2019,ಅಕ್ಟೋಬರ್ ವೇಳೆಗೆ ಭಾರತವು ಬಯಲು ಶೌಚ ಮುಕ್ತ: ರಾಜನಾಥ್ ನಿರೀಕ್ಷೆ
ಹೊಸದಿಲ್ಲಿ,ಸೆ.15: ಇಡೀ ಭಾರತ ದೇಶವು 2019,ಅಕ್ಟೋಬರ್ ವೇಳೆಗೆ ಬಯಲು ಶೌಚ ಮುಕ್ತವಾಗುವ ನಿರೀಕ್ಷೆಯಿದೆ ಎಂದು ಗೃಹಸಚಿವ ರಾಜನಾಥ ಸಿಂಗ್ ಅವರು ಶುಕ್ರವಾರ ಹೇಳಿದರು.
ಗೃಹ ಸಚಿವಾಲಯದ ‘ಸ್ವಚ್ಛತೆಯೇ ಸೇವೆ’ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾ ಡಿದ ಅವರು, 2019,ಅಕ್ಟೋಬರ್ ವೇಳೆಗೆ ದೇಶವನ್ನು ಬಯಲು ಶೌಚ ಮುಕ್ತಗೊಳಿಸುವ ಪ್ರಧಾನಿಯವರ ಕನಸನ್ನು ನನಸುಗೊಳಿಸುವ ಬಗ್ಗೆ ಸರಕಾರವು ವಿಶ್ವಾಸ ಹೊಂದಿದೆ ಎಂದರು.
ಕೇಂದ್ರ ಸರಕಾರವು ಸ್ವಚ್ಛತೆಗಾಗಿ 76 ಸಚಿವಾಲಯಗಳು ಮತ್ತು ಇಲಾಖೆಗಳ ಮೂಲಕ 12,000 ಕೋ.ರೂ.ಗಳ ಕ್ರಿಯಾ ಯೋಜನೆಯೊಂದನ್ನು ಜಾರಿಗೊಳಿಸುತ್ತಿದೆ ಎಂದ ಅವರು, ಮನೆಗಳಲ್ಲಿ ಶೌಚಾಲಯ ಸೌಲಭ್ಯವನ್ನೊದಗಿಸುವುದು ಮಹಿಳೆಯರ ಸುರಕ್ಷತೆ ಮತ್ತು ಘನತೆಯನ್ನು ಹೆಚ್ಚಿಸುತ್ತದೆ. ‘ಸ್ವಚ್ಛತೆಯೇ ಸೇವೆ’ ಅಭಿಯಾನವು ಮಕ್ಕಳ ಪೋಷಣೆ ಯನ್ನು ಉತ್ತಮಗೊಳಿಸುತ್ತದೆ ಮತ್ತು ಅವರಲ್ಲಿ ಉತ್ಪಾದಕತೆಯನ್ನು ಹೆಚ್ಚಿಸುತ್ತದೆ ಎಂದು ಹೇಳಿದರು.
ಸಿಕ್ಕಿಂ, ಹಿಮಾಚಲ ಪ್ರದೇಶ, ಕೇರಳ, ಹರ್ಯಾಣ ಮತ್ತು ಉತ್ತರಾಖಂಡ ಈಗಾಗಲೇ ಬಯಲು ಶೌಚ ಮುಕ್ತ ಎಂದು ಘೋಷಿಸಲ್ಪಟ್ಟಿವೆ ಎಂದ ಅವರು, ಸುಮಾರು 4.60 ಲ.ಮನೆಗಳು ಮತ್ತು 4 ಲ.ಶಾಲೆಗಳಲ್ಲಿ ಶೌಚಾಲಯಗಳನ್ನು ನಿರ್ಮಿಸಲಾಗಿದೆ ಎಂದರು.
ತ್ಯಾಜ್ಯದಿಂದ ಸಂಪತ್ತು ಸೃಷ್ಟಿಯಲ್ಲಿ ತಂತ್ರಜ್ಞಾನ ಬಳಕೆ ಸರಕಾರದ ಆದ್ಯತೆಯಾಗಿದೆ ಎಂದೂ ರಾಜನಾಥ ಹೇಳಿದರು.