22 ರಾಜ್ಯಗಳಿಗೆ ಪಾಲನಾ ವರದಿ ಸಲ್ಲಿಸಲು ನಿರ್ದೇಶ

Update: 2017-09-22 16:40 GMT

ಹೊಸದಿಲ್ಲಿ, ಸೆ. 22: ಗೋರಕ್ಷಕರ ಗುಂಪುಗಳನ್ನು ನಿಗ್ರಹಿಸಲು ಕಟ್ಟುನಿಟ್ಟಿನ ವ್ಯವಸ್ಥೆಯೊಂದನ್ನು ರೂಪಿಸುವ ತನ್ನ ಆದೇಶವನ್ನು ಅನುಸರಿಸಿದ ಬಗ್ಗೆ ಪಾಲನಾ ವರದಿ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಶುಕ್ರವಾರ 22 ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ತಿಳಿಸಿದೆ. ಇದೇ ಸಂದರ್ಭ ಈ ಹೊಣೆಗಾರಿಕೆಯಿಂದ ಯಾರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಅದು ಹೇಳಿದೆ.

ಗೋರಕ್ಷಣೆ ಹೆಸರಲ್ಲಿ ನಡೆಯುವ ಹಿಂಸಾಚಾರ ತಡೆಯಲು ಕ್ರಮ ಕೈಗೊಳ್ಳುವಂತೆ ಹಾಗೂ ಇಂತಹ ಗೋರಕ್ಷಕರ ಗುಂಪುಗಳನ್ನು ಪರಿಶೀಲಿಸಲು ವಾರಗಳೊಳಗೆ ಪ್ರತಿ ಜಿಲ್ಲೆಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಯನ್ನು ನೋಡೆಲ್ ಅಧಿಕಾರಿಯಾಗಿ ನಿಯೋಜಿಸುವಂತೆ 7 ಕೇಂದ್ರಾಡಳಿತ ಪ್ರದೇಶ ಸೇರಿದಂತೆ 29 ರಾಜ್ಯಗಳಿಗೆ ಸುಪ್ರೀಂ ಕೋರ್ಟ್ ಸೆಪ್ಟಂಬರ್ 6ರಂದು ನಿರ್ದೇಶಿಸಿತ್ತು.

ಉತ್ತರಪ್ರದೇಶ, ಕರ್ನಾಟಕ, ಜಾರ್ಖಂಡ್, ರಾಜಸ್ತಾನ ಹಾಗೂ ಗುಜರಾತ್ ಪಾಲನಾ ವರದಿಯನ್ನು ಈಗಾಗಲೇ ಸಲ್ಲಿಸಿವೆ. ಬಿಹಾರ್ ಹಾಗೂ ಮಹಾರಾಷ್ಟ್ರ ಇಂದು ಸಲ್ಲಿಸಿವೆ ಎಂದು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಪೀಠ ಹೇಳಿದೆ.

ಉಳಿದ 22 ರಾಜ್ಯಗಳ ಪಾಲನಾ ವರದಿಯನ್ನು ಅಕ್ಟೋಬರ್ 13ರಂದು ಸಲ್ಲಿಸುವಂತೆ ನ್ಯಾಯವಾದಿಗಳಿಗೆ ನಿರ್ದೇಶಿಸಿದ ಪೀಠ, ತುಷಾರ್ ಗಾಂಧಿ ಅವರ ದಾಖಲಿಸಿದ ಪಿಐಎಲ್ ಸೇರಿದಂತೆ ಎಲ್ಲಾ ಸಾರ್ವಜನಿಕ ಹಿತಾಸಕ್ತಿ ದಾವೆಯ ವಿಚಾರಣೆಯನ್ನು ಅಕ್ಟೋಬರ್ 31ಕ್ಕೆ ನಿಗದಿಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News