ಸಂಗೀತಮಯವಾದ ಮೂರು ಗಂಟೆ..!

Update: 2017-09-20 04:18 GMT

ಚಿತ್ರದ ಹೆಸರು '3ಘಂಟೆ 30ದಿನ 30 ಸೆಕೆಂಡ್'. ಆದರೆ  ಚಿತ್ರದ ಹಾಡುಗಳ ಬಿಡುಗಡೆಗೆ ತೆಗೆದುಕೊಂಡಿದ್ದು ಮೂರು ಗಂಟೆಯ ಕಾಲಾವಧಿ ಮಾತ್ರ. ಮಲ್ಲೇಶ್ವರದ ಚೌಡಯ್ಯ ಸ್ಮಾರಕ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಚಿತ್ರದ ಹಾಡುಗಳ‌ ಬಿಡುಗಡೆಯನ್ನು ಆಕರ್ಷಕವಾಗಿ ನೆರವೇರಿಸಲಾಯಿತು.

ಚಿತ್ರದ ನಿರ್ದೇಶಕ ಜಿ.ಕೆ ಮಧುಸೂಧನ್ ಮಾತನಾಡಿ ಸಿನಿಮಾ ನಿರ್ದೇಶಕನಾಗಿ ಇದು ನನಗೆ ಪ್ರಥಮ ಅನುಭವ. ಆದರೆ ಬಣ್ಣದ ಲೋಕ ಹೊಸ ಪರಿಚಯವೇನಲ್ಲ ಎಂದರು. ಚಿತ್ರದ ಒಂದು ಹಾಡನ್ನು ಹೊರತುಪಡಿಸಿ ಎಲ್ಲವನ್ನೂ ನಾನೇ ಬರೆದಿದ್ದೇನೆ. ಒಂದು ಹಾಡನ್ನು ಮಾತ್ರ ಜಯಂತ ಕಾಯ್ಕಿಣಿ ಬರೆದಿದ್ದಾರೆ ಎಂದು ಮಧುಸೂಧನ್ ಹೇಳಿದರು.

ಕಾಯ್ಕಿಣಿಯ ರಚನೆಗಳ ಬಗ್ಗೆ ಹೇಳುತ್ತಾ,  ಸಂಗೀತ ನಿರ್ದೇಶಕ ಹಂಸಲೇಖ ಅವರು " ಕನ್ನಡ ಚಿತ್ರರಂಗದಲ್ಲಿ ಹಾಡು ಬರೆಯುವವರಲ್ಲಿ ಎರಡು ಬಣಗಳಿವೆ. ಒಂದು ‌ಕುರಾ ಸೀ ಮತ್ತು ವಿಜಯನಾರಸಿಂಹರ ಗರಡಿ. ಇನ್ನೊಂದು ಹುಣಸೂರು ಕೃಷ್ಣಮೂರ್ತಿಯವರ ಗರಡಿ. ನಾನು ಹುಣಸೂರು ಕೃಷ್ಣಮೂರ್ತಿಯವರ ಗರಡಿಯವನು. ಜಯಂತ ಕಾಯ್ಕಿಣಿಯದು ಕೂಡ ನಮ್ಮದೇ ಗರಡಿ" ಎಂದರು.

ಇದೇ ವೇಳೆ " ಈ ಚಿತ್ರದ ಸಂಗೀತ ನಿರ್ದೇಶಕ ಶ್ರೀಧರ ಸಂಭ್ರಮ್ ನನ್ನ ಶಿಷ್ಯ. ನನ್ನ ಜನಪ್ರಿಯ ಗೀತೆಗಳಲ್ಲೊಂದಾದ "ಕೂರಕ್ ಕುಕ್ರಳ್ಳಿ ಕೆರೆ.." ಹಾಡಿಗೆ ಪ್ರೋಗ್ರಾಮಿಂಗ್ ಮಾಡಿದವನು ಈತನೇ. ಅದರ ಖ್ಯಾತಿಯಲ್ಲಿ ಈತನಿಗೂ ಪಾಲಿದೆ" ಎಂಬ ಮೆಚ್ಚುಗೆಯ ಮಾತುಗಳನ್ನು ಅವರು ನುಡಿದರು. ಉಳಿದ ಹಾಡುಗಳನ್ನು ಖ್ಯಾತ ನಿರ್ದೇಶಕರಾದ ಭಗವಾನ್, ಜೋ ಸೈಮನ್, ಭಾರ್ಗವ, ಸುನೀಲ್ ಕುಮಾರ್ ದೇಸಾಯಿ ಮೊದಲಾದವರು ಬಿಡುಗಡೆಗೊಳಿಸಿದರು.

ಸಂಗೀತ ನಿರ್ದೇಶಕ ಶ್ರೀಧರ್ ಸಂಭ್ರಮ್ ಹಾಡುಗಳು‌ ಎಲ್ಲರ ಮೆಚ್ಚುಗೆ ಪಡೆದಿರುವುದಕ್ಕೆ ಖುಷಿ ವ್ಯಕ್ತಪಡಿಸುತ್ತಾ ತಾವೇ ಹಾಡಿದ ಗೀತೆಯೊಂದನ್ನು ವೇದಿಕೆಯ ಮೇಲೆ ಪ್ರಸ್ತುತ ಪಡಿಸಿದರು.

ಮಹರ್ಷಿ ಡಾ.‌ಆನಂದ ಗುರೂಜಿ ದೀಪ ಬೆಳಗಿ ಕಾರ್ಯಕ್ರಮ ಉದ್ಘಾಟಿಸಿದರು. ವಿವಿಧ ರೀತಿಯ ನೃತ್ಯ ಪ್ರದರ್ಶನ ಸಮಾರಂಭದ ಆಕರ್ಷಣೆಯಾಗಿತ್ತು. ಚಿತ್ರದ ನಾಯಕ ಅರುಣ್ ಗೌಡ, ನಾಯಕಿ ಕಾವ್ಯಾ ಶೆಟ್ಟಿ, ನಿರ್ಮಾಪಕ ಚಂದ್ರಶೇಖರ್ ಆರ್ ಪದ್ಮಶಾಲಿ ಮತ್ತು ಸಹ ನಿರ್ಮಾಪಕರು ಸೇರಿದಂತೆ  ಬಿ ಟಿವಿ ವಾಹಿನಿಯ ಮುಖ್ಯಸ್ಥ ಕುಮಾರ್, ಸಾಹಿತಿ ವಿ ನಾಗೇಂದ್ರ ಪ್ರಸಾದ್ ಹಾಗೂ ಚಿತ್ರೋದ್ಯಮದ ಗಣ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News