ಅತ್ಯಾಚಾರಿಗಳಿಗೆ ಜಾಮೀನು ನೀಡಲು ಈ ಕೋರ್ಟ್ ಕೊಟ್ಟ ಕಾರಣ ಕೇಳಿದರೆ ನೀವು ಬೆಚ್ಚಿಬೀಳಬಹುದು...

Update: 2017-09-23 07:52 GMT

ಚಂಡೀಗಢ, ಸೆ. 23: ಅಪರೂಪದ ವಿದ್ಯಮಾನವೊಂದರಲ್ಲಿ ಸೋನಿಪತ್  ಒ.ಪಿ. ಜಿಂದಾಲ್ ಗ್ಲೋಬಲ್ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯೊಬ್ಬಳನ್ನು ಬ್ಲ್ಯಾಕ್ ಮೇಲ್ ಗೊಳಿಸಿ ಸಾಮೂಹಿಕ ಅತ್ಯಾಚಾರಗೈದ ಪ್ರಕರಣದಲ್ಲಿ ದೋಷಿಯೆಂದು ಸಾಬೀತಾದ ಮೂವರಿಗೆ ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ಜಾಮೀನು ನೀಡಿದೆ. ಸಂತ್ರಸ್ತೆಯ ಹೇಳಿಕೆಯಿಂದ ಆಕೆ ಕೂಡಾ "ಸ್ವೇಚಾಚ್ಛಾರದ ಪ್ರವೃತ್ತಿಯವಳು" ಎಂದು ತಿಳಿದು ಬಂದಿದೆ ಎಂದು ನ್ಯಾಯಾಲಯ ಹೇಳಿದೆ.

ತಮ್ಮನ್ನು ತಪ್ಪಿತಸ್ಥರು ಎಂದು ಘೋಷಿಸಿದ್ದ ಸೋನಿಪತ್ ನ್ಯಾಯಾಲಯದ ಆದೇಶದ ವಿರುದ್ಧ ಮೂವರೂ ಅಪೀಲು ಸಲ್ಲಿಸಿ ಅದು ವಿಚಾರಣೆಯಾಗುವ ತನಕ ಜಾಮೀನು ಜಾರಿಯಲ್ಲಿರುತ್ತದೆ ಎಂದು ಹೈಕೋರ್ಟ್ ಹೇಳಿದೆ. ಜಾಮೀನು ಪಡೆದವರನ್ನು ಹಾರ್ದಿಕ್ ಸಿಕ್ರಿ, ಕರಣ್ ಛಾಬ್ರಾ ಮತ್ತು ವಿಕಾಸ್ ಗರ್ಗ್ ಎಂದು ಗುರುತಿಸಲಾಗಿದೆ.

ಮೂವರನ್ನೂ ದಿಲ್ಲಿಯ ಎಐಐಎಂಎಸ್ ನಲ್ಲಿ ಕೌನ್ಸೆಲಿಂಗ್ ಗೆ ಒಳಪಡಿಸಬೇಕು ಹಾಗೂ ಅವರ ವರ್ತನೆಯನ್ನು ತಿದ್ದಲು ಶ್ರಮಿಸಬೇಕು ಎಂದೂ ಹೈಕೋರ್ಟ್ ಹೇಳಿದೆ. ಮೂವರೂ ಜತೆಯಾಗಿ ಸಂತ್ರಸ್ತೆಗೆ ರೂ 10 ಲಕ್ಷ ಪರಿಹಾರ ನೀಡಬೇಕೆಂದೂ ಹೈಕೋರ್ಟ್ ಹೇಳಿದೆ.

‘‘ಸಂತ್ರಸ್ತೆಯ ಪ್ರಕಾರ ಆತ (ಆರೋಪಿಗಳಲ್ಲೊಬ್ಬನಾದ ಹಾರ್ದಿಕ್) ತನ್ನ ನಗ್ನ ಚಿತ್ರಗಳನ್ನು ಕಳುಹಿಸಿ,  ತನಗೂ ನಗ್ನ ಚಿತ್ರಗಳನ್ನು ಕಳುಹಿಸುವಂತೆ ಆಕೆಯನ್ನು ಒತ್ತಾಯಿಸಿದ್ದ. ನಂತರ ಆತ ಆಕೆಗೆ ಸೆಕ್ಸ್ ಟಾಯ್ ಒಂದನ್ನು ಖರೀದಿಸಲು ಸೂಚಿಸಿದ್ದ ಹಾಗೂ ಆಕೆ ಅದನ್ನು ಒಪ್ಪಿದ್ದಳು ಇದು ಅವರ ಮನೋಸ್ಥಿತಿಯನ್ನು ಸೂಚಿಸುತ್ತದೆ,’’ ಎಂದು ಜಸ್ಟಿಸ್ ಮಹೇಶ್ ಗ್ರೋವರ್ ಹಾಗೂ ಜಸ್ಟಿಸ್ ರಾಜ್ ಶೇಖರ್ ಅತ್ರಿ ಅವರನ್ನೊಳಗೊಂಡ ಪೀಠ ತಿಳಿಸಿದೆ.

ಈ ವರ್ಷದ ಮಾರ್ಚ್ ತಿಂಗಳಲ್ಲಿ ಸೋನಿಪತ್ ನ ನ್ಯಾಯಾಲಯವೊಂದು ಹಾರ್ದಿಕ್ ಮತ್ತು ಕರಣ್ ಗೆ 20 ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತಲ್ಲದೆ, ವಿಕಾಸ್ ಗೆ ಏಳು ವರ್ಷ ಶಿಕ್ಷೆ ವಿಧಿಸಿತ್ತು. ಮೂವರೂ ವಿದ್ಯಾರ್ಥಿನಿಯನ್ನು ಎರಡು ವರ್ಷಗಳ ಕಾಲ ಬ್ಲ್ಯಾಕ್ ಮೇಲ್ ಗೊಳಿಸಿ ಸಾಮೂಹಿಕ ಅತ್ಯಾಚಾರಗೈದಿದ್ದರು ಎಂಬ ಆರೋಪವೂ ಅವರ ಮೇಲಿತ್ತು.

ಈ ಘಟನೆಯ ಸಂಬಂಧ ವಿದ್ಯಾರ್ಥಿನಿ ವಿಶ್ವವಿದ್ಯಾಲಯ ಆಡಳಿತಕ್ಕೆ ಎಪ್ರಿಲ್ 11, 2015ರಂದು ದೂರಿದ್ದಳು. ಮೂವರು ಆರೋಪಿಗಳೂ ಅಂತಿಮ ವರ್ಷದ ಕಾನೂನು ವಿದ್ಯಾರ್ಥಿಗಳಾಗಿದ್ದರಲ್ಲದೆ ಆಕೆಯನ್ನು 2013ರಿಂದ ಶೋಷಿಸುತ್ತಿದ್ದರು ಎಂದು ಆಕೆ ದೂರಿದ್ದಳು.

ಆಕೆಯ ಅಶ್ಲೀಲ ಚಿತ್ರಗಳು ಅವರ ಬಳಿಯಿದ್ದುದರಿಂದ ಅವುಗಳನ್ನು ಬಹಿರಂಗಗೊಳಿಸುವುದಾಗಿ ಬೆದರಿಸಿ ಅವರು ಆಕೆಯ ಜತೆ ದೈಹಿಕ ಸಂಬಂಧ ಬೆಳೆಸು ತ್ತಿದ್ದರು ಎಂದು ಆಕೆ ಆರೋಪಿಸಿದ್ದಳು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News