ಶಿವರಾಜ್ ಕುಮಾರ್ ಗೆ ಧ್ರುವ ಸರ್ಜ ಪೈಪೋಟಿ?!

Update: 2017-09-18 11:22 GMT

ಕನ್ನಡ ಚಿತ್ರರಂಗದ ‌ಜನಪ್ರಿಯ ತಾರೆ ಹ್ಯಾಟ್ರಿಕ್ ಹೀರೋ, ಸೆಂಚುರಿ ಸ್ಟಾರ್ ಬಿರುದಾಂಕಿತ ಶಿವರಾಜಕುಮಾರ್. ಡಾ. ರಾಜಕುಮಾರ್ ಪುತ್ರ ಎನ್ನುವುದಕ್ಕಿಂತಲೂ ತಮ್ಮದೇ ಚಿತ್ರಗಳ‌ ಮೂಲಕ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಗಳಿಸಿಕೊಂಡವರು ಶಿವಣ್ಣ. ಆದರೆ ಹೊಸದಾಗಿ ಬರುವ ಹೀರೋಗಳು ಜಾತ್ರೆಯಲ್ಲಿ ಆನೆಯ ಬಾಲ ಎಳೆಯಲು ಬರುವ ಪೋರರಂತೆ ಶಿವರಾಜ್ ಕುಮಾರ್ ತಂಟೆಗೆ ಬರುವುದುಂಟು. ಅಂಥ ಘಟನೆ ಇತ್ತೀಚೆಗೆ ಧ್ರುವ ಸರ್ಜ ಕಡೆಯಿಂದ ನಡೆಯುತ್ತಿದೆ ಎನ್ನುವುದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಶಿವರಾಜ್ ಕುಮಾರ್ ಚಿತ್ರರಂಗ ಪ್ರವೇಶಿಸಿ ನಟಿಸಲಾರಂಭಿಸಿದ ಹಾಗೆ ಯಶಸ್ಸು ಕೂಡ ಜತೆ ನೀಡಿತ್ತು. 'ಆನಂದ್', 'ರಥಸಪ್ತಮಿ' ಮತ್ತು 'ಮನಮೆಚ್ಚಿದ ಹುಡುಗಿ' ಹೀಗೆ ಬಿಡುಗಡೆಯಾದ ಮೂರು ಚಿತ್ರಗಳು ಕೂಡ ದೊಡ್ಡ ಮಟ್ಟದಲ್ಲಿ ಯಶಸ್ವಿಯಾದಾಗ ಅವರಿಗೆ 'ಹ್ಯಾಟ್ರಿಕ್ ಹೀರೋ' ಎಂಬ ಬಿರುದು ನೀಡಲಾಗಿತ್ತು. ಇದೀಗ ಮೂರುದಶಕಗಳ ಬಳಿಕ ಅಂಥದೊಂದು ಬಿರುದನ್ನು ಧ್ರುವಸರ್ಜಾಗೆ ನೀಡಲು ಅಭಿಮಾನಿಗಳು‌ ಮುಂದಾಗಿದ್ದಾರೆ. ಆದರೆ ಈಗಲೂ ಕೂಡ ಚಂದನವನದಲ್ಲಿ ಕ್ಲಾಸ್ ಮಾಸ್ ಹೀರೋವಾಗಿ ಸಕ್ರಿಯವಾಗಿರುವ ಶಿವರಾಜ್ ಕುಮಾರ್ ಬಗ್ಗೆ ಇವರು ಯಾರೂ ಗಮನಹರಿಸಿಲ್ಲವೆನ್ನುವುದು ವಿಷಾದನೀಯ.

ನಾನು ಶಿವಣ್ಣನ ಅಭಿಮಾನಿ: ಧ್ರುವ

ಇದರ ನಡುವೆ 'ನಾನು‌ ಶಿವರಾಜ್ ಕುಮಾರ್ ಅವರ ಅಭಿಮಾನಿಯಾಗಿರುವಾಗ ಇಲ್ಲಿ‌ ಗೊಂದಲಗಳಿಗೆ ಅವಕಾಶವಿಲ್ಲ' ಎಂದಿದ್ದಾರೆ ಧ್ರುವ ಸರ್ಜ. ಅದಕ್ಕೆ ಅವರು ಚಿತ್ರದಲ್ಲಿ ಬಳಸಿರುವ ಒಂದು ಸಂಭಾಷಣೆ ಕೂಡ ಪೂರಕವಾಗಿದೆ ಎನ್ನುವುದನ್ನು ನೆನಪಿಸಿಕೊಳ್ಳಬಹುದು. ಆದರೆ ಸಮಸ್ಯೆ ಇಲ್ಲಿಗೆ ಮುಗಿದಂತೆ ಕಾಣುತ್ತಿಲ್ಲ.

'ಟಗರು' ಮುಂದೆ 'ಪೊಗರು'

ದುನಿಯಾ ಸೂರಿ ನಿರ್ದೇಶನದಲ್ಲಿ ಶಿವರಾಜ್ ಕುಮಾರ್ ನಟನೆಯ 'ಟಗರು' ಚಿತ್ರ ತೆರೆಗೆ ಬರುತ್ತಿರುವುದು ಎಲ್ಲರಿಗೂ ಗೊತ್ತು. ಇದೀಗ ಭರ್ಜರಿಯ ಬಳಿಕ ಬರುತ್ತಿರುವ ಧ್ರುವಸರ್ಜ ಚಿತ್ರಕ್ಕೆ 'ಪೊಗರು' ಎಂದು ಹೆಸರಿಡಲಾಗಿದೆ. ವಿಶೇಷ ಏನೆಂದರೆ ಈ ಮೊದಲು 'ಹಯಗ್ರೀವ' ಎನ್ನುವ ಹೆಸರಿನಲ್ಲಿ ಚಿತ್ರೀಕರಿಸಲಾಗುತ್ತದೆ ಎಂದು ಸುದ್ದಿಯಲ್ಲಿದ್ದ ನಿರ್ದೇಶಕ ನಂದಕಿಶೋರ್ ಸಿನಿಮಾ ಇದು. ಮತ್ತೆ ಈಗ ಯಾಕೆ ಹೀಗೆ 'ಪೊಗರು' ಎಂದು ಬದಲಾಯಿತು ಎನ್ನುವುದು ಗೊತ್ತಾಗುತ್ತಿಲ್ಲ.

ಗೆಲುವು ಅಹಂಕಾರವಾಗದಿರಲಿ

ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜ ನಾಮಬಲದೊಂದಿಗೆ ತೆರೆಗೆ ಬಂದ ಧ್ರುವ ಸರ್ಜ ಅದೇ ಕಾರಣಕ್ಕೆ 'ಆ್ಯಕ್ಷನ್ ಪ್ರಿನ್ಸ್' ಎಂಬ ಬಿರುದು ಇಟ್ಟುಕೊಂಡರು. ಇದುವರೆಗೆ ತೆರೆಕಂಡ ಅವರ ಮೂರು ಚಿತ್ರಗಳು ಕೂಡ ಮಹಾನ್ ಚಿತ್ರಗಳೇನೂ ಅಲ್ಲವಾದರೂ, ಮಹಾ ವಿಜಯ ಸಾಧಿಸಿರುವುದನ್ನು ಅಲ್ಲಗಳೆಯಲಾಗದು. ಆದರೆ ನೂರು ‌ಚಿತ್ರಗಳನ್ನು ದಾಟಿದ ಮೇಲೆಯೂ‌ ಮೂರೇ ಮೂರು ಬಿರುದುಗಳಿಗೆ ತೃಪ್ತಿ ಪಟ್ಟುಕೊಂಡ ಶಿವರಾಜ್ ಕುಮಾರ್ ಮುಂದೆ, ಪ್ರತಿ ಚಿತ್ರಕ್ಕೂ ಬಿರುದು ನೀಡುತ್ತಿರುವ ಈಗಿನ ತಾರೆಗಳು ಅಭಿಮಾನ ಅಂಧಾಭಿಮಾನವೆನಿಸುತ್ತಿದೆ. ಖುದ್ದು ಧ್ರುವ ಸರ್ಜ ಕೂಡ ಇನ್ನುಮುಂದೆ ನಾನು ''ಹ್ಯಾಟ್ರಿಕ್ ಸ್ಟಾರ್ ಆ್ಯಕ್ಷನ್ ಪ್ರಿನ್ಸ್ " ಎನ್ನುತ್ತಾರೆ. ಇರಲಿ, ಆದರೆ ಪೊಗರು ಚಿತ್ರದಲ್ಲಷ್ಟೇ ಉಳಿದರೆ ಸರಿ, ನಿಜ‌ ಬದುಕಲ್ಲೂ ತೋರಿಸಿದರೆ ಮುಂದೆ ಕಷ್ಟ ಮರಿ' ಎನ್ನುತ್ತಿದೆ ಗಾಂಧಿನಗರ.

Writer - ಶಶಿಕರ ಪಾತೂರು

contributor

Editor - ಶಶಿಕರ ಪಾತೂರು

contributor

Similar News