×
Ad

ವಾಟ್ಸಾಪ್ ಸಂದೇಶಗಳನ್ನು ಖಚಿತ ಪಡಿಸಿಕೊಳ್ಳದೆ ನಂಬಬೇಡಿ, ಫಾರ್ವರ್ಡ್ ಮಾಡಬೇಡಿ: ರಾಜನಾಥ್ ಸಿಂಗ್

Update: 2017-09-18 22:55 IST

ಹೊಸದಿಲ್ಲಿ,ಸೆ.18: ರಾಷ್ಟ್ರವಿರೋಧಿ ಶಕ್ತಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ದೃಢೀಕೃತ ವಲ್ಲದ ಮಾಹಿತಿಗಳನ್ನು ಪೋಸ್ಟ್ ಮಾಡುವ ಮೂಲಕ ಸಮಾಜದಲ್ಲಿ ಉದ್ವಿಗ್ನತೆಯನ್ನು ಸೃಷ್ಟಿಸಲು ಪ್ರಯತ್ನಿಸುತ್ತಿವೆ ಎಂದು ಸೋಮವಾರ ಇಲ್ಲಿ ಹೇಳಿದ ಗೃಹಸಚಿವ ರಾಜನಾಥ್ ಸಿಂಗ್ ಅವರು, ಇಂತಹ ಸಂದೇಶಗಳನ್ನು ಖಚಿತಪಡಿಸಿಕೊಳ್ಳದೆ ನಂಬದಂತೆ ಮತ್ತು ಫಾರ್ವರ್ಡ್ ಮಾಡದಂತೆ ಜನತೆಯನ್ನು ಕೇಳಿಕೊಂಡರು.

ಇಲ್ಲಿ ಸಶಸ್ತ್ರ ಸೀಮಾ ಬಲ್(ಎಸ್‌ಎಸ್‌ಬಿ)ನ ಗುಪ್ತಚರ ಘಟಕವನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅವರು, ಸಂಪೂರ್ಣ ಸುಳ್ಳು ಮತ್ತು ಆಧಾರವೇ ಇಲ್ಲದಿರುವ ಮಾಹಿತಿ ಮತ್ತು ಸುದ್ದಿಗಳನ್ನು ವಾಟ್ಸಾಪ್‌ನಂತಹ ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಡಲಾಗುತ್ತಿದೆ ಮತ್ತು ಹೆಚ್ಚಿನ ಜನರು ಇವುಗಳನ್ನು ನಿಜವೆಂದು ಭಾವಿಸುತ್ತಾರೆ. ಇಂತಹ ಮಾಹಿತಿಗಳನ್ನು ನಂಬುವ ಮತ್ತು ಫಾರ್ವರ್ಡ್ ಮಾಡುವ ಮುನ್ನ ನಾವೆಲ್ಲ ತುಂಬ ಎಚ್ಚರಿಕೆ ವಹಿಸಬೇಕು ಎಂದರು.

ಭಾರತ-ನೇಪಾಳ ಮತ್ತು ಭಾರತ-ಭೂತಾನ ಗಡಿಗಳ ರಕ್ಷಣೆಯ ಹೊಣೆ ಹೊತ್ತಿರುವ ಎಸ್‌ಎಸ್‌ಬಿಯನ್ನು ಮುಕ್ತಕಂಠದಿಂದ ಪ್ರಶಂಸಿಸಿದ ಸಚಿವರು, ಬೇಲಿಗಳನ್ನ ಹೊಂದಿರುವ ಪಾಕಿಸ್ತಾನ ಮತ್ತು ಬಾಂಗ್ಲದೇಶಗಳೊಂದಿಗಿನ ಗಡಿಗಳಿಗಿಂತ ಜನರ ವೀಸಾಮುಕ್ತ ಚಲನವಲನಕ್ಕೆ ಅವಕಾಶ ಕಲ್ಪಿಸಿರುವ ಇಂತಹ ತೆರೆದ ಗಡಿಗಳನ್ನು ಕಾಯುವುದು ಅತ್ಯಂತ ಕಠಿಣವಾಗಿದೆ. ಇಂತಹ ಗಡಿಗಳಲ್ಲಿ ಯಾರು ರಾಷ್ಟ್ರವಿರೋಧಿಗಳು, ಕ್ರಿಮಿನಲ್‌ಗಳು ಎಲ್ಲಿಂದ ಬರುತ್ತಾರೆ, ಯಾರು ನಕಲಿ ಕರೆನ್ಸಿ ಅಥವಾ ಮಾದಕ ದ್ರವ್ಯಗಳನ್ನು ಸಾಗಿಸುತ್ತಾರೆ ಎನ್ನುವುದು ಭದ್ರತಾ ಸಿಬ್ಬಂದಿಗಳಿಗೆ ಗೊತ್ತಿರುವುದಿಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News