ತನ್ನ ಕೃತಿಗೆ ನಿಷೇಧವನ್ನು ಪ್ರಶ್ನಿಸಿದ್ದ ಮಾತೆ ಮಹಾದೇವಿ ಅರ್ಜಿಯನ್ನು ಕಾರಣ ನೀಡದೆ ವಜಾ ಮಾಡಿದ ಸುಪ್ರೀಂ
ಹೊಸದಿಲ್ಲಿ,ಸೆ.20: ಅಚ್ಚರಿಯ ನಡೆಯೊಂದರಲ್ಲಿ ನ್ಯಾಯಮೂರ್ತಿಗಳಾದ ಎಸ್.ಎ. ಬೊಬ್ಡೆ ಮತ್ತು ಎಲ್.ನಾಗೇಶ್ವರರಾವ್ ಅವರನ್ನೊಳಗೊಂಡ ಸರ್ವೋಚ್ಚ ನ್ಯಾಯಾಲಯದ ಪೀಠವು ತನ್ನ ಕೃತಿ ‘ಬಸವ ವಚನ ದೀಪ್ತಿ’ಯ ಮಾರಾಟ ಮತ್ತು ಪ್ರಸಾರದ ನಿಷೇಧವನ್ನು ಪ್ರಶ್ನಿಸಿ ಮಾತೆ ಮಹಾದೇವಿ ಅವರು ಸಲ್ಲಿಸಿದ್ದ ಅರ್ಜಿಯನ್ನು ಬುಧವಾರ ವಜಾಗೊಳಿಸಿತು. ಅದು ತನ್ನ ಆದೇಶದಲ್ಲಿ ಯಾವುದೇ ಕಾರಣವನ್ನು ತಿಳಿಸಿಲ್ಲ.
ಪ್ರತಿವಾದಿ ಕರ್ನಾಟಕ ಸರಕಾರದ ಪರ ಹಿರಿಯ ವಕೀಲ ಬಸವಪ್ರಭು ಎಸ್. ಪಾಟೀಲ್ ಮತ್ತು ಮಾತೆ ಮಹಾದೇವಿ ಪರ ವಕೀಲ ನವೀನ್ ಆರ್.ನಾಥ್ ಅವರ ವಾದಗಳನ್ನು ಆಲಿಸಿದ ಬಳಿಕ ಮಧ್ಯಾಹ್ನ ಪ್ರಕರಣದ ವಿಚಾರಣೆಯನ್ನು ಅವಸರವಸರವಾಗಿ ಪೂರ್ಣಗೊಳಿಸಿದ ಪೀಠವು ಅರ್ಜಿಯನ್ನು ವಜಾಗೊಳಿಸಿ ‘ನಾವು ಉದ್ದೇಶಪೂರ್ವಕವಾಗಿ ಕಾರಣಸಹಿತ ಆದೇಶವನ್ನು ನೀಡುತ್ತಿಲ್ಲ’ ಎಂದು ತಿಳಿಸಿತು.
ಮಾತೆ ಮಹಾದೇವಿಯವರ ಕೃತಿಯನ್ನು ನಿಷೇಧಿಸಿ ಸರಕಾರವು ಹೊರಡಿಸಿರುವ ಅಧಿಸೂಚನೆಯು ಸತ್ಯಾಂಶಗಳ ಬದಲು ಆತಂಕಗಳನ್ನು ಆಧರಿಸಿದೆ. ಪುಸ್ತಕವೊಂದು ಪ್ರಕಟಗೊಂಡಾಗ ಭಿನ್ನಾಭಿಪ್ರಾಯಗಳು ಹುಟ್ಟುವುದು ಸಹಜ. ಭಾವನೆಗಳನ್ನು ಕೆರಳಿಸುವ ಯಾವುದೇ ದುರುದ್ದೇಶಗಳಿಲ್ಲದಿದ್ದಾಗ ಕಠಿಣ ಕ್ರಮಗಳನ್ನು ಕೈಗೊಳ್ಳುವಂತಿಲ್ಲ. ಪ್ರಕರಣದಲ್ಲಿ ಯಾವುದೇ ಎಫ್‌ಐಆರ್ ದಾಖಲಾಗಿಲ್ಲ. ಕೃತಿಯಲ್ಲಿಯ ವಚನಗಳು 800ವರ್ಷಗಳಷ್ಟು ಹಳೆಯದಾಗಿದ್ದು, ಜನರು ಉದಾರವಾಗಿ ಅವುಗಳನ್ನು ಸ್ವೀಕರಿಸಿದ್ದಾರೆ. ಕೃತಿಯು ಎರಡು ವರ್ಷಗಳಿಂದಲೂ ಮಾರಾಟವಾಗುತ್ತಿದೆ ಮತ್ತು ಒಂದೇ ಒಂದು ಅಹಿತಕರ ಘಟನೆ ನಡೆದಿಲ್ಲ ಎಂದು ನಾಥ್ ವಾದಿಸಿದರು.
ಹರ್ಯಾಣದಲ್ಲಿ ಇತ್ತೀಚಿಗೆ ರಾಮ ರಹೀಮ ಪ್ರಕರಣದಲ್ಲಿ ತೀರ್ಪ ಪ್ರಕಟಗೊಂಡ ಬಳಿಕ ನಡೆದ ಘಟನೆಗಳನ್ನು ಪ್ರಸ್ತಾಪಿಸಿದ ನ್ಯಾ.ಬೊಬ್ಡೆ ಅವರು, ಇವೆಲ್ಲ ಆಡಳಿತಾತ್ಮಕ ವಿಷಯಗಳಾಗಿವೆ ಮತ್ತು ನ್ಯಾಯಾಲಯವು ಇದರಲ್ಲಿ ಹಸ್ತಕ್ಷೇಪ ಮಾಡುವಂತಿಲ್ಲ ಎಂದರು.
ಬಳಿಕ ಮಾತೆ ಮಹಾದೇವಿಯವರನ್ನುದ್ದೇಶಿಸಿ, ನಿಮ್ಮದು ದುರುದ್ದೇಶವಲ್ಲ. ಆದರೆ ನಿಮಗೆ ನೋವಾಗಿದೆ. ನಾವು ಹಸ್ತಕ್ಷೇಪ ಮಾಡುವುದಿಲ್ಲ. ಸರಕಾರದ ಅಭಿಪ್ರಾಯವು ತಪ್ಪು ಎಂದು ನಾವು ಹೇಳುವಂತಿಲ್ಲ. ಉಚ್ಚ ನ್ಯಾಯಾಲಯವು ಈಗಾಗಲೇ ಈ ಬಗ್ಗೆ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ. ನಾವೇಕೆ ಹಸ್ತಕ್ಷೇಪ ಮಾಡಬೇಕು ಎಂದು ಪೀಠವು ಪ್ರಶ್ನಿಸಿತು.