ರಾಬಿನ್‌ಹುಡ್ ಆರ್ಮಿ: ಸಮಾನ ಶತ್ರುವಿನ ವಿರುದ್ಧ ಒಂದಾದ ಭಾರತೀಯರು ಮತ್ತು ಪಾಕಿಸ್ತಾನಿಗಳು
ಹೊಸದಿಲ್ಲಿ,ಸೆ.17: ದಂತಕಥೆಯಾಗಿರುವ ರಾಬಿನ್‌ಹುಡ್‌ನಂತೆ ಈ ಜನರೂ ಶ್ರೀಮಂತರಿಂದ ಪಡೆದು ಬಡವರಿಗೆ ಹಂಚುತ್ತಾರೆ. ಆದರೆ ರಾಬಿನ್‌ಹುಡ್‌ನಂತೆ ಕಾನೂನನ್ನು ಉಲ್ಲಂಘಿಸಿಯಲ್ಲ.
ರಾಬಿನ್‌ಹುಡ್ ಆರ್ಮಿ(ಆರ್‌ಎಚ್‌ಎ) ಎಂದು ಕರೆಯಲಾಗುತ್ತಿರುವ ಉತ್ಸಾಹಿ ಪುರುಷರು ಮತ್ತು ಮಹಿಳೆಯರ ಗುಂಪು ರೆಸ್ಟೋರಂಟ್‌ಗಳು ಮತ್ತು ಮದುವೆ ಮನೆಗಳಲ್ಲಿ ಹೆಚ್ಚುವರಿಯಾಗಿ ಉಳಿಯುವ ಆಹಾರವನ್ನು ಸಂಗ್ರಹಿಸಿ ಅವುಗಳನ್ನು ಬಡವರಿಗೆ, ಹಸಿದವರಿಗೆ ಹಂಚುವ ಉದಾತ್ತ ಕಾರ್ಯವನ್ನು ಮಾಡುತ್ತಿದೆ. ಇಂದು ಆರ್‌ಎಚ್‌ಎನ ಕಾರ್ಯವ್ಯಾಪ್ತಿ ಇಡೀ ಭಾರತೀಯ ಉಪಖಂಡವನ್ನು ವ್ಯಾಪಿಸಿದೆ.
ವಿದ್ಯಾರ್ಥಿಗಳು ಮತ್ತು ಯುವ ವೃತ್ತಿಪರರೇ ಹೆಚ್ಚಿರುವ ಈ ಗುಂಪಿನ ಸದಸ್ಯರು ತಮ್ಮನ್ನು ‘ರಾಬಿನ್ಸ್’ಎಂದು ಕರೆದುಕೊಳ್ಳುತ್ತಾರೆ. ಹಸಿರು ಬಣ್ಣದ ಸಮವಸ್ತ್ರದಲ್ಲಿರುವ ಈ ಸ್ವಯಂಸೇವಕರು ರಾತ್ರಿಯ ವೇಳೆ ನಿಗದಿತ ಸ್ಥಳಗಳಿಗೆ ತೆರಳಿ ಆಹಾರವನ್ನು ಸಂಗ್ರಹಿಸಿ ಅದನ್ನು ನಿರ್ಗತಿಕರು ಮತ್ತು ಇತರರಿಗೆ ಹಂಚುತ್ತಾರೆ.
ಕಳೆದ ತಿಂಗಳು ಭಾರತ ಮತ್ತು ಪಾಕಿಸ್ತಾನಗಳು ಸ್ವಾತಂತ್ರೋತ್ಸವ ಆಚರಿಸಿದ ಸಂದರ್ಭದಲ್ಲಿ ಉಭಯ ದೇಶಗಳಲ್ಲಿಯ ಆರ್‌ಎಚ್‌ಎ ತಮ್ಮ ಸಮಾನ ಶತ್ರು ಹಸಿವೆಯ ವಿರುದ್ಧ ಹೋರಾಡಲು ಮತ್ತು 48 ನಗರಗಳಲ್ಲಿಯ 1.32 ಮಿಲಿಯಕ್ಕೂ ಅಧಿಕ ಹಸಿದ ಹೊಟ್ಟೆಗಳನ್ನು ತುಂಬಿಸಲು ಪರಸ್ಪರ ಕೈ ಜೋಡಿಸಿವೆ.
ಪ್ರತಿವರ್ಷ ಏಡ್ಸ್, ಮಲೇರಿಯಾ ಮತ್ತು ಭಯೋತ್ಪಾದನೆಯಿಂದ ಸಂಭವಿಸುತ್ತಿರುವ ಒಟ್ಟು ಸಾವುಗಳಿಗಿಂತ ಹೆಚ್ಚಿನ ಸಾವುಗಳು ಹಸಿವೆಯಿಂದ ಸಂಭವಿಸುತ್ತವೆ. ನಮ್ಮಲ್ಲಿ ಆಹಾರದ ಕೊರತೆಯಿಲ್ಲ, ಆದರೆ ವಿತರಣೆ ಸರಿಯಾಗಿ ಆಗುತ್ತಿಲ್ಲ ಎನ್ನುತ್ತಾರೆ ಆರ್‌ಎಚ್‌ಎದ ಸಹಸ್ಥಾಪಕ ನೀಲ್ ಘೋಷ್.
2014,ಆಗಸ್ಟ್‌ನಲ್ಲಿ ಆರು ರಾಬಿನ್‌ಗಳು ದಿಲ್ಲಿಯಲ್ಲಿ ಈ ಗುಂಪನ್ನು ಆರಂಭಿಸಿದ್ದರು. ಮೊದಲ ರಾತ್ರಿ ಅವರು 150 ಜನರಿಗೆ ಆಹಾರವನ್ನು ವಿತರಿಸಿದ್ದರು. ಮೂರು ವರ್ಷಗಳ ಬಳಿಕ ಇಂದು ಈ ಗುಂಪು 12,350 ಸ್ವಯಂಸೇವಕರನ್ನು ಹೊಂದಿದ್ದು, 34,36,531ಕ್ಕೂ ಅಧಿಕ ಜನರಿಗೆ ಆಹಾರವನ್ನು ಪೂರೈಸಿದೆ.
ಆರ್‌ಎಚ್‌ಎ ಭಾರತೀಯ ಉಪಖಂಡದ ಸುಮಾರು 50 ನಗರಗಳಲ್ಲಿ ಘಟಕಗಳನ್ನು ಹೊಂದಿದೆ. 2015,ಫೆಬ್ರವರಿಯಲ್ಲಿ ಕರಾಚಿಯಲ್ಲಿ ಮೊದಲ ಆಹಾರ ವಿತರಣೆಯೊಂದಿಗೆ ಪಾಕಿಸ್ತಾನದಲ್ಲಿ ತನ್ನ ಉದಾತ್ತ ಕಾರ್ಯವನ್ನು ಪ್ರಾರಂಭಿಸಿದ್ದ ಗುಂಪು ಶ್ರೀಲಂಕಾ ಮತ್ತು ಇತರ ಏಷ್ಯನ್ ದೇಶಗಳಲ್ಲಿಯೂ ಸ್ವಯಂಸೇವಕರನ್ನು ಹೊಂದಿದೆ.
ಪೋರ್ತುಗಲ್‌ನಲ್ಲಿ ರೆಸ್ಟೋರಂಟ್‌ಗಳಿಂದ ಹೆಚ್ಚುವರಿ ಆಹಾರವನ್ನು ಸಂಗ್ರಹಿಸಿ ಅಗತ್ಯವುಳ್ಳವರಿಗೆ ವಿತರಿಸುತ್ತಿರುವ ‘ರಿಫುಡ್’ ಸಂಸ್ಥೆಯಿಂದ ಪ್ರೇರಣೆ ಪಡೆದಿದ್ದ ಘೋಷ್ ಆನಂದ್ ಸಿನ್ಹಾ ಮತ್ತು ಅರುಷಿ ಬಾತ್ರಾ ಅವರ ಸಹಭಾಗಿತ್ವದೊಡನೆ ಆರ್‌ಎಚ್‌ಎ ಸ್ಥಾಪಿಸಿದ್ದರು.
ವಿವಿಧ ನಗರಗಳಲ್ಲಿಯ ಆರ್‌ಎಚ್‌ಎ ಘಟಕಗಳು ಸ್ಥಳೀಯ ರಸ್ಟೋರಂಟ್‌ಗಳು ಮತ್ತು ಕೇಟರರ್‌ಗಳೊಂದಿಗೆ ಸಂಪರ್ಕದಲ್ಲಿರುತ್ತವೆ. ರಾಬಿನ್‌ಗಳು ಆಹಾರವನ್ನು ಕೊಡುಗೆಯಾಗಿ ನೀಡಲು ಸಿದ್ಧವಿರುವವರಿಂದ ದಿನದ ಅಂತ್ಯದಲ್ಲಿ ಅಥವಾ ವಿತರಣೆಯ ಸಂದರ್ಭದಲ್ಲಿ ಅದನ್ನು ಪಡೆದುಕೊಂಡು, ಪ್ಯಾಕೆಟ್‌ಗಳಲ್ಲಿ ತುಂಬಿ ನಿರ್ದಿಷ್ಟ ಪ್ರದೇಶದಲ್ಲಿ ಅಗತ್ಯವುಳ್ಳವರಿಗೆ ಅವುಗಳನ್ನು ವಿತರಿಸುತ್ತಾರೆ. ಇದಕ್ಕಾಗಿ ತಗಲುವ ಸಾರಿಗೆ ಇತ್ಯಾದಿ ವೆಚ್ಚಗಳನ್ನು ಸ್ವಯಂಸೇವಕರೇ ಭರಿಸುತ್ತಾರೆ.
ಸಾಮಾಜಿಕ ಮಾಧ್ಯಮಗಳ ನೆರವಿನೊಂದಿಗೆ ಶ್ರೀಲಂಕಾ, ಇಂಡೋನೇಷ್ಯಾ, ಫಿಲಿಪ್ಪೀನ್ಸ್ ಮತ್ತು ಮಲೇಷಿಯಾಗಳ ಹಲವಾರು ಜನರೂ ಆರ್‌ಎಚ್‌ಎನೊಂದಿಗೆ ಕೈ ಜೋಡಿಸಿದ್ದಾರೆ.
ಆಹಾರವೂ ಈಗಲೂ ಆರ್‌ಎಚ್‌ಎದ ಮುಖ್ಯ ಕಾಳಜಿಯಾಗಿದ್ದರೂ ಅದೀಗ ಬಟ್ಟೆಗಳ ವಿತರಣೆ ಮತ್ತು ಬಡ ವಿದ್ಯಾರ್ಥಿಗಳಿಗೆ ನೆರವು ಒದಗಿಸಲು ಪ್ರಯತ್ನಗಳನ್ನು ನಡೆಸುತ್ತಿದೆ. ಶಾಲೆಗಳ ನವೀಕರಣ, ಅಲ್ಲಿ ಶೌಚಾಲಯ ನಿರ್ಮಾಣ ಇತ್ಯಾದಿ ಯೋಜನೆಗಳನ್ನು ಗುಂಪು ಕೈಗೆತ್ತಿಕೊಂಡಿದ್ದು, ಕ್ರೌಡ್ ಸೋರ್ಸಿಂಗ್ ಮೂಲಕ ಅಗತ್ಯ ಹಣಕಾಸನ್ನು ಸಂಗ್ರಹಿಸುತ್ತದೆ. ಇತ್ತೀಚಿಗೆ ನೆರೆ ಹಾವಳಿಗೆ ಸಿಲುಕಿದ್ದ ಗುಜರಾತ್‌ನಲ್ಲಿ 39,000 ಸಂತ್ರಸ್ತರಿಗೆ 10,000 ಕೆ.ಜಿ. ಆಹಾರ ಧಾನ್ಯಗಳು ಮತ್ತು 2000 ಕೆ.ಜಿ. ಬಟ್ಟೆಗಳನ್ನು ಒದಗಿಸಿದ ತೃಪ್ತಿಯೂ ಈ ಗುಂಪಿಗಿದೆ.
ಕೊಳಗೇರಿಗಳ ಮಕ್ಕಳು ಶಾಲೆಗಳಿಗೆ ಸೇರಲು ಸಜ್ಜುಗೊಳಿಸಲು 19 ನಗರಗಳಲ್ಲಿ ರಾಬಿನ್‌ಹುಡ್ ಅಕಾಡೆಮಿಗಳೂ ಆರಂಭಗೊಂಡಿವೆ.