ರೊಹಿಂಗ್ಯಾ ಮುಸ್ಲಿಮರನ್ನು ಬೆಂಬಲಿಸಿದ ಬಿಜೆಪಿ ಅಲ್ಪಸಂಖ್ಯಾತ ಘಟಕದ ನಾಯಕಿಯ ಅಮಾನತು
ಹೊಸದಿಲ್ಲಿ, ಸೆ.17: ಮ್ಯಾನ್ಮಾರ್ ನಲ್ಲಿರುವ ರೊಹಿಂಗ್ಯ ಮುಸ್ಲಿಮರಿಗೆ ಬೆಂಬಲಿಸಿ ಫೇಸ್ಬುಕ್ ಪೋಸ್ಟ್ ಹಾಕಿದ ಕಾರಣಕ್ಕಾಗಿ ಅಸ್ಸಾಂ ರಾಜ್ಯ ಕಾರ್ಯಕಾರಿ ಸಮಿತಿಯ ಅಲ್ಪಸಂಖ್ಯಾತ ಸಮುದಾಯದ ಸದಸ್ಯೆಯೊಬ್ಬರನ್ನು ಬಿಜೆಪಿ ಅಮಾನತುಗೊಳಿಸಿದೆ.
ಮ್ಯಾನ್ಮಾರ್ ಸರಕಾರ ರೊಹಿಂಗ್ಯನ್ನರ ಮೇಲೆ ನಡೆಸುತ್ತಿರುವ ದೌರ್ಜನ್ಯವನ್ನು ಖಂಡಿಸಿ ಉಪವಾಸ ಕೈಗೊಳ್ಳಬೇಕು ಎಂದು ಬೆನಝೀರ್ ಅರ್ಫಾನ್ ಕೆಲ ದಿನಗಳ ಹಿಂದೆ ಫೇಸ್ಬುಕ್ ಪೋಸ್ಟ್ ಮೂಲಕ ಮನವಿ ಮಾಡಿದ್ದರು. ಗುವಾಹಟಿ ಮೂಲದ ಎನ್ ಜಿಒ ಯುನೈಟೆಡ್ ಮೈನಾರಿಟಿ ಪೀಪಲ್ಸ್ ಫಾರಂ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಇದಕ್ಕೆ ಸಂಬಂಧಿಸಿದ ಪೋಸ್ಟೊಂದನ್ನು ಬೆನಝೀರ್ ಶೇರ್ ಮಾಡಿದ್ದರು. ತದನಂತರ ಕೇಸರಿ ಪಾಳಯದಲ್ಲಿ ಈ ವಿಚಾರ ವಿವಾದದ ಕೇಂದ್ರ ಬಿಂದುವಾಗಿತ್ತು.
ಈ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯ ಘಟಕದ ಕಾರ್ಯದರ್ಶಿ ದಿಲೀಪ್ ಸೈಕಿಯಾ ಬೆನಝೀರ್ ರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಪಕ್ಷದಿಂದ ಅಮಾನತುಗೊಳಿಸಿದೆ. ಅಲ್ಲದೆ, ನಿಮ್ಮ ಮೇಲೆ ಶಿಸ್ತುಕ್ರಮವನ್ನು ಏಕೆ ತೆಗೆದುಕೊಳ್ಳಬಾರದು ಎಂದು 3 ದಿನಗಳೊಳಗಾಗಿ ವಿವರಿಸುವಂತೆ ಹೇಳಿದ್ದಾರೆ.
“ಪ್ರಾರ್ಥನಾ ಸಭೆಯ ಬದಲು ಉಪವಾಸ ಧರಣಿ ಎಂದು ಬರೆದದ್ದೇ ನನ್ನ ಏಕೈಕ ತಪ್ಪು. ತಪ್ಪು ಪದಬಳಕೆಗಾಗಿ ನಾನು ಕ್ಷಮೆ ಯಾಚಿಸಿದ್ದೇನೆ. ಆದರೆ ಪಕ್ಷ ಅದಕ್ಕೆ ಕಿವಿಗೊಟ್ಟಿಲ್ಲ” ಎಂದವರು ಹೇಳಿದ್ದಾರೆ.