ಮೆಕ್ಸಿಕೊ ಭೂಕಂಪ: ಶಾಲೆ ಕುಸಿದು 21 ಮಕ್ಕಳು ಮೃತ್ಯು

Update: 2017-09-20 17:34 GMT

ಮೆಕ್ಸಿಕೊ ಸಿಟಿ, ಸೆ. 20: ಮೆಕ್ಸಿಕೊದಲ್ಲಿ ಮಂಗಳವಾರ ಸಂಭವಿಸಿದ ಭೀಕರ ಭೂಕಂಪದಲ್ಲಿ ಕನಿಷ್ಠ 248 ಮಂದಿ ಮೃತಪಟ್ಟಿದ್ದಾರೆ. ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 7.1ರಷ್ಟಿತ್ತು.

ಭೂಕಂಪದಿಂದಾಗಿ ಪ್ರಾಥಮಿಕ ಶಾಲೆಯೊಂದು ಕುಸಿದು 21 ಮಕ್ಕಳು ಪ್ರಾಣ ಕಳೆದುಕೊಂಡಿದ್ದಾರೆ.

1985ರಲ್ಲಿ ನಡೆದ ಭೀಕರ ಭೂಕಂಪದ ವಾರ್ಷಿಕ ದಿನದ ಸಂದರ್ಭದಲ್ಲಿ 32 ವರ್ಷಗಳ ಹಿಂದಿನ ಭೀಕರ ಅನುಭವಗಳನ್ನು ಜನರು ಮೆಲುಕು ಹಾಕುತ್ತಿರುವಾಗಲೇ ಇನ್ನೊಂದು ಭೂಕಂಪ ಸಂಭವಿಸಿದೆ.

32 ವರ್ಷಗಳ ಹಿಂದಿನ ಭೂಕಂಪ ಮೆಕ್ಸಿಕೊ ಇತಿಹಾಸದ ಅತ್ಯಂತ ಭೀಕರ ಭೂಕಂಪವೆಂದು ಹೇಳಲಾಗಿದೆ. ಅದರಲ್ಲಿ ಕನಿಷ್ಠ 10,000 ಮಂದಿ ಮೃತಪಟ್ಟಿದ್ದರು.

ಭೂಕಂಪದ ಅತ್ಯಂತ ಹೃದಯವಿದ್ರಾವಕ ದೃಶ್ಯ ಮೆಕ್ಸಿಕೊ ನಗರದ ದಕ್ಷಿಣ ಭಾಗದ ಎನ್ರಿಕ್ ರೆಬ್‌ಸಮೆನ್ ಪ್ರಾಥಮಿಕ ಶಾಲೆಯಲ್ಲಿ ಸಂಭವಿಸಿದೆ. ಶಾಲೆಯ ಮೂರು ಮಹಡಿಗಳು ಕುಸಿದು ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಒಳಗೆ ಸಿಕ್ಕಿಹಾಕಿಕೊಂಡರು.

ಈ ದುರಂತದಲ್ಲಿ 21 ಮಕ್ಕಳು ಮತ್ತು ಐವರು ವಯಸ್ಕರು ಮೃತಪಟ್ಟಿದ್ದಾರೆ ಎಂದು ಮೆಕ್ಸಿಕೊ ನೌಕಾಪಡೆಯ ಮೇಜರ್ ಜೋಸ್ ಲೂಯಿಸ್ ವರ್ಗರ ಹೇಳಿದ್ದಾರೆ. ಅವರು ಇಲ್ಲಿನ ರಕ್ಷಣಾ ಕಾರ್ಯಾಚರಣೆಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ನೂರಾರು ಸೈನಿಕರು, ಪೊಲೀಸರು, ನಾಗರಿಕ ಸ್ವಯಂಸೇವಕರು ಮತ್ತು ಶ್ವಾನಗಳು ಶೋಧ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ.

11 ಮಕ್ಕಳನ್ನು ಈವರೆಗೆ ರಕ್ಷಿಸಲಾಗಿದೆ ಹಾಗೂ ಇನ್ನು 30-40 ಮಂದಿ ಒಳಗೆ ಸಿಕ್ಕಿಹಾಕಿಕೊಂಡಿದ್ದಾರೆ ಎಂದು ಅವರು ತಿಳಿಸಿದರು.

‘‘ಶಾಲೆಗಳು, ಕಟ್ಟಡಗಳು ಮತ್ತು ಮನೆಗಳಲ್ಲಿ ಮಕ್ಕಳು ಸೇರಿದಂತೆ ದುರದೃಷ್ಟವಶಾತ್ ಹಲವಾರು ಜನರು ತಮ್ಮ ಪ್ರಾಣಗಳನ್ನು ಕಳೆದುಕೊಂಡಿದ್ದಾರೆ’’ ಎಂದು ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಮೆಕ್ಸಿಕೊ ಅಧ್ಯಕ್ಷ ಎನ್ರಿಕ್ ಪೆನ ನೀಟೊ ಹೇಳಿದ್ದಾರೆ.

ದೇಶದ ಮಧ್ಯ ಭಾಗದ ರಾಜ್ಯಗಳಲ್ಲಿ ಭೂಕಂಪವು ವಿನಾಶವನ್ನು ಸೃಷ್ಟಿಸಿದೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣೆ ಸಂಸ್ಥೆಯ ಮುಖ್ಯಸ್ಥ ಲೂಯಿಸ್ ಫಿಲಿಪ್ ಪುಯೆಂಟ್ ತಿಳಿಸಿದರು.

ಮೆಕ್ಸಿಕೊ ಸಿಟಿಯಲ್ಲದೆ, ಪುಯೆಬ್ಲ, ಮೊರೆಲೊಸ್, ಮೆಕ್ಸಿಕೊ ರಾಜ್ಯ ಮತ್ತು ಗ್ವೆರೊರೊಗಳಲ್ಲೂ ಜನರು ಮೃತಪಟ್ಟಿದ್ದಾರೆ ಎಂದು ಆಂತರಿಕ ಸಚಿವ ಮಿಗುಯಲ್ ಒಸೋರಿಯೊ ಚೊಂಗ್ ಹೇಳಿದರು.

ಅವಶೇಷಗಳಡಿ ಸಿಕ್ಕಿಕೊಂಡಿರುವ ಜನರಿಂದ ನೆರವು ಕೋರಿ ಸಂಬಂಧಿಗಳಿಗೆ ಸಂದೇಶ

ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿರುವ ಜನರು ಸಹಾಯವನ್ನು ಯಾಚಿಸಿ ತಮ್ಮ ಸಂಬಂಧಿಗಳಿಗೆ ವಾಟ್ಸ್‌ಆ್ಯಪ್ ಮೂಲಕ ಸಂದೇಶಗಳನ್ನು ಕಳುಹಿಸುತ್ತಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ದಕ್ಷಿಣದ ರಾಜ್ಯಗಳಾದ ಓಕ್ಸಕ ಮತ್ತು ಚಿಯಾಪಸ್‌ಗಳಲ್ಲಿ ಭೂಕಂಪ ಸಂಭವಿಸಿದ ಕೇವಲ 12 ದಿನಗಳಲ್ಲಿ ಇನ್ನೊಂದು ಭೂಕಂಪ ಸಂಭವಿಸಿರುವುದು ರಕ್ಷಣಾ ಕಾರ್ಯಕರ್ತರಿಗೆ ತಲೆನೋವಾಗಿ ಪರಿಣಮಿಸಿದೆ. ಆ ಭೂಕಂಪದಲ್ಲಿ ಸುಮಾರು 100 ಮಂದಿ ಮೃತಪಟ್ಟಿದ್ದಾರೆ ಹಾಗೂ 200ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.

 ನಗರದ ಅಧಿಕಾರಿಗಳು ಭೂಕಂಪ ಅಣಕು ಕಾರ್ಯಾಚರಣೆ ನಡೆಸಿದ ಗಂಟೆಗಳ ಬಳಿಕ ಮಧ್ಯಾಹ್ನದ ಹೊತ್ತಿಗೆ ಭೂಮಿ ಭೀಕರವಾಗಿ ಕಂಪಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News