ಅಕ್ರಮ ಆಸ್ತಿ ಪ್ರಕರಣ: ತಯಾಲ್ ವಿರುದ್ಧ ಪ್ರಕರಣ ದಾಖಲಿಸಲು ನಿರ್ಧಾರ
ಹೊಸದಿಲ್ಲಿ, ಸೆ.16: ಜಾರಿನಿರ್ದೇಶನಾಲಯವು ಹರ್ಯಾಣದ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡ ಅವರ ಪ್ರಧಾನ ಕಾರ್ಯದರ್ಶಿಯಾಗಿದ್ದ ಮುರಳಿಲಾಲ್ ತಯಾಲ್ ವಿರುದ್ಧ ಹಣಚಲುವೆ ಪ್ರಕರಣವನ್ನು ದಾಖಲಿಸಿಕೊಳ್ಳುವ ನಿರೀಕ್ಷೆಯಿದೆ. ಇದೀಗ ನಿವೃತ್ತರಾಗಿರುವ ತಯಾಲ್, ಆದಾಯ ಮೀರಿ ಆಸ್ತಿ ಗಳಿಸಿದ್ದಾರೆ ಎಂಬ ಆರೋಪದಲ್ಲಿ ಈ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ.
ಸಿಬಿಐ ಸೆ.4ರಂದು ತಯಾಲ್ ವಿರುದ್ಧ ಅಕ್ರಮ ಆಸ್ತಿ ಹೊಂದಿರುವ ಪ್ರಕರಣ ದಾಖಲಿಸಿದ್ದು , ಈ ಪ್ರಕರಣದ ಎಫ್‌ಐಆರ್ ಪ್ರತಿಯನ್ನು ನಾವು ಪಡೆದಿದ್ದೇವೆ. ಇದರಂತೆ ಮುಂದಿನ ವಾರ ಹಣಚಲುವೆ ಪ್ರಕರಣ ದಾಖಲಿಸಲಾಗುವುದು ಎಂದು ಜಾರಿನಿರ್ದೇಶನಾಲಯದ ಅಧಿಕಾರಿಯೋರ್ವರು ತಿಳಿಸಿದ್ದಾರೆ. ಎಫ್‌ಐಆರ್‌ನಲ್ಲಿ ತಯಾಲ್‌ಗೆ ಸೇರಿರುವ ಸ್ಥಿರ ಮತ್ತು ಚರ ಆಸ್ತಿಗಳ ಪಟ್ಟಿಯನ್ನು ಸಿಬಿಐ ನೀಡಿದ್ದು , ಇದರಲ್ಲಿ ಸೇರಿರುವ 15 ಸ್ಥಿರ ಆಸ್ತಿಗಳಲ್ಲಿ 7 ಆಸ್ತಿಗಳು ಗುರ್ಗಾಂವ್‌ನ ಯುನಿಟೆಕ್ ಸೈಬರ್ ಪಾರ್ಕ್‌ನಲ್ಲಿವೆ. ತನಿಖೆಯ ಮುಂದಿನ ಹಂತದಲ್ಲಿ ಈ ಆಸ್ತಿಗಳನ್ನು ಜಪ್ತಿ ಮಾಡುವ ಪ್ರಕ್ರಿಯೆ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಚಂಡೀಗಡದಲ್ಲಿ ಸಿಬಿಐ ದಾಖಲಿಸಿರುವ ಎಫ್‌ಐಆರ್‌ನಲ್ಲಿ , ತಯಾಲ್ ಮತ್ತವರ ಕುಟುಂಬವರ್ಗ ಘೋಷಿತ ಆದಾಯಕ್ಕಿಂತ 9.8 ಕೋಟಿ ರೂ. ಮೊತ್ತದ ಹೆಚ್ಚುವರಿ ಆಸ್ತಿಯನ್ನು ಹೊಂದಿರುವುದಾಗಿ ಉಲ್ಲೇಖಿಸಲಾಗಿದೆ. ಅಲ್ಲದೆ ವಾಹನಗಳು, ಚಿನ್ನಾಭರಣ, ಬ್ಯಾಂಕ್‌ನಲ್ಲಿರುವ ಹಣ ಇತ್ಯಾದಿಗಳು ಸೇರಿದಂತೆ 9.8 ಕೋಟಿ ರೂ. ಮೊತ್ತದ ವಸ್ತುಗಳನ್ನೂ ಉಲ್ಲೇಖಿಸಲಾಗಿದೆ.
ತಯಾಲ್‌ನ ಪತ್ನಿ ಸವಿತ, ಮಗ ಕಾರ್ತಿಕ್, ಪುತ್ರಿ ಮಾಳವಿಕ ಹಾಗೂ ಕುಟುಂಬಕ್ಕೆ ಸೇರಿದ ಕಪ್ಪಾಕ್ ಫಾರ್ಮ ಲಿ. ಎಂಬ ಸಂಸ್ಥೆಯನ್ನು ಆರೋಪಿಗಳೆಂದು ಹೆಸರಿಸಲಾಗಿದೆ. 2005ರ ಮಾರ್ಚ್ 6ರಿಂದ 2009ರ ಅಕ್ಟೋಬರ್ 31ರವರೆಗೆ ಹರ್ಯಾಣ ಮುಖ್ಯಮಂತ್ರಿಗೆ ಪ್ರಧಾನ ಕಾರ್ಯದರ್ಶಿಯಾಗಿದ್ದ ತಯಾಲ್ ಮತ್ತವರ ಕುಟುಂಬದ ಆದಾಯ 2006ರಲ್ಲಿ 32 ಲಕ್ಷ ರೂ. ಇದ್ದರೆ 2014ರ ಅಂತ್ಯದಲ್ಲಿ 27.46 ಕೋಟಿ ರೂ. ಆಗಿದೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ. 2009ರಲ್ಲಿ ನಿವೃತ್ತರಾದ ತಯಾಲ್‌ರನ್ನು ಮುಂದಿನ ಐದು ವರ್ಷಾವಧಿಗೆ ‘ಸ್ಪರ್ಧಾ ಆಯೋಗ’ದ ಅಧಿಕಾರಿಯಾಗಿ ನೇಮಿಸಲಾಗಿತ್ತು.
ಹರ್ಯಾಣದ ಮಾಜಿ ಮುಖ್ಯಮಂತ್ರಿ ಹೂಡಾರಿಗೆ ಹಾಗೂ ಅವರ ನಿಕಟವರ್ತಿಗಳಿಗೆ ಸೇರಿದ್ದ 24 ಕಟ್ಟಡಗಳ ಮೇಲೆ 2016ರಲ್ಲಿ ಸಿಬಿಐ ದಾಳಿ ನಡೆಸಿ ಶೋಧ ಕಾರ್ಯಾಚರಣೆ ನಡೆಸಿದೆ. ಹೂಡಾರಿಗೆ ನಿಕಟವರ್ತಿಯಾಗಿದ್ದ ತಯಾಲ್, ಸರಕಾರ ಕೈಗೊಳ್ಳುತ್ತಿದ್ದ ಬಹುತೇಕ ನಿರ್ಧಾರಗಳಲ್ಲಿ ಸಕ್ರಿಯ ಪಾತ್ರ ವಹಿಸುತ್ತಿದ್ದರು. ಅಲ್ಲದೆ ತನ್ನ ಅಧಿಕಾರಾವಧಿಯಲ್ಲಿ ಘೋಷಿತ ಆದಾಯ ಮೀರಿ ಆಸ್ತಿ ಗಳಿಸಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.