ಬುಲೆಟ್ ಟ್ರೈನ್ ಯೋಜನೆ ವಿರುದ್ಧ ಪಾಲ್ಘರ್ ಗ್ರಾಮಸ್ಥರಿಂದ ಪ್ರತಿಭಟನೆ
ಪಾಲ್ಘ್ಘರ್, ಸೆ. 13: ಪ್ರಧಾನಿ ನರೇಂದ್ರ ಮೋದಿ ಹಾಗೂ ಜಪಾನ್ ಪ್ರಧಾನಿ ಶಿಂಜೊ ಅಬೆ ಇಂದು ಅಹ್ಮದಾಬಾದ್-ಮುಂಬೈ ಬುಲೆಟ್ ರೈಲು ಯೋಜನೆ ಆರಂಭಿಸುತ್ತಿದ್ದಂತೆ, ಪಾಲ್ಘಾರ್ ಜಿಲ್ಲೆಯ ಬೊಯಿಸರ್‌ನ ರೈತರ ಗುಂಪೊಂದು ಯೋಜನೆಗಾಗಿ ತಮ್ಮ ಭೂಮಿಯನ್ನು ಸರಕಾರ ಸ್ವಾಧೀನಪಡಿಸಿಕೊಳ್ಳಲಿದೆ ಎಂಬ ಭೀತಿಯಿಂದ ಪ್ರತಿಭಟನೆ ನಡೆಸಿದ್ದಾರೆ.
ಬೊಯಿಸರ್ ರೈಲ್ವೆ ನಿಲ್ದಾಣದ ಹೊರಭಾಗದಲ್ಲಿ ಪ್ರತಿಭಟನೆ ನಡೆಸಿದ ರೈತರು, “ಯೋಜನೆಯಿಂದ ನಾವು ಕೃಷಿ ಭೂಮಿ ಕಳೆದುಕೊಳ್ಳಲಿದ್ದೇವೆ” ಎಂದಿದ್ದಾರೆ.
ಶೆಟ್ಕಾರಿ ಸಂಘರ್ಷ ಸಮಿತಿ ಹಾಗೂ ಆದಿವಾಸಿ ಏಕ್ತಾ ಪರಿಷದ್ ಜಂಟಿಯಾಗಿ ಆಯೋಜಿಸಿದ ಈ ಪ್ರತಿಭಟನೆಯಲ್ಲಿ ಪ್ರತಿಭಟನಾಕಾರರು ಯೋಜನೆ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಕಪ್ಪು ಬಾವುಟಗಳನ್ನು ಬೀಸಿದರು.
ಪ್ರತಿಭಟನೆಯಲ್ಲಿ ಪಾಲ್ಗೊಂಡ ಭೂಮಿ ಸೇನೆಯ ಕುಲುರಾಮ್ ದೊಧಾಡೆ, “ಪಾಲ್ಘರ್‌ನಲ್ಲಿ ಸಣ್ಣ ರೈತರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಯೋಜನೆಗಾಗಿ ಭೂಮಿ ವಶಪಡಿಸಿ ಕೊಂಡರೆ, ಇಲ್ಲಿನ ರೈತರು ತೀವ್ರ ಸಂಕಷ್ಟ ಎದುರಿಸಲಿದ್ದಾರೆ” ಎಂದಿದ್ದಾರೆ.
ರೈತರಲ್ಲಿ ಮಾತುಕತೆ ನಡೆಸದೆ ಯೋಜನೆ ಘೋಷಿಸಿದ ಬಿಜೆಪಿ ನೇತೃತ್ವದ ಕೇಂದ್ರ ಸರಕಾರವನ್ನು ಪ್ರತಿಭಟನಾಕಾರರು ತರಾಟೆಗೆ ತೆಗೆದುಕೊಂಡಿದ್ದಾರೆ.
ಇದು ಸಾಂಕೇತಿಕ ಪ್ರತಿಭಟನೆ. ಇದರಿಂದ ಕಾನೂನು ಸುವ್ಯವಸ್ಥೆಗೆ ಯಾವುದೇ ತೊಂದರೆ ಉಂಟಾಗಿಲ್ಲ ಎಂದು ಪಾಲ್ಘರ್‌ನ ಡಿಎಸ್‌ಪಿ ಮಂಜುನಾಥ ಶಿಂಗೆ ತಿಳಿಸಿದ್ದಾರೆ.