ಭರ್ಜರಿ: ಮಸಾಲಾ ಮನರಂಜನೆ

Update: 2017-09-16 18:36 GMT

ಲವ್‌ಸ್ಟೋರಿಗಳ ಏಕತಾನತೆಯನ್ನು ಮೀರುವುದು ಸುಲಭವಲ್ಲ. ಇನ್ನು ಯುವ ಸ್ಟಾರ್ ಹೀರೋಗಳಿಗೆ ಲವ್ ಜೊತೆ ಆ್ಯಕ್ಷನ್ ಕೂಡ ಇರಬೇಕು. ಲವ್, ಆ್ಯಕ್ಷನ್, ಫ್ಯಾಮಿಲಿ ಸೆಂಟಿಮೆಂಟ್‌ಗಳನ್ನು ಹದವಾಗಿ ಬೆರೆಸಿ ಸಿನೆಮಾ ನಿರೂಪಿಸುವುದು ಒಂದೊಳ್ಳೆಯ ಮಾಸ್ ಸಿನೆಮಾದ ಸಿದ್ಧಸೂತ್ರ. ಇಲ್ಲಿ ಕೊಂಚ ಏರುಪೇರಾದರೂ ಸಿನೆಮಾ ಪ್ರೇಕ್ಷಕನ ಅವಗಣನೆಗೆ ಗುರಿಯಾಗಬೇಕಾಗುತ್ತದೆ. ‘ಭರ್ಜರಿ’ ಸಿನೆಮಾದಲ್ಲಿ ನಿರ್ದೇಶಕ ಚೇತನ್ ಕುಮಾರ್ ಎಚ್ಚರಿಕೆಯಿಂದ ಚಿತ್ರಕಥೆ ಹೆಣೆದುಕೊಂಡಿದ್ದಾರೆ.

ಆ್ಯಕ್ಷನ್ ಹೆಚ್ಚೆನಿಸಿದರೂ, ತೆಳು ಹಾಸ್ಯ ಮತ್ತು ಲವಲವಿಕೆಯ ನಿರೂಪಣೆಯಿಂದ ಚಿತ್ರ ನೋಡುಗರನ್ನು ಹಿಡಿದಿಡುತ್ತದೆ. ಸಿನೆಮಾ ಕೊಂಚ ಕಮರ್ಷಿಯಲ್ ತೆಲುಗು ಸಿನೆಮಾಗಳನ್ನು ನೆನಪಿಸುತ್ತದೆ. ಅಲ್ಲಿನ ರಾಯಲ ಸೀಮೆ ಪ್ರದೇಶದ ಖಡಕ್ ಕತೆಗಳಂತೆ ಇಲ್ಲಿಯೂ ನಿರ್ದೇಶಕ ಚೇತನ್ ಕತೆ ಮಾಡಿಕೊಂಡಿದ್ದಾರೆ. ಮೊದಲರ್ಧದ ಕತೆಯನ್ನು ಲವಲವಿಕೆಯಿಂದ ನಿರೂಪಿಸುವ ಅವರು ಮುಂದುವರಿದ ಭಾಗದಲ್ಲೊಂದು ವಿಶಿಷ್ಟ ತಿರುವು ತಂದಿದ್ದಾರೆ. ಮಧ್ಯೆ ಮಧ್ಯೆ ಭರ್ಜರಿ ಹೊಡೆದಾಟಗಳೂ ಇದ್ದು ಅಲ್ಲಲ್ಲಿ ಫ್ಯಾಮಿಲಿ ಡ್ರಾಮಾ ಸನ್ನಿವೇಶಗಳೂ ಇವೆ. ಒಟ್ಟಿನಲ್ಲಿ ಪ್ರೇಕ್ಷಕರಿಗೆ ಬೇಸರವಾಗದಂತೆ ಕಮರ್ಷಿಯಲ್ ಚಿತ್ರವೊಂದಕ್ಕೆ ಬೇಕಾಗುವ ಎಲ್ಲಾ ಅಂಶಗಳನ್ನೂ ಸರಿದೂಗಿಸಿದ್ದಾರೆ. ಚಿತ್ರದಲ್ಲಿ ದೊಡ್ಡ ತಾರಾಬಳಗವೇ ಇದೆ. ಹಿರಿಯ ಪೋಷಕ ಕಲಾವಿದರಿಗೆ ಹೊಂದುವಂತಹ ಪಾತ್ರಗಳು ಮತ್ತು ಪಾತ್ರಗಳಿಗೆ ಹೊಂದಿಕೆಯಾಗುವಂತಹ ವೇಷಭೂಷಣ ಇದೆ. ಸುದೀರ್ಘ ಅವಧಿಯ ಚಿತ್ರೀಕರಣವಾದರೂ ಕಂಟಿನ್ಯುಟಿಗೆ ಎಲ್ಲಿಯೂ ತೊಂದರೆಯಾಗಿಲ್ಲ. ನಿರ್ದೇಶಕ ಚೇತನ್ ತುಂಬಾ ಎಚ್ಚರಿಕೆಯಿಂದ ಕೆಲಸ ಮಾಡಿದ್ದಾರೆ. ಅಲ್ಲದೆ ತಂತ್ರಜ್ಞರನ್ನೂ ಚೆನ್ನಾಗಿ ದುಡಿಸಿಕೊಂಡಿದ್ದಾರೆ.

ಪ್ರಮುಖವಾಗಿ ಸಾಹಸ ನಿರ್ದೇಶಕರಿಗೆ ಹೆಚ್ಚು ಮಾರ್ಕ್ ಸಲ್ಲಬೇಕು. ಪ್ರತೀ ಆ್ಯಕ್ಷನ್ ಸನ್ನಿವೇಶಗಳಲ್ಲೂ ಸಾಹಸ ನಿರ್ದೇಶಕರ ಪರಿಶ್ರಮ ಎದ್ದುಕಾಣುತ್ತದೆ. ಹರಿಕೃಷ್ಣರ ಸಂಗೀತದಲ್ಲಿ ಎರಡು ಹಾಡುಗಳು, ಪಿಕ್ಚರೈಸೇಷನ್ ಇಷ್ಟವಾಗುತ್ತದೆ. ಹೀರೋ ಧ್ರುವ ಸರ್ಜಾ ಅವರು ಚಿತ್ರದುದ್ದಕ್ಕೂ ತುಂಬಿಕೊಂಡಿದ್ದಾರೆ. ಆ್ಯಕ್ಷನ್ ಸನ್ನಿವೇಶಗಳಲ್ಲಿ ಅವರ ಎನರ್ಜಿ, ಲವಲವಿಕೆಯ ನಟನೆ ಇಷ್ಟವಾಗುತ್ತದೆ. ಕೆಲವೊಮ್ಮೆ ಅವರ ಏರುಗತಿಯ ಮಾತುಗಳು ಅಗತ್ಯವಿಲ್ಲ ಎನಿಸಿದರೂ ಚಿತ್ರದ ತೆಳುಹಾಸ್ಯದ ನಿರೂಪಣೆ ಇದನ್ನು ಸರಿದೂಗಿಸುತ್ತದೆ. ಗುಳಿಕೆನ್ನೆಯ ಹುಡುಗಿ ರಚಿತಾ ರಾಮ್ ಮತ್ತು ಹರಿಪ್ರಿಯಾ ಗ್ಲಾಮರ್ ಮತ್ತು ಚಟುವಟಿಕೆಯ ನಟನೆಯಿಂದ ನೋಡುಗರನ್ನು ಆಕರ್ಷಿಸುತ್ತಾರೆ. ಆ್ಯಕ್ಷನ್ ಸನ್ನಿವೇಶಗಳು ಅತಿಯಾಯ್ತು ಎನಿಸಿದರೂ ಒಂದೊಳ್ಳೆ ಮಸಾಲಾ ಎಂಟರ್‌ಟೇನರ್ ಚಿತ್ರವಾಗಿ ‘ಭರ್ಜರಿ’ಯನ್ನು ಮೆಚ್ಚಿಕೊಳ್ಳಬಹುದು.

ನಿರ್ದೇಶನ: ಚೇತನ್ ಕುಮಾರ್,
ನಿರ್ಮಾಣ: ಆರ್.ಶ್ರೀನಿವಾಸ್ ಮತ್ತು ಶ್ರೀಕಾಂತ್ ಕೆ.ಪಿ,
ಸಂಗೀತ: ವಿ.ಹರಿಕೃಷ್ಣ,
ಛಾಯಾಗ್ರಹಣ: ಶ್ರೀಷ ಕೂಡುವಳ್ಳಿ,
ತಾರಾಗಣ : ಧ್ರುವ ಸರ್ಜಾ, ರಚಿತಾ ರಾಮ್, ಹರಿಪ್ರಿಯಾ, ಸಾದು ಕೋಕಿಲ, ಶ್ರೀನಿವಾಸಮೂರ್ತಿ, ಅವಿನಾಶ್, ತಾರಾ ಮತ್ತಿತರರು.

ರೇಟಿಂಗ್ - ***

* - ಚೆನ್ನಾಗಿಲ್ಲ, ** - ಸಾಧಾರಣ, *** - ಉತ್ತಮ, **** - ಅತ್ಯುತ್ತಮ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News