ವಾಯುಯಾನ, ವಿಜ್ಞಾನ, ವ್ಯಾಪಾರ ಸೇರಿದಂತೆ 15 ಒಪ್ಪಂದಗಳಿಗೆ ಭಾರತ-ಜಪಾನ್ ಸಹಿ
ಹೊಸದಿಲ್ಲಿ, ಸೆ.15: ನಾಗರಿಕ ವಾಯುಯಾನ, ವ್ಯಾಪಾರ , ವಿಜ್ಞಾನ ಮತ್ತು ತಂತ್ರಜ್ಞಾನ ಮತ್ತು ಕೌಶಲ್ಯ ಅಭಿವೃದ್ಧಿ ಇವೇ ಮುಂತಾದ 15 ಪ್ರಮುಖ ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರ ಒಪ್ಪಂದಕ್ಕೆ ಭಾರತ ಹಾಗೂ ಜಪಾನ್ ಸಹಿಹಾಕಿವೆ.
ವಿಪತ್ತು ಅಪಾಯವನ್ನು ಕನಿಷ್ಠಗೊಳಿಸುವ ನಿಟ್ಟಿನಲ್ಲಿ ಸಹಕಾರ ಮತ್ತು ಸಹಭಾಗಿತ್ವ ಹೊಂದುವ ಒಪ್ಪಂದಕ್ಕೆ ಭಾರತದ ಗೃಹ ಸಚಿವಾಲಯ ಹಾಗೂ ಜಪಾನ್ ಸರಕಾರ ಸಹಿ ಹಾಕಿವೆ. ಭಾರತದಲ್ಲಿ ಜಪಾನ್ ಭಾಷೆಯ ಕಲಿಕೆ ಹಾಗೂ ಕೌಶಲ್ಯ ಅಭಿವೃದ್ಧಿಯ ಕ್ಷೇತ್ರದ ಸಹಕಾರವನ್ನು ಇನ್ನಷ್ಟು ಸದೃಢಗೊಳಿಸಲೂ ಉಭಯ ದೇಶಗಳು ನಿರ್ಧರಿಸಿವೆ.
‘ಭಾರತ-ಜಪಾನ್ ಹೂಡಿಕೆ ಅಭಿವೃದ್ಧಿ ನೀಲನಕ್ಷೆ’ಯಲ್ಲಿ ಭಾರತದಲ್ಲಿ ಜಪಾನ್ ದೇಶದ ಹೂಡಿಕೆಯ ಸಾಧ್ಯತೆಯ ಬಗ್ಗೆ ವಿವರಿಸಲಾಗಿದ್ದರೆ ‘ ಮೇಕ್ ಇನ್ ಇಂಡಿಯಾ ಪರಿಕಲ್ಪನೆಗಾಗಿ ಜಪಾನ್-ಭಾರತ ವಿಶೇಷ ಕಾರ್ಯಸೂಚಿ’ಯಲ್ಲಿ ಗುಜರಾತ್‌ನ ಮಂಡಲ್ ಬೆಚ್‌ರಾಜ್- ಖೋರಜ್ ಪ್ರದೇಶದ ಮೂಲಸೌಕರ್ಯ ಅಭಿವೃದ್ಧಿಯಲ್ಲಿ ದ್ವಿಪಕ್ಷೀಯ ಸಹಕಾರದ ಬಗ್ಗೆ ವಿವರಿಸಲಾಗಿದೆ.
ನಾಗರಿಕ ವಾಯುಯಾನ ಕ್ಷೇತ್ರದಲ್ಲಿ ಸಹಿ ಹಾಕಲಾದ ಒಪ್ಪಂದದ ಪ್ರಕಾರ, ಇನ್ನು ಮುಂದೆ ಉಭಯ ದೇಶಗಳೂ ಎರಡೂ ದೇಶಗಳ ಕೆಲವು ಆಯ್ದ ನಗರಗಳಲ್ಲಿ ಅನಿಯಮಿತ ವಿಮಾನಸಂಚಾರ ಸೇವೆ ನಡೆಸಬಹುದು. ಉಭಯ ದೇಶಗಳ ಯುವ ವಿಜ್ಞಾನಿಗಳ ವಿನಿಮಯ ಕಾರ್ಯಕ್ರಮದ ಮೂಲಕ ವೈಜ್ಞಾನಿಕ ಸಂಶೋಧನೆಗೆ ಪ್ರೋತ್ಸಾಹ ನೀಡುವ ಒಪ್ಪಂದಕ್ಕೂ ಸಹಿ ಹಾಕಲಾಗಿದೆ.
ಜೀವವಿಜ್ಞಾನ ಮತ್ತು ಬಯೊಟೆಕ್ ಕ್ಷೇತ್ರದಲ್ಲಿ ಪರಸ್ಪರ ಸಹಕಾರ ಸಂಬಂಧಕ್ಕೆ
ಭಾರತದ ಬಯೊಟೆಕ್ನಾಲಜಿ ಸಂಸ್ಥೆ ಮತ್ತು ಜಪಾನ್‌ನ ‘ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಅಡ್ವಾನ್ಸ್‌ಡ್ ಸೈಯನ್ಸ್ ಆ್ಯಂಡ್ ಟೆಕ್ನಾಲಜಿ’ ನಡುವೆ ತಿಳುವಳಿಕಾ ಪತ್ರಕ್ಕೆ ಸಹಿ ಹಾಕಲಾಗಿದೆ. ಭಾರತದ ಈಶಾನ್ಯ ರಾಜ್ಯಗಳಲ್ಲಿ ದಕ್ಷ ಹಾಗೂ ಪರಿಣಾಮಕಾರಿ ರೀತಿಯಲ್ಲಿ ಅಭಿವೃದ್ಧಿ ಯೋಜನೆಗಳ ಅನುಷ್ಠಾನಕ್ಕೆ ಉತ್ತೇಜಿನ ನೀಡಲು ಹಾಗೂ ಈ ರಾಜ್ಯಗಳ ಮಧ್ಯೆ ಸಂಯೋಜಕತೆಯನ್ನು ಹೆಚ್ಚಿಸುವ ಉದ್ದೇಶದಿಂದ ‘ಭಾರತ- ಜಪಾನ್ ಪೂರ್ವ ವೇದಿಕೆ ಒಪ್ಪಂದ’ಕ್ಕೆ ಸಹಿ ಹಾಕಲಾಗಿದೆ. ಭಾರತದ ಕ್ರೀಡಾ ಪ್ರಾಧಿಕಾರ ಹಾಗೂ ಜಪಾನ್‌ನ ನಿಪ್ಪಾನ್ ಕ್ರೀಡಾವಿಜ್ಞಾನ ವಿವಿ ನಡುವೆ ಕ್ರೀಡಾವಲಯದಲ್ಲಿ ನಾಲ್ಕು ಒಪ್ಪಂದಗಳಿಗೆ ಸಹಿ ಹಾಕಲಾಗಿದೆ.