪ್ರತೀ ವರ್ಷದ ಆದಾಯ ತೆರಿಗೆ ಮಿತಿಯನ್ನು 6 ಲಕ್ಷ ರೂಪಾಯಿಯಿಂದ 8 ಲಕ್ಷ ರೂಪಾಯಿಗೆ ಏರಿಕೆ ಮಾಡಲು ನಿರ್ಧರಿಸಲಾಗಿದೆ ಎಂದು ವೈಯಕ್ತಿಕ ಹಾಗೂ ತರಬೇತಿ ಇಲಾಖೆ (ಡಿಒಪಿಟಿ)ನೀಡಿದ ಆದೇಶ ತಿಳಿಸಿದೆ.
1993ರಲ್ಲಿ ಈ ಮಿತಿ 1 ಲಕ್ಷ ರೂಪಾಯಿ ಇತ್ತು. ಇದನ್ನು ಮೂರು ಬಾರಿ ಹೆಚ್ಚಿಸಲಾಯಿತು. 2004ರಲ್ಲಿ 2.5 ಲಕ್ಷ ರೂ., 2008ರಲ್ಲಿ 4.5 ಲಕ್ಷ ರೂ. 2013ರಲ್ಲಿ 6 ಲಕ್ಷ ರೂ.ಗೆ ಏರಿಕೆ ಮಾಡಲಾಗಿತ್ತು.
ಕೇಂದ್ರ ಸರಕಾರದ ಉದ್ಯೋಗಕ್ಕೆ ಈ ಮಿತಿ ಏರಿಸುವ ನಿರ್ಧಾರವನ್ನು ಕೇಂದ್ರ ಸಂಪುಟ ಔಪಚಾರಿಕವಾಗಿ ವೌಲ್ಯ ಮಾಪನ ಮಾಡುತ್ತಿದೆ ಎಂದು ಆಗಸ್ಟ್ 23ರಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದರು.
ಕೆನೆಪದರದ ಆದಾಯ ಮಿತಿ ಏರಿಸುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅಸ್ಸಾಂನಲ್ಲಿ ಸೂಚನೆ ನೀಡಿದ್ದರು ಎಂದು ಅವರು ಹೇಳಿದ್ದಾರೆ.
ಪ್ರತಿ ವರ್ಷಕ್ಕೆ 8 ಲಕ್ಷ ರೂಪಾಯಿಗಿಂತ ಹೆಚ್ಚು ಗಳಿಸುತ್ತಿರುವ ಒಬಿಸಿ ಕುಟುಂಬ ಕೆನೆಪದರದ ವ್ಯಾಪ್ತಿಯ ಒಳಗಡೆ ಬರಬೇಕು ಎಂದು ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಸಚಿವಾಲಯ ಪ್ರಸ್ತಾವನೆ ಸಲ್ಲಿಸಿತ್ತು.
ಸಾಮಾಜಿಕ ನ್ಯಾಯ ಹಾಗೂ ಒಬಿಸಿಯ ಇತರ ಸದಸ್ಯರನ್ನು ಒಳಗೊಳಿಸುವ ಸರಕಾರದ ಪ್ರಯತ್ನದ ಒಂದು ಭಾಗವಾಗಿ ಈ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಇತ್ತೀಚೆಗೆ ಬಿಡುಗಡೆ ಮಾಡಲಾದ ಅಧಿಕೃತ ಪ್ರಕಟನೆ ಹೇಳಿದೆ.
ಹಿಂದುಳಿದ ವರ್ಗದ ಆಯೋಗಕ್ಕೆ ಸಾಂವಿಧಾನಿಕ ಮಾನ್ಯತೆ ನೀಡುವ ಮಸೂದೆಯನ್ನು ಕೇಂದ್ರ ಸರಕಾರ ಈಗಾಗಲೇ ಸಂಸತ್ತಿನಲ್ಲಿ ಮಂಡಿಸಿದೆ.