ಕಾಶ್ಮೀರ ಕುರಿತ ಭದ್ರತಾ ಮಂಡಳಿಯ ನಿರ್ಣಯ ಜಾರಿಗೊಳಿಸಿ: ಪಾಕ್ ಪ್ರಧಾನಿ ಅಬ್ಬಾಸಿ ಒತ್ತಾಯ

Update: 2017-09-21 17:21 GMT

ನ್ಯೂಯಾರ್ಕ್, ಸೆ. 21: ಕಾಶ್ಮೀರ ಕುರಿತ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯವನ್ನು ಜಾರಿಗೊಳಿಸಬೇಕು ಎಂದು ಪಾಕಿಸ್ತಾನದ ಪ್ರಧಾನಿ ಶಾಹಿದ್ ಖಾಕನ್ ಅಬ್ಬಾಸಿ ಗುರುವಾರ ಒತ್ತಾಯಿಸಿದ್ದಾರೆ. ಕಾಶ್ಮೀರಿ ಜನತೆಯ ಸ್ವನಿರ್ಣಯದ ಹಕ್ಕಿಗೆ ಬೆಂಬಲ ನೀಡುವುದನ್ನು ತನ್ನ ದೇಶ ಮುಂದುವರಿಸುವುದು ಎಂದು ಅವರು ಹೇಳಿದ್ದಾರೆ.

‘‘ಪ್ರಮುಖ ವಿಷಯ ಕಾಶ್ಮೀರ ಎಂದು ನನಗನಿಸುತ್ತದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ತೀರ್ಮಾನವನ್ನು ಅನುಷ್ಠಾನಗೊಳಿಸುವುದು ವಿವಾದ ಪರಿಹಾರಕ್ಕೆ ದೊಡ್ಡ ಮಟ್ಟದಲ್ಲಿ ಚಾಲನೆ ನೀಡಿದಂತೆ. ಪರಸ್ಪರರ ಆತಂಕಗಳನ್ನು ಅರ್ಥಮಾಡಿಕೊಳ್ಳಲು ಅದು ನೆರವಾಗುತ್ತದೆ. ಭಾರತ ಮತ್ತು ಪಾಕಿಸ್ತಾನಗಳ ನಡುವೆ ಶಾಂತಿ ನೆಲೆಸುವಂತೆಯೂ ಅದು ಮಾಡುತ್ತದೆ’’ ಎಂದು ನ್ಯೂಯಾರ್ಕ್‌ನಲ್ಲಿ ಕೌನ್ಸಿಲ್ ಆನ್ ಫಾರೀನ್ ರಿಲೇಶನ್ಸ್ ಏರ್ಪಡಿಸಿದ ಕಾರ್ಯಕ್ರಮವೊಂದರಲ್ಲಿ ಅವರು ಹೇಳಿದರು.

ಭಾರತಕ್ಕೆ ಅಫ್ಘಾನ್‌ನಲ್ಲಿ ಶೂನ್ಯ ಪಾತ್ರ

ಅದೇ ವೇಳೆ, ಅಫ್ಘಾನಿಸ್ತಾನದಲ್ಲಿ ಪಾಕಿಸ್ತಾನಕ್ಕೆ ‘ಶೂನ್ಯ’ ರಾಜಕೀಯ ಅಥವಾ ಸೇನಾ ಪಾತ್ರವಿರಬೇಕು ಎಂದು ಅವರು ಹೇಳಿದ್ದಾರೆ.

ಸಂಘರ್ಷಪೀಡಿತ ಅಫ್ಘಾನಿಸ್ತಾನದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ತರುವುದಕ್ಕಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದಿಂದ ಹೆಚ್ಚಿನ ನೆರವನ್ನು ಕೋರಿದ ವಾರಗಳ ಬಳಿಕ ಪಾಕಿಸ್ತಾನದಿಂದ ಈ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಪಾಕ್‌ನಲ್ಲಿ ಉಗ್ರ ಆಶ್ರಯ ತಾಣಗಳಿಲ್ಲ

ತನ್ನ ನೆಲದಿಂದ ಕಾರ್ಯಾಚರಿಸುತ್ತಿರುವ ಭಯೋತ್ಪಾದಕ ಗುಂಪುಗಳನ್ನು ನಿಗ್ರಹಿಸುವಲ್ಲಿ ಪಾಕಿಸ್ತಾನ ವಿಫಲವಾಗಿದೆ ಎಂಬ ಆರೋಪಗಳನ್ನು ಪಾಕ್ ಪ್ರಧಾನಿ ಶಾಹಿದ್ ಖಾಕನ್ ಅಬ್ಬಾಸಿ ನಿರಾಕರಿಸಿದ್ದಾರೆ.

‘‘ಪಾಕಿಸ್ತಾನದಲ್ಲಿ ಉಗ್ರ ಆಶ್ರಯ ತಾಣಗಳಿವೆ ಎಂಬ ಭಾವನೆ ಸರಿಯಲ್ಲ’’ ಎಂದರು.

2008ರ ಮುಂಬೈ ದಾಳಿಯ ಸೂತ್ರಧಾರಿ ಹಾಗೂ ಲಷ್ಕರ್ ಎ ತೊಯ್ಬಾ ಭಯೋತ್ಪಾದಕ ಗುಂಪಿನ ಸಹ ಸ್ಥಾಪಕ ಹಫೀಝ್ ಸಯೀದ್ ವಿರುದ್ಧ ‘ಅಗತ್ಯ ಬಿದ್ದಾಗ’ ಪಾಕಿಸ್ತಾನ ಕ್ರಮ ತೆಗೆದುಕೊಳ್ಳುವುದು ಎಂದೂ ಅವರು ಈ ಸಂದರ್ಭದಲ್ಲಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News