ಎಐಎಡಿಎಂಕೆಯ ಉಭಯ ಬಣಗಳ ವಿಲೀನ,ಶಶಿಕಲಾ ಉಚ್ಚಾಟನೆ ಕುರಿತು ಚು.ಆಯೋಗಕ್ಕೆ ಮಾಹಿತಿ ಸಲ್ಲಿಕೆ

Update: 2017-09-22 12:47 GMT

ಹೊಸದಿಲ್ಲಿ,ಸೆ.22: ಎಐಎಡಿಎಂಕೆಯ ಉಭಯ ಬಣಗಳ ವಿಲೀನ ಮತ್ತು ಮಧ್ಯಂತರ ಪ್ರಧಾನ ಕಾರ್ಯದರ್ಶಿ ವಿ.ಕೆ.ಶಶಿಕಲಾ ಉಚ್ಚಾಟನೆ ಸೇರಿದಂತೆ ಸರ್ವಸದಸ್ಯರ ಸಭೆಯಲ್ಲಿ ಕೈಗೊಂಡ ನಿರ್ಣಯಗಳ ಕುರಿತು ಚುನಾವಣಾ ಆಯೋಗಕ್ಕೆ ಮಾಹಿತಿಗಳನ್ನು ಸಲ್ಲಿಸಲಾ ಗಿದೆ ಎಂದು ಪಕ್ಷದ ಹಿರಿಯ ನಾಯಕ ಕೆ.ಪಿ.ಮುನುಸ್ವಾಮಿ ಅವರು ಶುಕ್ರವಾರ ಇಲ್ಲಿ ತಿಳಿಸಿದರು.

ಎಐಎಡಿಎಂಕೆ ನಿಯೋಗವೊಂದು ಇಂದು ಚುನಾವಣಾ ಆಯೋಗವನ್ನು ಭೇಟಿ ಮಾಡಿ, ನಿರ್ಣಯಗಳು ಅಸಿಂಧು ಎಂಬ ಶಶಿಕಲಾ ಮತ್ತು ಅವರ ಸಂಬಂಧಿ ಟಿಟಿವಿ ದಿನಕರನ್ ನೇತೃತ್ವದ ಎದುರಾಳಿ ಬಣದ ಪ್ರತಿಪಾದನೆಯ ವಿರುದ್ಧ ವಾದಗಳನ್ನು ಮಂಡಿಸಿದೆ ಎಂದು ಭೇಟಿಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುನುಸ್ವಾಮಿ ಹೇಳಿದರು.

 ಅಮ್ಮಾ ಪರಂಪರೆಯನ್ನು ರಕ್ಷಿಸಲು, ಪಕ್ಷದ ಕಾರ್ಯಕರ್ತರ ಭಾವನೆಗಳನ್ನು ರಕ್ಷಿಸಲು ಮತ್ತು ಉತ್ತಮ ಆಡಳಿತಕ್ಕಾಗಿ ಒ.ಪನ್ನೀರಸೆಲ್ವಂ ಮತ್ತು ಎ.ಪಳನಿಸ್ವಾಮಿ ನೇತೃತ್ವದ ಬಣಗಳು ವಿಲೀನಗೊಂಡಿವೆ ಎನ್ನುವುದನ್ನು ಮತ್ತು ಸೆ.12ರಂದು ನಡೆದ ಸರ್ವಸದಸ್ಯರ ಸಭೆಯಲ್ಲಿ ಶಶಿಕಲಾರನ್ನು ವಜಾಗೊಳಿಸುವ ಮತ್ತು ಅವರು ಮಾಡಿದ್ದ ಎಲ್ಲ ನೇಮಕಗಳನ್ನು ಅಸಿಂಧುಗೊಳಿಸಲು ಕೈಗೊಂಡ ನಿರ್ಣಯಗಳನ್ನು ಚುನಾವಣಾ ಆಯೋಗಕ್ಕೆ ತಿಳಿಸಲಾಗಿದೆ ಎಂದರು.

ದಿನಕರನ್ ಅವರ ಪ್ರತಿನಿಧಿಗಳು ಸೆ.14ರಂದು ಚುನಾವಣಾ ಆಯೋಗವನ್ನು ಭೇಟಿಯಾಗಿ ಸರ್ವಸದಸ್ಯರ ಸಭೆಯನ್ನು ಅಸಿಂಧು ಎಂದು ಘೋಷಿಸುವಂತೆ ಆಗ್ರಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News