×
Ad

ಗೋರಕ್ಷಣೆ ಹೆಸರಿನ ಹಿಂಸಾಚಾರ: ಸಂತ್ರಸ್ತರಿಗೆ ಪರಿಹಾರ ನೀಡುವುದು ರಾಜ್ಯ ಸರಕಾರಗಳ ಬಾಧ್ಯತೆ

Update: 2017-09-22 21:30 IST

ಹೊಸದಿಲ್ಲಿ, ಸೆ. 22: ಗೋರಕ್ಷಣೆ ನೆಪದಲ್ಲಿ ನಡೆಯುವ ಹಿಂಸಾಚಾರ ಪ್ರಕರಣಗಳ ಸಂತ್ರಸ್ತರಿಗೆ ಪರಿಹಾರ ನೀಡಲು ರಾಜ್ಯಗಳು ಭಾದ್ಯತೆ ಹೊಂದಿವೆ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಅಭಿಪ್ರಾಯ ವ್ಯಕ್ತಪಡಿಸಿದೆ.

ಸಂತ್ರಸ್ತರಿಗೆ ಪರಿಹಾರ ನೀಡಲು ಯೋಜನೆ ಹೊಂದುವುದು ರಾಜ್ಯ ಸರಕಾರದ ಬಾಧ್ಯತೆ ಹಾಗೂ ಅಂತಹ ಯೋಜನೆ ಹೊಂದಿರದ್ದರೆ, ಅದನ್ನು ರೂಪಿಸಬೇಕು ಎಂದು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಪೀಠ ಹೇಳಿದೆ.

ದೂರುದಾರರಲ್ಲಿ ಓರ್ವರ ಪರವಾಗಿ ನ್ಯಾಯಾಲಯಕ್ಕೆ ಹಾಜರಾದ ಹಿರಿಯ ವಕೀಲ ಇಂದಿರಾ ಜೈಸಿಂಗ್, ಗೋರಕ್ಷಕ ಗುಂಪಿನ ಹಿಂಸಾಚಾರದ ಸಂತ್ರಸ್ತರಿಗೆ ಪರಿಹಾರ ನೀಡಲು ಆದೇಶಿಸುವಂತೆ ಹಾಗೂ ಗೋರಕ್ಷಣೆ ನೆಪದಲ್ಲಿ ನಡೆಸುತ್ತಿರುವ ಹಿಂಸಾಚಾರ ತಡೆಯಲು ರಾಷ್ಟ್ರೀಯ ನೀತಿ ರೂಪಿಸುವಂತೆ ಸುಪ್ರೀಂ ಕೋರ್ಟ್‌ನಲ್ಲಿ ಮನವಿ ಮಾಡಿದರು.

ಇಂತಹ ಹಿಂಸಾಚಾರಗಳ ಸಂತ್ರಸ್ತರಿಗೆ ಪರಿಹಾರ ಧನ ನೀಡುವಂತೆ ಹಲವು ತೀರ್ಪು ಹೊರಬಂದಿದೆ. ದುರಾದೃಷ್ಟವೆಂದರೆ ಸಂತ್ರಸ್ತರು ಪರಿಹಾರ ಪಡೆದುಕೊಂಡಿಲ್ಲ. ಈ ಹಿನ್ನೆಲೆಯಲ್ಲಿ ಪರಿಹಾರ ನೀಡಲು ಯೋಜನೆ ರೂಪಿಸುವಂತೆ ಅವರು ವಿನಂತಿಸಿದರು.

ಇನ್ನೋರ್ವ ದೂರುದಾರರ ಪರವಾಗಿ ನ್ಯಾಯಾಲಯಕ್ಕೆ ಹಾಜರಾದ ಹಿರಿಯ ವಕೀಲ ಕಪಿಲ್ ಸಿಬಲ್, ಗೋರಕ್ಷಣೆಯ ನೆಪದಲ್ಲಿ ಹಿಂಸಾಚಾರಕ್ಕೆ ಸಂಚು ಹೂಡಿದವರು ಜಾಮೀನು ಪಡೆದಿದ್ದಾರೆ. ಆದರೆ, ಸಂತ್ರಸ್ತರು ಎಫ್‌ಐಆರ್ ಹಾಗೂ ವಿಚಾರಣೆ ಎದುರಿಸುತ್ತಿದ್ದಾರೆ ಎಂದರು.

ಗೋರಕ್ಷಣೆ ಹೆಸರಲ್ಲಿ ನಡೆಯುತ್ತಿರುವ ಹಿಂಸಾಚಾರ ನಿಯಂತ್ರಣಾ ಕ್ರಮಗಳನ್ನು ಕೈಗೊಳ್ಳಲು ಎಲ್ಲ ರಾಜ್ಯ ಸರಕಾರಗಳಿಗೆ ನಿರ್ದೇಶನ ನೀಡುವುದು ಸೇರಿದಂತೆ ವಿವಿಧ ಪರಿಹಾರಗಳನ್ನು ನೀಡುವಂತೆ ಕೋರಿ ಮಹಾತ್ಮಾ ಗಾಂಧಿ ಅವರ ಮೊಮ್ಮಗ ತುಷಾರ್ ಗಾಂಧಿ ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ದಾವೆ ಸಲ್ಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News