ನಾಳೆ ಕೊಲೆ ಪ್ರಕರಣಗಳಲ್ಲಿ ಗುರ್ಮೀತ್ ವಿಚಾರಣೆ: ಪಂಚಕುಲಾದಲ್ಲಿ ಭಾರೀ ಭದ್ರತೆ

Update: 2017-09-15 13:33 GMT

ಪಂಚಕುಲಾ(ಹರ್ಯಾಣ),ಸೆ.15: ಈಗಾಗಲೇ ಎರಡು ಅತ್ಯಾಚಾರ ಪ್ರಕರಣಗಳಲ್ಲಿ ಒಟ್ಟು 20 ವರ್ಷಗಳ ಜೈಲುಶಿಕ್ಷೆಗೆ ಗುರಿಯಾಗಿರುವ ಡೇರಾ ಸಚ್ಚಾ ಸೌದಾದ ಮುಖ್ಯಸ್ಥ ಗುರ್ಮೀತ್ ರಾಮ ರಹೀಂ ಸಿಂಗ್ ಮತ್ತು ಇತರರ ವಿರುದ್ಧದ ಎರಡು ಪ್ರತ್ಯೇಕ ಕೊಲೆ ಪ್ರಕರಣಗಳಲ್ಲಿ ಮಹತ್ವದ ವಿಚಾರಣೆಯು ಶನಿವಾರ ನಡೆಯಲಿರುವ ಹಿನ್ನೆಲೆಯಲ್ಲಿ ಪಂಚಕುಲಾ ಪಟ್ಟಣದಲ್ಲಿ ಭಾರೀ ಬಿಗುಭದ್ರತೆಯನ್ನು ಕೈಗೊಳ್ಳಲಾಗಿದೆ.

ಡೇರಾ ಪದಾಧಿಕಾರಿಗಳು ಮತ್ತು ಅನುಯಾಯಿಗಳು ಭಾಗಿಯಾಗಿದ್ದ ಸಿರ್ಸಾದ ಪತ್ರಕರ್ತ ರಾಮಚಂದರ್ ಛತ್ರಪತಿ ಮತ್ತು ಡೇರಾದ ಮಾಜಿ ಪ್ರಬಂಧಕ ರಂಜಿತ್ ಸಿಂಗ್ ಅವರ ಕೊಲೆ ಪ್ರಕರಣಗಳ ವಿಚಾರಣೆ ಪಂಚಕುಲಾದ ವಿಶೇಷ ಸಿಬಿಐ ನ್ಯಾಯಾಧೀಶ ಜಗದೀಪ ಸಿಂಗ್ ಅವರ ನ್ಯಾಯಾಲಯದಲ್ಲಿ ನಡೆಯಲಿದೆ.

ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಯ್ದುಕೊಳ್ಳಲು ಪಂಚಕುಲಾದ ಸೆಕ್ಟರ್ 1ರಲ್ಲಿರುವ ನ್ಯಾಯಾಲಯ ಸಂಕೀರ್ಣದ ಸುತ್ತಲೂ ಮತ್ತು ಇತರ ಪ್ರದೇಶಗಳಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಅರೆ ಸೇನಾಪಡೆಗಳು ಮತ್ತು ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ ಎಂದು ಹರ್ಯಾಣದ ಡಿಜಿಪಿ ಬಿ.ಎಸ್.ಸಂಧು ಅವರು ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದರು.

ವಿಶೇಷ ಸಿಬಿಐ ನ್ಯಾಯಾಲಯವು ಗುರ್ಮೀತ್‌ನನ್ನು ಅತ್ಯಾಚಾರ ಪ್ರಕರಣಗಳಲ್ಲಿ ಅಪರಾಧಿಯೆಂದು ಘೋಷಿಸಿದ್ದ ಆ.25ರ ಮುನ್ನಾದಿನ ಪಂಚಕುಲಾದಲ್ಲಿ ಲಕ್ಷಕ್ಕೂ ಅಧಿಕ ಡೇರಾ ಬೆಂಬಲಿಗರು ಜಮಾಯಿಸಿದ್ದರು. ಆದರೆ ಈ ಬಾರಿ ಅಂತಹ ಜಮಾವಣೆ ವರದಿಯಾಗಿಲ್ಲ.

ರೋಹ್ಟಕ್ ಸಮೀಪದ ಸುನರಿಯಾ ಜೈಲಿನಲ್ಲಿರುವ ಗುರ್ಮೀತ್‌ನನ್ನು ಶನಿವಾರ ವಿಚಾರಣೆಗೆ ಖುದ್ದಾಗಿ ಹಾಜರು ಪಡಿಸುವುದಿಲ್ಲ ಮತ್ತು ವಿಚಾರಣೆಯು ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ನಡೆಯಲಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದರು.

ಛತ್ರಪತಿ ಮತ್ತು ಸಿಂಗ್ ಕೊಲೆಗಳು 2002ರಲ್ಲಿ ನಡೆದಿದ್ದವು. ಇವೆರಡೂ ಕೊಲೆಗಳನ್ನು ಗುರ್ಮೀತ್ ಸೂಚನೆಯ ಮೇರೆಗೆ ಮಾಡಲಾಗಿತ್ತು ಎಂದು ಪೊಲೀಸರು ಪ್ರತಿಪಾದಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News