ಮತಾಂತರಕ್ಕೆ ಯಾರೂ ಬಲವಂತಪಡಿಸಿಲ್ಲ, ಆದರೆ ಹಿಂದೂ ಧರ್ಮಕ್ಕೆ ಮರಳುತ್ತೇನೆ: ಆದಿರಾ

Update: 2017-09-22 07:12 GMT

ಕೊಚ್ಚಿ, ಸೆ. 22: ಮತಾಂತರಗೊಳ್ಳುವಂತೆ ತನ್ನನ್ನು ಯಾರೂ ಬಲವಂತಪಡಿಸಿಲ್ಲ. ಯಾರದೇ ಒತ್ತಡಕ್ಕೆ ತಲೆಬಾಗಿ ತಾನು ಇಸ್ಲಾಂ ಧರ್ಮ ಸ್ವೀಕರಿಸಿದ್ದಲ್ಲ ಎಂದು ಕಾಸರಗೋಡು ಉದುಮ ನಿವಾಸಿ ಆದಿರಾ ತಿಳಿಸಿದ್ದಾಳೆ. ಆದರೆ, ಹಿಂದೂ ಧರ್ಮಕ್ಕೆ ಮರಳಲು ಬಯಸುತ್ತಿದ್ದೇನೆ ಎಂದು ಆದಿರಾ ಪತ್ರಿಕಾಗೋಷ್ಠಿಯಲ್ಲಿ  ತನ್ನ ನಿಲುವನ್ನು ವಿವರಿಸಿದ್ದಾಳೆ.

 ಮತಾಂತರಗೊಳ್ಳಲು ಮತ್ತು ಮುಸ್ಲಿಮನನ್ನು ಮದುವೆಯಾಗಲು ಯಾರೂ  ಒತ್ತಾಯಿಸಿಲ್ಲ. ಭಯೋತ್ಪಾದಕಸಂಘಟನೆಯ ಸದಸ್ಯೆಯಾಗಲು ಮತ್ತು ಯಾವುದಾದರೂ ಬೇರೆ ಸ್ಥಳಕ್ಕೆ ಹೋಗಲು ಯಾರೂ ಹೇಳಿಲ್ಲ. ಮತಾಂತರಗೊಂಡ ಬಳಿಕ ಪಾಪ್ಯುಲರ್ ಫ್ರಂಟ್ ಸಹಿತ ಹಲವರು ತನಗೆ ಸಹಾಯ  ಮಾಡಿದ್ದಾರೆ.

ಡಿಗ್ರಿ ಕಲಿಯುವಾಗ ಹಲವಾರು ಮುಸ್ಲಿಂ ಗೆಳತಿಯರಿದ್ದರು. ಅವರ ಆಚಾರ, ಅನುಷ್ಠಾನಗಳನ್ನು ಕಂಡು ಇಸ್ಲಾಮಿನತ್ತ ಆಕರ್ಷಿತಗೊಂಡಿದ್ದೆ. ಪವಿತ್ರ ಕುರ್‍ಆನ್ ಓದಿದಾಗ ಇಸ್ಲಾಮ್ ಸರಿಯಾದ ಧರ್ಮವೆಂದು ಮನವರಿಕೆಯಾಯಿತು. ಆದ್ದರಿಂದ  ತಾನು ಮತಾಂತರಗೊಳ್ಳಲು ತೀರ್ಮಾನಿಸಿದೆ. ಆದರೆ,  ತಂದೆತಾಯಿಯರೊಂದಿಗೆ ಮನೆಗೆ ಬಂದ ಬಳಿಕ ಹಿಂದೂ ಹೆಲ್ಫ್‍ಲೈನ್ ಕಾರ್ಯಕರ್ತರ ಸಹಾಯದಲ್ಲಿ ಸನಾತನ ಧರ್ಮದ ಕುರಿತು ವಿವರವಾಗಿ ಅಧ್ಯಯನ ಮಾಡಿದ್ದರಿಂದ ಹಿಂದೂ ಧರ್ಮಕ್ಕೆ ಮರಳಲು ತೀರ್ಮಾನಿಸಿದ್ದೇನೆ ಎಂದು ಆದಿರಾ ಹೇಳಿದಳು.

ಇಸ್ಲಾಮ್‍ಗೆ ಸೇರ್ಪಡೆಯಾಗಲು ಹೋಗುತ್ತಿದ್ದೇನೆ ಎಂದು ತಂದೆ ತಾಯಿಯರಿಗೆ ಪತ್ರ ಬರೆದು ಜುಲೈ ಹತ್ತರಂದು  ಆದಿರಾ  ಉದುಮದ ತನ್ನ  ಮನೆ ಮನೆಯಿಂದ ಹೊರಟು ಹೋಗಿದ್ದಳು. ಎರಡು ವಾರದ ಬಳಿಕ ಕಣ್ಣೂರಿನಲ್ಲಿ ಅವಳು ಪತ್ತೆಯಾದಾಗ ಮತಾಂತರಗೊಂಡು  ಆಯಿಶಾ ಎನ್ನುವ ಹೆಸರನ್ನು ಇರಿಸಿಕೊಂಡಿದ್ದಳು. ಮನೆಯವರು ಸಲ್ಲಿಸಿದ ಹೇಬಿಯಸ್ ಕಾರ್ಪಸ್ ಅರ್ಜಿಯಲ್ಲಿ ಹೈಕೋರ್ಟು ಆದಿರಾಳನ್ನು ತಂದೆತಾಯಿಯರ ಜೊತೆಗೆ ಕಳುಹಿಸಿಕೊಡಲು  ಆದೇಶಿಸಿತ್ತು. ಪತ್ರಿಕಾಗೋಷ್ಠಿಯಲ್ಲಿ  ಆದಿರಾಳ ತಂದೆ, ತಾಯಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News