ಗೋರಕ್ಷಣೆ ಹೆಸರಿನ ಹಿಂಸಾಚಾರ ತಡೆಗೆ ಪ್ರತಿ ಜಿಲ್ಲೆಯಲ್ಲಿ ಪೊಲೀಸ್ ಅಧಿಕಾರಿಗಳನ್ನು ನೇಮಿಸಿ

Update: 2017-09-22 14:31 GMT

ಸಂತ್ರಸ್ತರಿಗೆ ಪರಿಹಾರ ವಿತರಿಸಲು ಆದೇಶ

ಹೊಸದಿಲ್ಲಿ, ಸೆ.22: ಗೋರಕ್ಷಣೆ ಹೆಸರಿನಲ್ಲಿ ನಡೆಯುವ ಹಿಂಸಾಚಾರಗಳನ್ನು ತಡೆಯಲು ರಾಜ್ಯ ಸರಕಾರಗಳು ಪ್ರತಿ ಜಿಲ್ಲೆಗೆ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರನ್ನು ನೇಮಿಸಬೇಕು ಎಂದು ಸುಪ್ರೀಂ ಕೋರ್ಟ್ ಆದೇಶ ನೀಡಿದೆ.

ಸಂತ್ರಸ್ತರಿಗೆ ಪರಿಹಾರ ನೀಡಬೇಕು. ಪ್ರಕರಣದ ಸಂತ್ರಸ್ತರಿಗೆ ಪರಿಹಾರ ನೀಡುವ ಬಾಧ್ಯತೆಯನ್ನು ರಾಜ್ಯ ಸರಕಾರಗಳು ಹೊಂದಿವೆ ಎಂದು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಪೀಠ ಹೇಳಿದೆ.

ಸಂತ್ರಸ್ತರಿಗೆ ಪರಿಹಾರ ನೀಡಲು ಯೋಜನೆ ಹೊಂದುವುದು ರಾಜ್ಯ ಸರಕಾರದ ಬಾಧ್ಯತೆ ಹಾಗೂ ಅಂತಹ ಯೋಜನೆ ಹೊಂದದಿದ್ದರೆ, ರಾಜ್ಯ ಸರಕಾರಗಳು ಅದನ್ನು ರೂಪಿಸಬೇಕು ಎಂದು ಅದು ಹೇಳಿದೆ.

ಗೋರಕ್ಷಣೆ ನೆಪದ ಹಿಂಸಾಚಾರದ ವಿರುದ್ಧ ತೆಗೆದುಕೊಂಡ ಕ್ರಮಗಳ ವಿವರ ನೀಡುವ ಅನುಸರಣಾ ವರದಿಯನ್ನು ಗುಜರಾತ್, ರಾಜಸ್ತಾನ, ಜಾರ್ಖಂಡ್, ಕರ್ನಾಟಕ ಹಾಗೂ ಉತ್ತರಪ್ರದೇಶ ರಾಜ್ಯಗಳು ಶುಕ್ರವಾರ ನ್ಯಾಯಾಲಯಕ್ಕೆ ಸಲ್ಲಿಸಿವೆ. ಇತರ ರಾಜ್ಯಗಳು ಈ ಅನುಸರಣಾ ವರದಿ ಸಲ್ಲಿಸುವಂತೆ ನಿರ್ದೇಶಿಸಿರುವ ಸುಪ್ರೀಂ ಕೋರ್ಟ್, ವಿಚಾರಣೆಯನ್ನು ಅಕ್ಟೋಬರ್ 31ಕ್ಕೆ ನಿಗದಿಪಡಿಸಿದೆ.

ದೂರುದಾರರಲ್ಲಿ ಓರ್ವರ ಪರವಾಗಿ ನ್ಯಾಯಾಲಯಕ್ಕೆ ಹಾಜರಾದ ಹಿರಿಯ ವಕೀಲ ಇಂದಿರಾ ಜೈಸಿಂಗ್, ಗೋರಕ್ಷಕ ಗುಂಪಿನ ಹಿಂಸಾಚಾರದ ಸಂತ್ರಸ್ತರಿಗೆ ಪರಿಹಾರ ನೀಡಲು ಆದೇಶಿಸುವಂತೆ ಸುಪ್ರೀಂ ಕೋರ್ಟ್‌ನಲ್ಲಿ ಮನವಿ ಮಾಡಿದರು. ಅಪರಾಧ ತಡೆಯಲು ರಾಷ್ಟ್ರೀಯ ನೀತಿ ಇರಬೇಕು ಎಂದು ಅವರು ತಿಳಿಸಿದರು.

ಇನ್ನೋರ್ವ ದೂರುದಾರರ ಪರವಾಗಿ ನ್ಯಾಯಾಲಯಕ್ಕೆ ಹಾಜರಾದ ಹಿರಿಯ ವಕೀಲ ಕಪಿಲ್ ಸಿಬಲ್, ಗೋರಕ್ಷಣೆಯ ನೆಪದಲ್ಲಿ ಹಿಂಸಾಚಾರಕ್ಕೆ ಸಂಚು ಹೂಡಿದವರು ಜಾಮೀನು ಪಡೆದಿದ್ದಾರೆ. ಆದರೆ, ಸಂತ್ರಸ್ತರು ಎಫ್‌ಐಆರ್ ಹಾಗೂ ವಿಚಾರಣೆ ಎದುರಿಸುತ್ತಿದ್ದಾರೆ ಎಂದರು.

ಗೋರಕ್ಷಣೆ ಹೆಸರಲ್ಲಿ ನಡೆಯುತ್ತಿರುವ ಹಿಂಸಾಚಾರ ನಿಯಂತ್ರಣಾ ಕ್ರಮಗಳನ್ನು ಕೈಗೊಳ್ಳಲು ಎಲ್ಲ ರಾಜ್ಯ ಸರಕಾರಗಳಿಗೆ ನಿರ್ದೇಶನ ನೀಡುವುದು ಸೇರಿದಂತೆ ವಿವಿಧ ಪರಿಹಾರಗಳನ್ನು ನೀಡುವಂತೆ ಕೋರಿ ಮಹಾತ್ಮಾ ಗಾಂಧಿ ಅವರ ಮೊಮ್ಮಗ ತುಷಾರ್ ಗಾಂಧಿ ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ದಾವೆ ಸಲ್ಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News